Advertisement

ಅಂಡಮಾನ್‌ನಲ್ಲಿ ಸಿಲುಕಿದ್ದ 47 ಕನ್ನಡಿಗರ ರಕ್ಷಣೆ

11:20 PM May 04, 2019 | Lakshmi GovindaRaj |

ಬೆಂಗಳೂರು: ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಪ್ರದೇಶಗಳಿಗೆ ಪ್ರವಾಸಕ್ಕೆ ತೆರಳಿದ್ದ 47 ಕನ್ನಡಿಗರು ಹವಾಮಾನ ವೈಪರೀತ್ಯದಿಂದ ಸೂಕ್ತ ಸಮಯಕ್ಕೆ ವಿಮಾನ ಲಭ್ಯವಾಗದೆ ಪೋರ್ಟ್‌ಬ್ಲೇರ್‌ನ ಸಾವರ್ಕರ್‌ ವಿಮಾನ ನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು. ಸಿಎಂ ಮಧ್ಯಪ್ರವೇಶದಿಂದ ಸಮಸ್ಯೆ ಬಗೆಹರಿದಿದೆ.

Advertisement

“ಫೋನಿ’ ಚಂಡಮಾರುತ ಕಾರಣ ಪೋರ್ಟ್‌ಬ್ಲೇರ್‌ನ ಸಾವರ್ಕರ್‌ ವಿಮಾನ ನಿಲ್ದಾಣದಿಂದ ಕೊಲ್ಕತ್ತಾಗೆ ತೆರಳುವ ವಿಮಾನಗಳು ಒಂದು ದಿನದ ಮಟ್ಟಿಗೆ ರದ್ದಾಗಿವೆ. ಮೇ 5ರಿಂದ ಎಂದಿನಂತೆ ವಿಮಾನ ಹಾರಾಟವಿದ್ದರೂ, ಆ ದಿನ ಬುಕ್ಕಿಂಗ್‌ ಮಾಡಿದ್ದ ಪ್ರಯಾಣಿಕರಿಗೆ ಪರ್ಯಾಯವಾಗಿ ಯಾವುದೇ ಬುಕ್ಕಿಂಗ್‌ ಮಾಡಿಕೊಡದೆ ಮುಂದಿನ ಗುರುವಾರದವರೆಗೂ ಕಾಯಬೇಕು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ, ಹೆಚ್ಚಿನ ಹಣ ನೀಡಿದವರಿಗೆ ಮಾತ್ರ ತುರ್ತು ಸೀಟ್‌ ಬುಕ್ಕಿಂಗ್‌ ಮಾಡಿಕೊಡಲಾಗುತ್ತಿದೆ. ಈ ಕುರಿತು ವಿಚಾರಣೆ ನಡೆಸಿದರೆ 20 ರಿಂದ 25 ಸಾವಿರ ಹಣದ ಬೇಡಿಕೆ ಇಟ್ಟಿದ್ದಾರೆ. ಇದರಿಂದಾಗಿ ಪ್ರವಾಸ ತೆರಳಿದ್ದ ಈ 47 ಜನರ ತಂಡವು ಆರ್ಥಿಕ ಸಮಸ್ಯೆಯಿಂದ ಬಳಲಿದ್ದು, ಇತ್ತ ಹೆಚ್ಚು ಹಣವನ್ನು ನೀಡಲಾಗದೆ, ಅಲ್ಲಿಯೂ ಉಳಿದುಕೊಳ್ಳಲಾಗದೆ ಪರದಾಟ ನಡೆಸುತ್ತಿದೆ ಎಂದು ಸಂತ್ರಸ್ತ ಪ್ರಯಾಣಿಕರು “ಉದಯವಾಣಿ’ಗೆ ತಿಳಿಸಿದ್ದಾರೆ.

ಕರ್ನಾಟಕ ಮೂಲದ 47 ಜನರ ತಂಡ ತಾವರಕೆರೆಯ ಭರತ್‌ ಟ್ರಾವೆಲ್ಸ್‌ ಕಡೆಯಿಂದ ಏ.29ರಂದು ಅಂಡಮಾನ್‌ ಮತ್ತು ನಿಕೋಬಾರ್‌ ಪ್ರವಾಸಕ್ಕೆ ತೆರಳಿತ್ತು. ಪ್ರವಾಸ ಮುಗಿಸಿ ಕೊಲ್ಕತ್ತಾ ಮೂಲಕ ಬೆಂಗಳೂರಿಗೆ ಹಿಂದಿರುಗಲು ಮೇ4 ರಂದು ಮಧ್ಯಾಹ್ನ 3ಕ್ಕೆ ವಿಮಾನ ನಿಗದಿಯಾಗಿತ್ತು.

ಆದರೆ, ಪೋನಿ ಚಂಡಮಾರುತದಿಂದಾಗಿ ಪೋರ್ಟ್‌ಬ್ಲೇರ್‌ನಿಂದ ಕೋಲ್ಕತ್ತಾಗೆ ತೆರಳುವ ಎಲ್ಲಾ ವಿಮಾನಗಳನ್ನು ಮೇ 4ರಂದು ರದ್ದು ಮಾಡಲಾಗಿದೆ. ಹೀಗಾಗಿ, ಮೇ 3ರ ಮಧ್ಯರಾತ್ರಿ ವಿಮಾನ ರದ್ದಾಗಿರುವ ಕುರಿತು ಸಂದೇಶವನ್ನು ಸ್ಪೈಸ್‌ಜೆಟ್‌ ಕಂಪನಿ ಕಡೆಯಿಂದ ನೀಡಲಾಗಿದೆ. ಪರಿಣಾಮ ಅನಿವಾರ್ಯವಾಗಿ ಅಲ್ಲಿಯೇ ಬೆಂಗಳೂರಿನಿಂದ ತೆರಳಿದ್ದ ಈ ತಂಡ ಉಳಿಯುವಂತಾಗಿದೆ.

Advertisement

ಈ ಕುರಿತು ಪ್ರವಾಸಿಗರ ತಂಡದಲ್ಲಿದ್ದ ಮೂಡಿಗೆರೆ ಸಿವಿಲ್‌ ನ್ಯಾಯಾಧೀಶರಾದ ಶಶಿಕಲಾ ಅವರು ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದು, ರಾಜ್ಯ ಮುಖ್ಯಕಾರ್ಯದರ್ಶಿಗಳು ವಿಶೇಷ ವಿಮಾನದ ವ್ಯವಸ್ಥೆ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಶಶಿಕಲಾ, ಪೋರ್ಟ್‌ಬ್ಲೇರ್‌ನಲ್ಲಿ ಮಳೆಯೂ ಹೆಚ್ಚಿದ್ದು, ಸದ್ಯ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇವೆ.

ರದ್ದಾಗಿದ್ದ ವಿಮಾನಕ್ಕೆ ಪರ್ಯಾಯ ಬುಕ್ಕಿಂಗ್‌ ನೀಡುವ ಬದಲು ಹೆಚ್ಚು ಹಣ ಕೇಳಿ ದೌರ್ಜನ್ಯ ನಡೆಸುತ್ತಿದ್ದಾರೆ. ಪ್ರವಾಸಿಗರಿಗೆ ಆರ್ಥಿಕ ಸಮಸ್ಯೆ ಇದ್ದು, ಎಲ್ಲರಿಗೂ ದುಪ್ಟಟ್ಟು ಹಣ ನೀಡಲು ಸಾಧ್ಯವಿಲ್ಲ. ಇನ್ನು ಸ್ಪೈಸ್‌ಜೆಟ್‌ ಕಂಪನಿ ಗುರುವಾರ ಬುಕ್ಕಿಂಗ್‌ ನೀಡಿದರೆ ಅಲ್ಲಿಯವರೆಗೂ ನಮ್ಮ ತಂಡ ಎಲ್ಲಿ ಉಳಿಯಬೇಕು. ಇಲ್ಲಿನ ಹೋಟೆಲ್‌ಗ‌ಳಲ್ಲಿ ಒಂದು ದಿನ ತಂಗಲು ಕನಿಷ್ಠ 2000 ರೂ.ಇದೆ. ಒಂದು ಹೊತ್ತಿನ ಊಟಕ್ಕೆ 300 ರೂ.ಇದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಅನುಕೂಲ ಕಲ್ಪಿಸಿದ ಸಿಎಂ: ಈ ಮಧ್ಯೆ, ಪ್ರವಾಸದಲ್ಲಿದ್ದ ಮೂಡಿಗೆರೆಯ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಶಶಿಕಲಾ ಅವರು ತಮ್ಮ ಸಮಸ್ಯೆಯನ್ನು ದೂರವಾಣಿ ಮೂಲಕ ಮುಖ್ಯಮಂತ್ರಿ ಕಚೇರಿಯ ಗಮನಕ್ಕೆ ತಂದಿದ್ದರು.

ಕೂಡಲೇ ಮುಖ್ಯಮಂತ್ರಿಯವರು ಮುಖ್ಯ ಕಾರ್ಯದರ್ಶಿ ಹಾಗೂ ದೆಹಲಿಯಲ್ಲಿರುವ ನಿವಾಸಿ ಆಯುಕ್ತರಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡಿದ ದೆಹಲಿಯ ನಿವಾಸಿ ಆಯುಕ್ತರು ಸಮಸ್ಯೆ ಬಗೆಹರಿಸಿದ್ದಾರೆ. ಭಾನುವಾರ ಬೆಳಗ್ಗೆ ವಿಮಾನದಲ್ಲಿ ಬೆಂಗಳೂರಿಗೆ ಹಿಂತಿರುಗಲು ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next