ಬೀದರ್: ಉದಗೀರನಿಂದ ಜಹೀರಾಬಾದ ಕಡೆಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ 10 ಎಮ್ಮೆ ಹಾಗೂ ಏಳು ಎತ್ತುಗಳು ಸೇರಿದಂತೆ ಒಟ್ಟು 17 ಜಾನುವಾರುಗಳನ್ನು ಕಮಲನಗರ ಪೊಲೀಸರು ಗುರುವಾರ ಸಂರಕ್ಷಿಸಿದ್ದಾರೆ.
ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸ್ ಇಲಾಖೆ ಹಾಗೂ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳ ತಂಡವು ಕಾರ್ಯಾಚರಣೆಗೆ ಇಳಿದು, ಉದಗೀರ ಕಡೆಯಿಂದ ಬರುತ್ತಿದ್ದ ಟೆಂಪೋವನ್ನು ಪರಿಶೀಲಿಸಿದಾಗ, ಎಮ್ಮೆ ಹಾಗೂ ಎತ್ತುಗಳು ಪತ್ತೆಯಾಗಿವೆ. ಆರೋಪಿಗಳ ಬಳಿ ಸರ್ಕಾರದಿಂದ ಪಡೆದ ಯಾವುದೇ ಪರವಾನಿಗೆ ಪತ್ರ ಇರಲಿಲ್ಲ. ಜಾನುವಾರುಗಳನ್ನು ಹಿಂಸಾತ್ಮಕವಾಗಿ ವಧೆ ಮಾಡುವ ಉದ್ದೇಶದಿಂದ ಉದಗೀರ ಕಡೆಯಿಂದ ಜಹೀರಾಬಾದ್ ಗೆ ಅನಧಿಕೃತವಾಗಿ ಸಾಗಣೆ ಮಾಡುತ್ತಿರುವುದು ತಿಳಿದುಬಂದಿದೆ. ಈ ಕುರಿತು ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಲಾಗಿದೆ.
ಕಮಲನಗರ ಪೊಲೀಸ್ ಠಾಣೆಯ ಪಿಎಸ್‌ಐ ನಂದಿನಿ, ಪೊಲೀಸ್ ಸಿಬ್ಬಂದಿ ಗುರುನಾಥ, ವಸಂತ, ಪಶು ವೈದ್ಯಾಧಿಕಾರಿ ಅನೀಲ ವಾಘಮಾರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಅವರು ಜಾನುವಾರು ಸಂರಕ್ಷಣೆಯ ಹಿತದೃಷ್ಟಿಯಿಂದ ರಾಜ್ಯದಲ್ಲಿ ಜಾರಿಗೆ ತಂದಿರುವ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿರಂತರ ಶ್ರಮಿಸುತ್ತಿದ್ದಾರೆ. ಪಶು ಸಂಗೋಪನೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು. ಜಾನುವಾರುಗಳ ಅಕ್ರಮ ಸಾಗಾಣಿಕೆ ಹಾಗೂ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ತಡೆಯುವ ದಿಶೆಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕೆಂದು ನಿರ್ದೇಶನ ನೀಡಿದ್ದರು. ಅಧಿಕಾರಿಗಳ ತಂಡವು 17 ಜಾನುವಾರುಗಳನ್ನು ಸಂರಕ್ಷಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗೋವುಗಳ ಅಕ್ರಮ ಸಾಗಣೆ ಮತ್ತು ಜಾನುವಾರುಗಳ ಮಾಂಸ ಮಾರಾಟ ಮಾಡುವುದು ಗಮನಕ್ಕೆ ಬಂದರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆ ಅಥವಾ ಜಾನುವಾರು ಸಹಾಯವಾಣಿಗೆ ದೂರು ನೀಡಿ ಗೋವುಗಳ ರಕ್ಷಣೆಗೆ ಸಹಕರಿಸಬೇಕು. ಕಾನೂನನ್ನು ಕೈಗೆತ್ತಿಕೊಳ್ಳದೆ ಪೊಲೀಸರ ಸಹಾಯದಿಂದ ರಕ್ಷಣೆಗೆ ಮುಂದಾಗಬೇಕು ಎಂದು ಸಚಿವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.