Advertisement

ತೆಲಂಗಾಣದಿಂದ ಕರೆತಂದಿದ್ದ 11 ಜೀತದಾಳುಗಳ ರಕ್ಷಣೆ

05:42 PM Aug 21, 2019 | Suhan S |

ಮುಳಬಾಗಿಲು: ಉಪಗುತ್ತಿಗೆದಾರನೊಬ್ಬ ತೆಲಂಗಾಣದ ಮೆಹಬೂಬನಗರದಿಂದ 11 ಜನರನ್ನು ಜೀತಕ್ಕೆ ಕರೆತಂದು ತಾಲೂಕಿನ ಸರ್ಕಾರಿ ಪದವಿ ವಸತಿ ಕಾಲೇಜು ಕಟ್ಟಡ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದು, ತಹಶೀಲ್ದಾರ್‌ ಬಿ.ಎನ್‌.ಪ್ರವೀಣ್‌ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, ಎಸಿ ಸೋಮಶೇಖರ್‌ ಸಮ್ಮುಖದಲ್ಲಿ ಬಿಡುಗಡೆ ಮಾಡಿಸಿತು.

Advertisement

ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದ ಬಳಿ ಸರ್ಕಾರ ಪದವಿ ವಸತಿ ಕಾಲೇಜು ಕಟ್ಟಡ ನಿರ್ಮಾಣ ಕಾರ್ಯವನ್ನು ಆಂಧ್ರ ಮೂಲದ ಉಪಗುತ್ತಿಗೆದಾರ ರಾಮಾನಾಯ್ಕ, ವೆಂಕಟ್ನಾಯ್ಕ ಗುತ್ತಿಗೆ ಪಡೆದಿದ್ದರು. ಮಹಬೂಬ್‌ನಗರದ ನಾಯಕ ಜನಾಂಗಕ್ಕೆ ಸೇರಿದ ಅಪ್ರಾಪ್ತರು ಒಳಗೊಂಡ 11 ಜನರಿದ್ದ 3 ಕುಟುಂಬಗಳನ್ನು ತಲಾ 60 ಸಾವಿರ ರೂ.ನಂತೆ 3 ವರ್ಷಗಳಿಂದ ಆಂಧ್ರ, ತಮಿಳುನಾಡು, ಕರ್ನಾಟಕ, ಮುಂತಾದ ಸ್ಥಳಗಳಲ್ಲಿ ದುಡಿಸಿ ಕೊಳ್ಳುತ್ತಿದ್ದರು. ತಿಂಗಳಿಗೆ ಸಾವಿರ ರೂ. ನೀಡಿ ಜೀತಕ್ಕೆ ಇಟ್ಟುಕೊಂಡಿದ್ದರು ಎಂಬ ಮಾಹಿತಿ ಆಂಧ್ರದ ಜೀತ ಪದ್ಧತಿ ನಿರ್ಮೂಲನಾ (ಐಜೆಎಂ) ಎನ್‌ಜಿಒ, ಬೆಂಗಳೂರಿನ ಮುಕ್ತಿ ಒಕ್ಕೂಟ ಬೃಂದಾ ಅಡುಗೆ ಅವರಿಗೆ ನೀಡಿತ್ತು.

ಕಾರ್ಮಿಕರ ವಿಚಾರಣೆ: ಅದರಂತೆ ಕಾರ್ಯ ಪ್ರವೃತ್ತರಾದ ಬೆಂಗಳೂರಿನ ಮುಕ್ತಿ ಒಕ್ಕೂಟ, ಕಂದಾಯ, ಪೊಲೀಸ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿತ್ತು. ಅದರಂತೆ ಮಂಗಳವಾರ ಸಂಜೆ ಎಲ್ಲಾ ಇಲಾಖೆಗಳ ಅಧಿಕಾರಿಗಳ ತಂಡ ತಹಶೀಲ್ದಾರ್‌ ಬಿ.ಎನ್‌.ಪ್ರವೀಣ್‌ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ತಲ್ಲೀನರಾಗಿದ್ದ ಕಾರ್ಮಿಕರನ್ನು ವಿಚಾರಣೆ ಮಾಡಿದರು.

ಅಳಲು ತೋಡಿಕೊಂಡ ಮಹಿಳೆ: ಗುತ್ತಿಗೆದಾರರು ನಮಗೆ ಕೆಲಸ ನೀಡುವುದಾಗಿ ತಿಳಿಸಿ, ಪರಿಚಯ ವಿಲ್ಲದ ಪ್ರದೇಶಗಳಿಗೆ ಕರೆತಂದು ಸರಿಯಾಗಿ ಊಟ ಉಪಚಾರವಿಲ್ಲದೆ ಉಳಿಯುವುದಕ್ಕೆ ವಸತಿ ಇಲ್ಲದೆ, ದುಡಿಯುತ್ತಿದ್ದೇವೆ ಎಂದು ಕಾರ್ಮಿಕ ಮಹಿಳೆ ಸತ್ಯಮ್ಮ ಅಧಿಕಾರಿಗಳ ಬಳಿ ತನ್ನ ಅಳಲು ತೋಡಿಕೊಂಡರು.

ಜೀತದಾಳುಗಳು ತವರಿಗೆ: ಈಗಾಗಲೇ 11 ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಇವರ ಬಗ್ಗೆ ಮುಂಜಾಗ್ರತೆ ವಹಿಸಲು ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಿರುತ್ತೇವೆ ಎಂದು ತಹಶೀಲ್ದಾರ್‌ ಬಿ.ಎನ್‌.ಪ್ರವೀಣ್‌ ತಿಳಿಸಿದರು. ಪ್ರಕರಣ ದಾಖಲಿಸಿಕೊಂಡ ನಂತರ ವಶಕ್ಕೆ ಪಡೆದ ಎಲ್ಲ ಜೀತದಾಳುಗಳನ್ನು ಎಸಿ ಸೋಮಶೇಖರ್‌ ಮುಂದೆ ಹಾಜರು ಪಡಿಸಿ, ಜೀತದಿಂದ ವಿಮುಕ್ತಿಗೊಳಿಸಿ ಅವರ ತವರಿಗೆ ಕಳುಹಿಸಿಕೊಟ್ಟರು. ಪಿಎಸ್‌ಐ ಕೆ.ವಿ.ಶ್ರೀಧರ್‌, ಬೆಂಗಳೂರು ಮುಕ್ತಿ ಒಕ್ಕೂಟ, ಬೃಂದಾ ಅಡುಗೆ, ಐಕ್ಯಮತ್ಯ ಒಕ್ಕೂಟ, ಎನ್‌ಎಎಸ್ಸಿ ಡಾ.ಕೃಷ್ಣನ್‌, ರಾಜಸ್ವ ನಿರೀಕ್ಷಕ ಸುಬ್ರಮಣ್ಯಂ, ಆರ್‌.ಬಲರಾಮಕೃಷ್ಣ, ಕಾರ್ಮಿಕ ಉಪ ನಿರೀಕ್ಷಕ ಲೋಕೇಶ್‌, ಕೋಲಾರ ಮಹಿಳಾ ಮತ್ತು ಮಕ್ಕಳ ಇಲಾಖೆ ನಂದನ, ಪೇದೆ ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next