Advertisement

ಬೇಸಿಗೆಯ ಒಣಗಾಳಿಯಿಂದ ರಕ್ಷಣೆ

05:08 PM May 08, 2017 | Harsha Rao |

ಮುಂಗಾರು ಗಾಳಿ ಸ್ಥಿರಗೊಂಡು ಬಿರುಸಿನ ಮಳೆ ಸುರಿಸುವವರೆಗೂ ಪೂರ್ವ ಹಾಗೂ ಉತ್ತರದಿಂದ ಗಾಳಿ ಬೀಸುತ್ತಲೇ ಇರುತ್ತದೆ.  ಮುಂಗಾರು ಮಳೆ ಶುರುವಾದ ನಂತರ ಸೂರ್ಯನ ಕಿರಣಗಳು ಏರು ಕೋನದಲ್ಲಿದ್ದರೂ, ಮಳೆಯ ಮೋಡಗಳು ಗಾಢವಾಗಿ ಕವಿದಿರುವುದರಿಂದಲೂ, ಭೂಮಿ ತೋಯ್ದು ತಂಪಾಗಿರುವುದರಿಂದಲೂ ನಮಗೆ ಈ ಅವಧಿಯಲ್ಲಿ ಶಾಖದ ಅನುಭವ ಆಗುವುದಿಲ್ಲ. ಹಾಗಾಗಿ ನಾವು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಇರುವವರು ಪೂರ್ವ ಹಾಗೂ ಉತ್ತರದಿಂದ ಬೀಸುವ ಗಾಳಿಯ ಲಾಭ ಪಡೆದುಕೊಂಡು ತಂಪಾಗಿರಬೇಕಾಗುತ್ತದೆ. ಈಶಾನ್ಯದಿಂದ ಬೀಸುವ ಗಾಳಿ ಒಣ ಹಾಗೂ ಧೂಳಿನಿಂದ ಕೂಡಿದ್ದಾಗಿರುವ ಕಾರಣ, ಚಳಿಗಾಲದಲ್ಲಿ ಶುರುವಾಗುವ ಒಣ ಚರ್ಮದ ಅನುಭವ ಮುಂಗಾರಿನ ಮಳೆ ಶುರುವಾಗುವವರೆಗೂ ಮುಂದುವರೆಯುತ್ತದೆ. ಧೂಳಿನಿಂದ ಕೂಡಿದ ಒಣ ಗಾಳಿ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲವಾದ ಕಾರಣ, ಅದನ್ನು ಸೂಕ್ತರೀತಿಯಲ್ಲಿ ಮಾರ್ಪಾಡಿಸಿ ಮನೆಯೊಳಗೆ ಬಿಟ್ಟುಕೊಳ್ಳುವುದು ಒಳ್ಳೆಯದು. ಬೇಸಿಗೆಯ ಸೆಖೆ ತಾಳಲಾರದೆ, ಒಣ ಹಾಗೂ ಧೂಳಿನಿಂದ ಕೂಡಿದ ಈಶಾನ್ಯಗಾಳಿಗೆ ಮೈತೆರೆದು ಮಲಗುವುದು ಅಷ್ಟೊಂದು ಆರೋಗ್ಯಕರವಲ್ಲ.

Advertisement

ಒಣ ಗಾಳಿಯ ಹರಿನಿಂದ ದೂರವಿರುವ ಬಗ್ಗೆ
ಮನೆಯ ವಿನ್ಯಾಸ ಮಾಡುವಾಗ, ನಮ್ಮ ಮಂಚ ಕಿಟಕಿಯ ಮುಂದೆ ನೇರವಾಗಿ ತಾಗಿದಂತೆ ಇರದಂತೆ ನೋಡಿಕೊಳ್ಳಬೇಕು. ನಮ್ಮ ತಲೆಯ ಹಿಂದೆಯೇ ಈ ಅವಧಿಯ ಒಣಗಾಳಿ ಪದೇ ಪದೇ ಹಾಯುತ್ತಿದ್ದರೆ, ನಮ್ಮ ಶ್ವಾಸನಾಳಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ಕೆಮ್ಮು ಇತ್ಯಾದಿ ಹೆಚ್ಚಬಹುದು. ಕಿಟಕಿಗಳು ನಮ್ಮ ಮಂಚದ ಅಕ್ಕ, ಪಕ್ಕ ಹಾಗೂ ಪಕ್ಕದ ಗೋಡೆಯಲ್ಲಿ, ಮಂಚದ ಎದುರಿನ ಮೂಲೆಗೆ ತಾಗಿದಂತಿದ್ದರೆ ಉತ್ತಮ. ಆಗ ಗಾಳಿ ನೇರವಾಗಿ ನಮ್ಮ ತಲೆಯ ಮೇಲೆ ಹಾಯದೆ, ದೇಹದ ಕೆಳಭಾಗದ ಕಡೆಗೇ ಹರಿದು ಹೋಗುತ್ತದೆ.

ಇತ್ತೀಚಿನ ದಿನಗಳಲ್ಲಿ ನಾವು ದಿನದ ಕೆಲವಾರು ಗಂಟೆಗಳನ್ನು ಕಳೆಯುವುದು ಲಿವಿಂಗ್‌ ರೂಮಿನಲ್ಲಿ. ಇಲ್ಲಿಯೂ ಕೂಡ ನಾವು ಕೂರುವ ಸ್ಥಳ ಕಿಟಕಿಗಳಿಗೆ ನೇರವಾಗಿ ತಾಗಿದಂತೆ ಇರದೆ, ಅಡ್ಡಕ್ಕೆ ಇದ್ದರೆ ಉತ್ತಮ. ಜೊತೆಗೆ ಕಿಟಕಿಗಳನ್ನು “ಬೇಂಡೋ’ ಮಾದರಿಯಲ್ಲಿ ಹೊರಗೆ ಉಬ್ಬಿರುವ ಹಾಗೆ ವಿನ್ಯಾಸ ಮಾಡಿ. ಇಲ್ಲಿ ನಾಲ್ಕಾರು ಒಳಾಂಗಣದಲ್ಲಿ ಇಡಬಹುದಾದ ಗಿಡಗಳನ್ನು ಪಾಟ್‌ಗಳಲ್ಲಿ ಇಟ್ಟರೆ, ಇವು ಸಾಕಷ್ಟು ತೇವಾಂಶವನ್ನು ಒಳಗೆ ಹರಿಯುವಂತೆ ಮಾಡುತ್ತದೆ. ಅಲ್ಲದೆ ಗಾಳಿಯಲ್ಲಿನ ಧೂಳನ್ನೂ ಕೂಡ ಸಾಕಷ್ಟು ಮಟ್ಟಕ್ಕೆ ಸೆಳೆದು ಹೀರಿಕೊಳ್ಳುವಂತೆ ಮಾಡಬಹುದು! ಬೇಂಡೋಗಳ ಮತ್ತೂಂದು ಉಪಯುಕ್ತತೆ ಏನೆಂದರೆ, ಮನೆಯ ಹೊರಗಿನ ತೆರೆದ ಸ್ಥಳದಲ್ಲಿ ನಾಲ್ಕಾರು ಗಿಡಗಳನ್ನು ಬೆಳೆಸಿದರೆ, ಅದರಲ್ಲೂ ಸಣ್ಣದೊಂದು ಹಸಿರು ಹಾಸು ಸಿದ್ಧ ಪಡಿಸಿದರೆ, ಸಾಕಷ್ಟು ಧೂಳನ್ನು ತಡೆಯಬಹುದು. ಹಾಗೆಯೇ, ದಿನಕ್ಕೆ ಒಮ್ಮೆಯಾದರೂ ಒಂದಷ್ಟು ನೀರು ಹಾಯಿಸಿದರೆ, ಒಳಾಂಗಣದ ಒಳಗೂ ಒಂದಷ್ಟು ತೇವಾಂಶ ಹರಿದುಬಂದ ಕಡೆಯಿಂದ ಬೀಸಿ ಬರುವ ಗಾಳಿ ಹೆಚ್ಚು ಆರೋಗ್ಯಕರವಾಗಿರುತ್ತದೆ.

ತಾರಸಿ ನಿರ್ವಹಣೆ
ಮನೆಯ ಬಹುಪಾಲು ತೆರೆದ ಸ್ಥಳ ತಾರಸಿಯೇ ಆಗಿರುವುದರಿಂದ, ಈ ಪ್ರದೇಶದಲ್ಲಿ ಧೂಳಿನಿಂದ ಕೂಡಿದ ಗಾಳಿ ಹಾಯ್ದು ಹೋಗುವಾಗ ಸಾಕಷ್ಟು ಧೂಳನ್ನು ಕೆಳಗಿಳಿಸಿ ಸಾಗುವುದುಂಟು. ಅನೇಕರು ಮನೆಯ ಮೇಲೆ ಹೋಗಲು ಮೆಟ್ಟಿಲುಗಳನ್ನು ಹಾಕದಿದ್ದರೆ, “ಎತ್ತರದ ಪ್ಯಾರಪೆಟ್‌ ಏಕೆ ಬೇಕು?’ ಎಂದು ಮೋಟುಗೋಡೆಯನ್ನು ಅಂದರೆ ಸುಮಾರು ಒಂಬತ್ತು ಇಂಚಿನಷ್ಟು ಮಾತ್ರ ಹಾಕಿ, ನಿರುನಿರೋಧಕ ಎಳೆಯುವುದೂ ಇದೆ. ಇಂಥ ಸಂದರ್ಭದಲ್ಲಿ, ತಾರಸಿಯ ಮೇಲೆ ಶೇಖರವಾಗುವ ಧೂಳು, ಸ್ವಲ್ಪ ಗಾಳಿ ಬೀಸಿದರೂ, ಎದ್ದು, ಸುತ್ತಲೂ ಹರಡಿ, ಕೆಳಗಿಳಿದು, ಮುಖ್ಯವಾಗಿ ಕಿಟಕಿ ಬಾಗಿಲುಗಳ ಮೂಲಕ ಮನೆಯನ್ನು ಪ್ರವೇಶಿಸುವುದುಂಟು. ಆದುದರಿಂದ, ಮನೆಯ ತಾರಸಿಗೆ ಹಾಕುವ ಪ್ಯಾರಾಪೆಟ್‌, ಕಡೇಪಕ್ಷ ಎರಡೂವರೆಯಿಂದ ಮೂರು ಅಡಿಗಳಷ್ಟು ಎತ್ತರ ಇದ್ದರೆ, ಧೂಳು ಶೇಖರವಾಗುವುದು ಕಡಿಮೆ ಆಗುತ್ತದೆ.  ಜೊತೆಗೆ ಗಾಳಿ ಬೀಸಿದಾಗ ಮೇಲೇಳುವ ಸಾಧ್ಯತೆಯೂ ಕಡಿಮೆ ಇರುತ್ತದೆ.

ತಾಪಮಾನ ಹಾಗೂ ತೇವಾಂಶ
ರಿಲೇಟಿವ್‌ ಹ್ಯುಮಿಡಿಟಿ- “ತಾಪಮಾನ ಸಂಬಂಧಿತ ತೇವಾಂಶ’ ಅಂದರೆ, ಆಯಾ ತಾಪಮಾನದಲ್ಲಿ ಗಾಳಿ ಹೊಂದಿರಬಹುದಾದ ಅತಿ ಹೆಚ್ಚು ತೇವಾಂಶಕ್ಕೂ ವಾಸ್ತವದಲ್ಲಿ ಇರುವ ತೇವಾಂಶಕ್ಕೂ ಪ್ರತಿಶತ ಲೆಕ್ಕದಲ್ಲಿ ಸೂಚಿಸುವಂತೆ ಮಾಪನ ಮಾಡಲಾಗುತ್ತದೆ. ತಾಪಮಾನ ಹೆಚ್ಚಿದಂತೆಲ್ಲ ಹೆಚ್ಚು ನೀರಿನ ಅಂಶವನ್ನು ವಾತಾವರಣ ಹೊಂದಲು ಅನುವಾಗುತ್ತದೆ. ಹಾಗೆಯೇ ತಾಪಮಾನ ಕಡಿಮೆ ಆದಂತೆಲ್ಲ, ತೇವಾಂಶ ಹೊರುವ ಗುಣವೂ ಕಡಿಮೆ ಆಗುತ್ತದೆ. ಈ ಲೆಕ್ಕಾಚಾರದಲ್ಲಿ ನಮ್ಮ ಮನೆಯ ಸೂರು ಹೆಚ್ಚು ಶಾಖವನ್ನು ಹೀರಿಕೊಂಡು ಒಳಾಂಗಣಕ್ಕೆ ಹರಿಸಿದಷ್ಟೂ ಮನೆಯ ಒಳಗಿನ ಗಾಳಿ ಹೆಚ್ಚು ಹೆಚ್ಚು ತೇವಾಂಶವನ್ನು ಬೇಡುತ್ತದೆ. ಬೇರೆಲ್ಲೂ ಸಿಗದಿದ್ದರೆ, ಈ ಬಿಸಿ ಹಾಗೂ ಒಣಗಾಳಿ ನಮ್ಮ ದೇಹದಿಂದಲೇ ತೇವಾಂಶವನ್ನು ಹೀರಿಬಿಡುತ್ತದೆ.  ಆದುದರಿಂದ, ಬಿಸಿಲು ಗಾಲದಲ್ಲಿ ಮನೆಯನ್ನು ತಂಪಾಗಿರಿಸಿಕೊಳ್ಳುವುದು ಒಳಾಂಗಣಕ್ಕೆ ತೇವಾಂಶವನ್ನು ಸೇರಿಸುವಷ್ಟೇ ಮುಖ್ಯವಾಗುತ್ತದೆ.

Advertisement

ಸಾಮಾನ್ಯವಾಗಿ ನಮ್ಮಲ್ಲಿ ಸೂರಿಗೆ ನೀರು ನಿರೋಧಕವಾಗಿ ಮಾತ್ರ ಜೇಡಿಮಣ್ಣಿನ ಬಿಲ್ಲೆಗಳನ್ನು ಹಾಕುವ ವಾಡಿಕೆ ಇದೆ. ಸೂರು ಸೋರದಿದ್ದರೆ ಕ್ಲೇ ಟೈಲ್ಸ್‌ ಹಾಕುವುದು ದುಬಾರಿ ಬಾಬ್ತು ಎಂದು ಕೈಬಿಡುವುದೂ ಉಂಟು. ಆದರೆ, ಈ ಜೇಡಿಮಣ್ಣಿನ ಬಿಲ್ಲೆಗಳಿಗೆ ಶಾಖನಿರೋಧಕ ಗುಣವೂ ಹೆಚ್ಚಿರುವುದರಿಂದ, ಬಿರುಬೇಸಿಗೆಯಲ್ಲೂ ನಮ್ಮ ಮನೆಯನ್ನು ತಂಪಾಗಿಸುವಲ್ಲಿ ಮುಖ್ಯ ಪಾತ್ರ ವಹಿಸಬಲ್ಲವು! ಮನೆ ತಂಪಾಗಿದ್ದರೆ, ರಿಲೆಟೀವ್‌ ಹ್ಯುಮಿಡಿಟಿಯೂ ಕಡಿಮೆ ಆಗುವ ಸಾಧ್ಯತೆ ಇಲ್ಲದೆ, ಒಳಾಂಗಣ ಹೆಚ್ಚು ಆರೋಗ್ಯಕರವಾಗುತ್ತದೆ. 

ಹ್ಯುಮಿಡಿಟಿ ಲೆಕ್ಕಾಚಾರ
ತಾಪಮಾನ ಆಧಾರಿತ ತೇವಾಂಶ ಕರಾವಳಿ ಪ್ರದೇಶ ಬಿಟ್ಟು ದಕ್ಷಿಣ ಭಾರತದ ಇತರೆಡೆ, ಬೇಸಿಗೆಯಲ್ಲಿ, ಸರಿಸುಮಾರು ಶೇ.20ರಷ್ಟು ಇರುತ್ತದೆ. ಆದರೆ ನಮ್ಮ ಆರೋಗ್ಯಕ್ಕೆ ಹೆಚ್ಚು ಸೂಕ್ತವಾದ ಪ್ರತಿ ಶತ ಐವತ್ತರಷ್ಟು ಇರುವುದಿಲ್ಲ. ಹಾಗಾಗಿ ನಮ್ಮ ಆರೋಗ್ಯದ ದೃಷ್ಟಿಯಿಂದ ನಮ್ಮ ಮನೆಯ ಒಳಾಂಗಣ ಹಾಗೆಯೇ ಸುತ್ತಮುತ್ತಲಿನ ವಾತಾವರಣ ಹೆಚ್ಚು ತಂಪಾಗಿದ್ದಷ್ಟೂ ರಿಲೆಟೀವ್‌ ಹ್ಯುಮಿಡಿಟಿ ಹೆಚ್ಚಾಗುತ್ತದೆ. ಅದೇ ರೀತಿಯಲ್ಲಿ, ನೇರವಾಗಿ ಗಿಡಗಳಿಗೆ ನೀರು ಸಿಂಪಡಿಸುವುದರಿಂದಲೂ, ನೀರು ಹಾಯಿಸುವುದರಿಂದಲೂ, ಹೆಚ್ಚು ಹಸಿರು ಬೆಳಸಲು ಅನುವಾಗುವ ರೀತಿಯಲ್ಲಿ ಮನೆಯ ವಿನ್ಯಾಸ ಮಾಡಿ. ಇದರಿಂದ ತೇವಾಂಶ ಹೆಚ್ಚಾಗಿ ಮನೆಯ ವಾತಾವರಣ ಆರೋಗ್ಯಕರವಾಗಿರುತ್ತದೆ.

ಹೆಚ್ಚಿನ ಮಾತಿಗೆ: 98441 32826

Advertisement

Udayavani is now on Telegram. Click here to join our channel and stay updated with the latest news.

Next