Advertisement
ಕಳೆದ ಆಗಸ್ಟ್‌ನಲ್ಲಿ ಪ್ರವಾಹ ಬಂದಿದ್ದ ಸಂದರ್ಭ ಗಡ್ಡಿಯಲ್ಲಿ 500ಕ್ಕೂ ಹೆಚ್ಚು ಟೆಕ್ಕಿಗಳು ಸಿಲುಕಿಕೊಂಡು ಸಮಸ್ಯೆ ಸೃಷ್ಟಿಯಾಗಿತ್ತು. ಹೀಗಾಗಿ ಜಿಲ್ಲಾಡಳಿತ ರೆಸಾರ್ಟ್ ಮಾಲಕರ ಮೇಲೆ ಪ್ರಕರಣ ದಾಖಲಿಸಿತ್ತು. ಸುಮಾರು ಎರಡು ತಿಂಗಳ ಕಾಲ ವಿರೂಪಾಪುರಗಡ್ಡಿ ಯಲ್ಲಿರುವ ರೆಸಾರ್ಟ್, ಹೊಟೇಲ್ ಸೇರಿ ಎಲ್ಲ ಅಂಗಡಿ-ಮುಂಗಟ್ಟುಗಳು ವ್ಯಾಪಾರ ಸ್ಥಗಿತಗೊಳಿಸಿ ದ್ದವು. ರೆಸಾರ್ಟ್ ಮಾಲಕರಿಗೆ ನಿರೀಕ್ಷಣ ಜಾಮೀನು ದೊರೆತ ಬಳಿಕ 15 ದಿನಗಳ ಹಿಂದೆ ಪುನಃ ಎಲ್ಲ ವ್ಯಾಪಾರ ವಹಿವಾಟು ಆರಂಭಗೊಂಡಿತ್ತು.
ಮಳೆಗಾಲ ಕೊನೆಗೊಂಡು ಚಳಿಗಾಲ ಆಗಮಿಸುವ ಸಂದರ್ಭ ವಿದೇಶಿ ಪ್ರವಾಸಿಗರು ವಿರೂಪಾಪುರಗಡ್ಡಿಗೆ ಆಗಮಿಸಿ ತಿಂಗಳುಗಟ್ಟಲೆ ಇದ್ದು ಹೋಗುತ್ತಾರೆ. ಈಗ ವಿದೇಶಿ ಪ್ರವಾಸಿಗರ ಆಗಮನವಾಗುತ್ತಿದ್ದು, ನದಿಯಲ್ಲಿ ಪ್ರವಾಹ ಬರುತ್ತಿರುವುದರಿಂದ ಆನ್‌ಲೈನ್ ಮೂಲಕ ರೂಂಗಳ ಬುಕ್ಕಿಂಗ್ ಮಾಡಿಕೊಳ್ಳಲು ರೆಸಾರ್ಟ್ ಮಾಲಕರು ಹಿಂದೇಟು ಹಾಕುತ್ತಿದ್ದಾರೆ. ರೆಸಾರ್ಟ್ ನಲ್ಲಿ ಪ್ರವಾಸಿಗರು ಇರುವ ಕುರಿತ ಮಾಹಿತಿಯನ್ನು ಪ್ರತಿದಿನ ಗ್ರಾಮೀಣ ಠಾಣೆಗೆ ಕಡ್ಡಾಯವಾಗಿ ನೀಡಬೇಕಿದ್ದು, ಇದನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರಗಿಸಲು ಅವಕಾಶವಿದೆ.