ಬೆಂಗಳೂರು: ಸದ್ಗುರು ಜಗ್ಗಿ ವಾಸುದೇವ್ ಪರಿಕಲ್ಪನೆಯ “ನದಿಗಳನ್ನು ರಕ್ಷಿಸಿ’ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿರುವ ಯಾತ್ರೆಯು ಶನಿವಾರ (ಸೆ.9) ಬೆಂಗಳೂರು ತಲುಪಲಿದ್ದು, ಸಂಜೆ 5 ಗಂಟೆಗೆ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಸಭೆ ಆಯೋಜಿಸಲಾಗಿದೆ. ಮೈಸೂರಿನಿಂದ ಯಾತ್ರೆಯು ಬೆಂಗಳೂರಿಗೆ ಆಗಮಿಸಲಿದ್ದು, ಸಭೆ ಏರ್ಪಡಿಸಲಾಗಿದೆ.
ಈ ಸಭೆಯಲ್ಲಿ ಸದ್ಗುರುಗಳು ಉಪಸ್ಥಿತರಿರಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಚಿತ್ರನಟ ಪುನೀತ್ ರಾಜಕುಮಾರ್, ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ. ಸದಾನಂದಗೌಡ, ಸಂಸದ ಪಿ.ಸಿ. ಮೋಹನ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ.
ಸಭೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಖ್ಯಾತ ಗಾಯಕರಾದ ಉಷಾ ಉತುಪ್ ಮತ್ತು ವಾಸು ದೀಕ್ಷಿತ್ ಅವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಕೇಂದ್ರ ಪರಿಸರ ಸಚಿವ ಡಾ. ಹರ್ಷವರ್ಧನ್ ಅವರು ಸೆ. 3ರಂದು ಕೊಯಮತ್ತೂರಿನಲ್ಲಿ ನದಿಗಳನ್ನು ರಕ್ಷಿಸಿ ಅಭಿಯಾನಕ್ಕೆ ಚಾಲನೆ ನೀಡಿದರು. ಸೆ.3ರಿಂದ ಅ.2ರವರೆಗೆ ಕನ್ಯಾಕುಮಾರಿಯಿಂದ ಹಿಮಾಲಯದವವರೆಗೆ ದೇಶದ 16 ರಾಜ್ಯಗಳಲ್ಲಿ 7 ಸಾವಿರ ಕಿ.ಮೀ. ಸಂಚರಿಸಲಿದೆ.
ಈ ಅವಧಿಯಲ್ಲಿ 23ಕ್ಕೂ ಹೆಚ್ಚು ಬೃಹತ್ ಕಾರ್ಯಕ್ರಮಗಳು ನಡೆಯಲಿವೆ. ಸೆ.9ರಂದು ಬೆಂಗಳೂರಿಗೆ ಆಗಮಿಸಲಿರುವ ಯಾತ್ರೆಯು ಇಲ್ಲಿಂದ ಚೆನ್ನೈಗೆ ಸಾಗಲಿದೆ. ಮುಂದೆ ಅದು ವಿಜಯವಾಡ, ಹೈದರಾಬಾದ, ಮುಂಬೈ, ಅಹಮದಾಬಾದ್, ಇಂದೋರ್, ಭೋಪಾಲ್, ಲಖನೌ, ಜೈಪುರ, ಚಂಡೀಘಡ, ಹರಿದ್ವಾರ ಮೂಲಕ ಅ.2ರಂದು ದೆಹಲಿಗೆ ತಲುಪಲಿದೆ.
ಅಭಿಯಾನದ ಉದ್ದೇಶ: ಭಾರತದ ನದಿಗಳು ದುಸ್ಥಿತಿಗೆ ಇಳಿದಿದ್ದು, ಒಂದೊಮ್ಮೆ ವರ್ಷಪೂರ್ತಿ ಹರಿಯುತ್ತಿದ್ದ ನದಿಗಳು ಇಂದು ಮಳೆಗಾಲದಲ್ಲಿ ಮಾತ್ರ ಹರಿಯುತ್ತಿವೆ. ಅದೆಷ್ಟೋ ಸಣ್ಣ ನದಿಗಳು ಮಾಯವಾಗಿವೆ. ದೇಶದ ಶೇ.25ರಷ್ಟು ಬೆಂಗಾಡಾಗಲಿದೆ. ಮುಂದಿನ 15 ವರ್ಷಗಳಲ್ಲಿ ನಮಗೆ ಬದುಕಲು ಅಗತ್ಯವಿರುವ ನೀರಿನ ಕೇವಲ ಶೇ.50ರಷ್ಟು ಮಾತ್ರ ಲಭ್ಯವಾಗಲಿದೆ.
ಪ್ರಮುಖ ನದಿಗಳಾದ ಗಂಗಾ, ಕೃಷ್ಣಾ, ನರ್ಮದಾ, ಕಾವೇರಿ ಬೇಗನೆ ಬತ್ತಿ ಹೋಗುತ್ತಿವೆ. ಈಗಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದಿನ ಪೀಳಿಗೆ ಕಷ್ಟ ಅನುಭವಿಸಬೇಕಾಗುತ್ತದೆ. ಹಾಗಾಗಿ ನದಿಗಳನ್ನು ರಕ್ಷಿಸಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನಕ್ಕೆ ದೇಶವ್ಯಾಪಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.