Advertisement

ಹೂಡಿಕೆದಾರರ ಹಿತ ರಕ್ಷಿಸಿ: ಕೇಂದ್ರ ಸರಕಾರಕ್ಕೆ ಸುಪ್ರೀಂ ಸೂಚನೆ

01:03 AM Feb 11, 2023 | Team Udayavani |

ಹೊಸದಿಲ್ಲಿ: ಅದಾನಿ ಗ್ರೂಪ್‌ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಲು ನ್ಯಾಯಮೂರ್ತಿ ಒಬ್ಬರನ್ನು ಒಳಗೊಂಡ ಸಮಿತಿ ರಚಿಸುವುದನ್ನು ಪರಿಶೀಲಿಸಿ. ಹೂಡಿಕೆದಾರರ ಹಿತ ಕಾಪಾಡಲು ಇದು ನೆರವಾಗಬಹುದು ಎಂದು ಸುಪ್ರೀಂಕೋರ್ಟ್‌ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದೆ.

Advertisement

ಹಿಂಡನ್‌ಬರ್ಗ್‌ ವರದಿಯಲ್ಲಿ ಅದಾನಿ ಗ್ರೂಪ್‌ನಿಂದ ಷೇರುಪೇಟೆಯಲ್ಲಿ ವಂಚನೆ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ಹೂಡಿಕೆದಾರರ ಹಿತ ರಕ್ಷಣೆಗಾಗಿ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ಸಿಜೆಐ ಡಿ.ವೈ.ಚಂದ್ರಚೂಡ್‌, ನ್ಯಾ| ಪಿ.ಎಸ್‌.ನರಸಿಂಹ ಮತ್ತು ನ್ಯಾ| ಜೆ.ಬಿ.ಪರ್ಡಿವಾಲಾ ಅವರಿದ್ದ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

“ನಾವು ಮಧ್ಯಪ್ರವೇಶಿಸಿ, ಈ ರೀತಿ ಪುನಃ ಸಂಭವಿಸ ದಂತೆ ಖಚಿತಪಡಿಸುವುದನ್ನು ನೀವು ಬಯಸುವಿರಾ? ಸರಕಾರದ ನೀತಿಯ ವಿಷಯಕ್ಕೆ ಮಧ್ಯಪ್ರವೇಶಿಸಲು ನಾವು ಬಯಸುವುದಿಲ್ಲ. ಇದು ಸರಕಾರಕ್ಕೆ ಸಂಬಂಧಿಸಿದ ವಿಷಯ’ ಎಂದು ನ್ಯಾಯಪೀಠ ಹೇಳಿತು.

“ಭಾರತ ಸರಕಾರ ಆಸಕ್ತಿ ಹೊಂದಿದ್ದರೆ ಅದಾನಿ ಗ್ರೂಪ್‌ ವಿರುದ್ಧದ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಒಟ್ಟಾರೆ ಪರಿಸ್ಥಿತಿ ಪರಿಶೀಲನೆಗೆ ತಜ್ಞರ ಸಮಿತಿ ರಚಿಸುವಂತೆ ಸಲಹೆ ನೀಡುತ್ತೇವೆ. ಇದರಲ್ಲಿ ಒಬ್ಬರು ನ್ಯಾಯಮೂರ್ತಿಗಳು ಮತ್ತು ತಜ್ಞರು ಇರಬೇಕು’ ಎಂದು ಹೇಳಿತು.

“ಭಾರತದ ಹೂಡಿಕೆದಾರರ ಹಿತರಕ್ಷಣೆ ಕಾಯಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ನಾವು ಭಾರತದ ಸಾಲಿಸಿಟರ್‌ ಜನರಲ್‌ಗೆ ಸೂಚಿಸಿದ್ದೇವೆ. ಈ ಬಗ್ಗೆ ಸೆಬಿ ಎಲ್ಲವನ್ನು ಗಮನಿಸುತ್ತಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ ಎಂದು ಸಾಲಿಸಿಟರ್‌ ಜನರಲ್‌ ತಿಳಿಸಿದ್ದಾರೆ’ ಎಂದು ನ್ಯಾಯಪೀಠ ಹೇಳಿತು. ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ನ್ಯಾಯಪೀಠ ಮುಂದೂಡಿತು.

Advertisement

ವಿಚಾರಣೆ ಆರಂಭಿಸಿದ ಸೆಬಿ: ಅದಾನಿ ಗ್ರೂಪ್‌ ವಿರು ದ್ಧದ ಆರೋಪಗಳ ಬಗ್ಗೆ ಸೆಕ್ಯುರಿಟೀಸ್‌ ಆ್ಯಂಡ್‌ ಎಕ್ಸ್‌ ಚೇಂಜ್‌ ಬೋರ್ಡ್‌ ಆಫ್ ಇಂಡಿಯಾ(ಸೆಬಿ) ವಿಚಾರಣೆ ಆರಂಭಿಸಿದೆ. ಅಲ್ಲದೆ ವಿಚಾರಣೆಯ ಬೆಳವಣಿಗೆಗಳ ಬಗ್ಗೆ ಪ್ರಧಾನಮಂತ್ರಿಗಳ ಕಚೇರಿಗೆ ವರದಿ ನೀಡುತ್ತಿದೆ. ಷೇರು ಮಾರಾಟ ಪ್ರಕ್ರಿಯಲ್ಲಿ ಸ್ವಹಿತಾಸಕ್ತಿ ಅಥವಾ ಭಾರ ತೀಯ ಸೆಕ್ಯೂರಿಟೀಸ್‌ ಕಾನೂನುಗಳ ಉಲ್ಲಂಘನೆ ಆಗಿ ದೆಯೇ ಎಂಬುದರ ಬಗ್ಗೆ ಸೆಬಿ ಪರಿಶೀಲನೆ ನಡೆಸುತ್ತಿದೆ.
ಅದಾನಿ ಗ್ರೂಪ್‌ ಮತ್ತು ಮಾರಿಷಸ್‌ ಮೂಲದ ಕಂಪೆನಿಗಳಾದ ಗ್ರೇಟ್‌ ಇಂಟರ್‌ನ್ಯಾಶನಲ್‌ ಟಸ್ಕ್ ಫ‌ಂಡ್‌ ಮತ್ತು ಆಯುಶ್‌ಮತ್‌ ಲಿಮಿಟೆಡ್‌ ನಡುವಿನ ಸಂಬಂಧದ ಬಗ್ಗೆ ಸೆಬಿ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದಲ್ಲಿ ಕಾನೂನು ಸಂಸ್ಥೆ ನಿಯೋಜಿಸಿದ ಅದಾನಿ ಗ್ರೂಪ್‌
ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆಯ ಆರೋಪಗಳಿಗೆ ಸೂಕ್ತ ಉತ್ತರ ನೀಡಲು ನ್ಯೂಯಾರ್ಕ್‌ನ ವಾಲ್‌ಸ್ಟ್ರೀಟ್‌ನಲ್ಲಿರುವ ಖ್ಯಾತ ಕಾನೂನು ಸಂಸ್ಥೆಯೊಂದನ್ನು ಅದಾನಿ ಗ್ರೂಪ್‌ ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಖ್ಯಾತ ಕಾನೂನು ಸಂಸ್ಥೆಗಳಾದ ವಾಚ್‌ಟೆಲ್‌, ಲಿಪ್ಟನ್‌, ರೋಸನ್‌ ಆ್ಯಂಡ್‌ ಫೌಂಡೇಶನ್‌ನ ಹಿರಿಯ ನ್ಯಾಯವಾದಿಗಳ ಸಲಹೆಗಳನ್ನು ಅದಾನಿ ಗ್ರೂಪ್‌ ಪಡೆದಿದೆ. ಈ ಮೂಲಕ ಹಿಂಡನ್‌ಬರ್ಗ್‌ನ ಆರೋಪಗಳಿಗೆ ಕಾನೂನು ಮೂಲಕವೇ ಪ್ರತ್ಯುತ್ತರ ನೀಡಲು ಅದಾನಿ ಕಂಪೆನಿ ಮುಂದಾಗಿದೆ ಎನ್ನಲಾಗಿದೆ.

ಅದಾನಿ ಕಂಪೆನಿಯನ್ನು ಪರಿಗಣಿಸಿ ಹಸುರು ಮತ್ತು ಶುದ್ಧ ಇಂಧನಕ್ಕಾಗಿ ಬಜೆಟ್‌ನಲ್ಲಿ ಮೀಸಲು ಇರಿಸಿಲ್ಲ. ಸಹೋದರ ಮಾವ ಮತ್ತು ಸಹೋದರ ಅಳಿಯನಿಗೆ ಲಾಭ ವರ್ಗಾಯಿಸು ವುದು ಕಾಂಗ್ರೆಸ್‌ ಸಂಸ್ಕೃತಿ ಆಗಿರಬಹುದು. ಆದರೆ ಇದು ಮೋದಿ ಸರಕಾರದ ಸಂಸ್ಕೃತಿಯಲ್ಲ.
-ನಿರ್ಮಲಾ ಸೀತಾರಾಮನ್‌,
ಕೇಂದ್ರ ಹಣಕಾಸು ಸಚಿವೆ

 

Advertisement

Udayavani is now on Telegram. Click here to join our channel and stay updated with the latest news.

Next