ಶಿವಮೊಗ್ಗ: ನಾಡಿನ ಇತಿಹಾಸ, ಸಂಸ್ಕೃತಿ, ಪರಂಪರೆಗಳಿಗೆ ನಮ್ಮ ಪೂರ್ವಜರು ನೀಡಿದ ಕೊಡುಗೆಗಳನ್ನು ಗೌರವಿಸಿ ಅದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಇಂದಿನ ಯುವ ಸಮೂಹದ ಮೇಲಿದೆ ಎಂದು ಕಮಲಾ ನೆಹರು ಮಹಿಳಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ| ಬಾಲಕೃಷ್ಣ ಹೆಗಡೆ ಹೇಳಿದರು.
ಅವರು ಬುಧವಾರ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಲ್ಲಿಯ ಆಂತರಿಕ ಗುಣಮಟ್ಟ ಭರವಸೆ ಕೋಶ (Mಕಿಂಅ) ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ “ಇತಿಹಾಸ, ಪರಂಪರೆಗೆ ಶಿವಮೊಗ್ಗ ಜಿಲ್ಲೆಯ ಕೊಡುಗೆ’ ವಿಷಯದ ಕುರಿತು ಅವರು ಮಾತನಾಡಿದರು.
ದೇಶದ ಇತಿಹಾಸದಲ್ಲೇ ಶಿವಮೊಗ್ಗಕ್ಕೆ ವಿಶೇಷ ಸ್ಥಾನವಿದ್ದು ವಿಶಿಷ್ಟವಾದ ವಾಸ್ತುಶಿಲ್ಪ, ಭಾಷೆ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಂಪದ್ಭರಿತವಾದ ಜಿಲ್ಲೆ ಇದಾಗಿದೆ ಎಂದ ಅವರು, ವಿವಿಧ ಕಾಲಘಟ್ಟಗಳಲ್ಲಿ ಸ್ಥಾಪಿತವಾಧ ವೈವಿಧ್ಯಮಯ ಸಂಗತಿಗಳೇ ಇವೆಲ್ಲವುಗಳಿಗೆ ಸಾಕ್ಷಿಯಾಗಿ ನಿಂತಿವೆ ಎಂದು ವಿವರಿಸಿದರು.
ಆದಿ ಕದಂಬರಿಂದ ಹಿಡಿದು ವಿಜಯನಗರೋತ್ತರದ ಕಾಲದವರೆಗಿನ ಅಸಂಖ್ಯಾತ ಕುರುಹುಗಳು ನಮ್ಮ ಜಿಲ್ಲೆಯಲ್ಲಿದ್ದು ಪ್ರವಾಸೋದ್ಯಮ ದೃಷ್ಟಿಯಿಂದಲೂ ಜಾಗತಿಕ ನಕ್ಷೆಯಲ್ಲಿ ಶಿವಮೊಗ್ಗ ಗುರುತಿಸಿಕೊಂಡಿದೆ ಎಂದು ಅವರು ವಿವರಿಸಿದರು. ಶಿವಮೊಗ್ಗದ ವಿವಿಧ ಸ್ಥಳಗಳಲ್ಲಿ ತಮ್ಮ ರಾಜಧಾನಿಯನ್ನಾಗಿಸಿಕೊಂಡು ಆಳ್ವಿಕೆ ನಡೆಸಿದ ಕೆಳದ ರಾಜಮನೆತನವಂತೂ ನಮ್ಮ ಜಿಲ್ಲೆಯ ಸಾಂಸ್ಕೃತಿಕ ಸಂಪತ್ತನ್ನು ಹೆಚ್ಚಿಸಿದ ಹೆಗ್ಗಳಿಕೆ ಪಡೆದಿದೆ ಎಂದು ಅವರು ಮಾಹಿತಿ ನೀಡಿದರು.
ನಮ್ಮಲ್ಲಿದ್ದ ಐತಿಹಾಸಿಕ ಮಹತ್ವವಿರುವ ಸಾವಿರಾರು ಸಂಖ್ಯೆಯ ಪುರಾತನ ವಸ್ತುಗಳು ಇಂಗ್ಲೆಂಡ್ ಹಾಗೂ ಇತರೆ ಯುರೋಪಿನ ದೇಶಗಳಲ್ಲಿವೆ ಎಂದ ಅವರು, ಮೂಲ ವಿಷಯಗಳನ್ನು ತಿಳಿಯಲು ನಾವು ಅವರನ್ನು ಅವಲಂಬಿಸಬೇಕಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆಗಳು ಪಾರಂಪರಿಕ ಸಂಪತ್ತುಗಳನ್ನು ಗುರುತಿಸಿ ಸಂರಕ್ಷಿಸುವ
ಕೆಲಸಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದ ಅವರು, ಸದ್ಯ ನಮ್ಮಲ್ಲಿರುವ ಪಾರಂಪರಿಕ ಕಟ್ಟಡ, ಐತಿಹಾಸಿಕ ಸ್ಮಾರಕಗಳನ್ನು
ಉಳಿಸಿಕೊಳ್ಳಲು ನಾವೆಲ್ಲರೂ ಕಟಿಬದ್ಧರಾಗಬೇಕಾಗಿರುವುದು ಅತ್ಯವಶ್ಯಕ ಎಂದು ಕಿವಿಮಾತು ಹೇಳಿದರು.
ಪ್ರೊ| ಜಯಂತಿ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕ ಪ್ರೊ| ನವೀನಕುಮಾರ, ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ| ಸುಬ್ಬಯ್ಯ, ಉಪನ್ಯಾಸಕಿ ಪ್ರೊ| ಉಷಾ ಎಸ್.ಬಿ. ಮತ್ತಿತರರು ಇದ್ದರು.