ತಿ.ನರಸೀಪುರ: ಪರಿಶಿಷ್ಟರು ಮತ್ತು ಹಿಂದುಳಿದ ವರ್ಗಗಳ ಬಡ್ತಿ ಮೀಸಲಾತಿ ಸಂವಿಧಾನಿಕ ಬದ್ಧ ಹಕ್ಕನ್ನು ಸಂರಕ್ಷಿಸುವಂತೆ ಆಗ್ರಹಿಸಿ ಪಟ್ಟಣದ ಗೋಪಾಲಪುರದಲ್ಲಿರುವ ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ ನಿವಾಸದೆದುರು ಭಾನುವಾರ ಬಹುಜನ ವಿದ್ಯಾರ್ಥಿ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಹೊಸ ತಿರುಮಕೂಡಲು ಕಾಲೇಜು ಜೋಡಿ ರಸ್ತೆಯಲ್ಲಿರುವ ಆರ್.ಧರ್ಮಸೇನಾ ನಿವಾಸದೆದುರು ಜಮಾವಣೆಗೊಂಡ ಬಹುಜನ ವಿದ್ಯಾರ್ಥಿ ಸಂಘದ ಕಾರ್ಯಕರ್ತರು ಹಾಗೂ ಮುಖಂಡರು ಬಡ್ತಿ ಮೀಸಲಾತಿ ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್‌ನ ಅವೈಜ್ಞಾನಿಕ ಆದೇಶದ ವಿರುದ್ಧ ತುರ್ತು ಅಧಿವೇಶನವನ್ನು ಕರೆದು ಸುಗ್ರಿವಾಜ್ಞೆಯನ್ನು ಹೊರಡಿಸಿ ಸಂವಿಧಾನಿಕ ಬಡ್ತಿ ಮೀಸಲಾತಿ ಹಕ್ಕನ್ನು ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.
ಬಿವಿಎಸ್ ಅಧ್ಯಕ್ಷ ತಾಯೂರು ಸಾಗರ್ ಮಾತನಾಡಿ, ಕಳೆದ ಫೆ.9ರಂದು ಸುಪ್ರೀಂ ಕೋರ್ಟ್ ಬಿ.ಕೆ.ಪವಿತ್ರ ಪ್ರಕರಣದಲ್ಲಿ ರಾಜ್ಯ ಸರ್ಕಾರದ 2002ರ ಬಡ್ತಿ ಮೀಸಲಾತಿ ಕಾನೂನನ್ನು ರದ್ದು ಮಾಡಿ ಹೊರಡಿಸಿದ ಅವೈಜ್ಞಾನಿಕ ಆದೇಶದಿಂದಾಗಿ 16000 ನೌಕರರ ಬಡ್ತಿ ಮೀಸಲಾತಿ ಹಕ್ಕು ಮೊಟಕುಗೊಳ್ಳಲಿದೆ.
ಜಲ್ಲಿಕಟ್ಟು, ಕಂಬಳದಂತಹ ಅಪಾಯಕಾರಿ ಊಳಿಗಮಾನ್ಯ ಆಟಗಳ ರಕ್ಷಣೆಗೆ ಸುಗ್ರಿವಾಜ್ಞೆ ಹೊರಡಿಸುವ ಸರ್ಕಾರಗಳು ಬಡ್ತಿ ಮೀಸಲಾತಿ ಆದೇಶವನ್ನು ಗಂಭೀರವಾಗಿ ಪರಿಗಣಿಸಿ ಸುಗ್ರೀವಾಜ್ಞೆ ತರಬೇಕು. ಈ ಸಂಬಂಧ ಶಾಸನಸಭೆಯಲ್ಲಿರುವ ಪರಿಶಿಷ್ಟ ಹಾಗೂ ಹಿಂದುಳಿದ ವರ್ಗಗಳ ಶಾಸಕರು ಧ್ವನಿಯೆತ್ತಬೇಕೆಂದು ಒತ್ತಾಯಿಸಿದರು.
ನಂತರ ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಮುಖಂಡರಾದ ರಾಜೇಂದ್ರ, ರಮೇಶ, ಪರಶಿವಮೂರ್ತಿ, ಮಾಯಾ ಮೌರ್ಯ, ಮಾಡ್ರಳ್ಳಿ ಆನಂದ, ಚೇತನ್, ಪ್ರಮೋದ್ ಹಾಗೂ ಇನ್ನಿತರರು ಭಾಗವಹಿಸಿದ್ದರು.