ಸುಳ್ಯ: ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಲೂಕು ಆರೋಗ್ಯ ಇಲಾಖೆ ಇದರ ವತಿಯಿಂದ ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ ಜಾಗೃತಿ ಜಾಥಾ ಸುಳ್ಯದಲ್ಲಿ ನ.30 ರಂದು ನಡೆಯಿತು.
ಜ್ಯೋತಿ ಸರ್ಕಲ್ ಬಳಿ ಸುಳ್ಯ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಪುರುಷೋತ್ತಮ ಎಂ. ಬ್ಯಾಂಡ್ ಬಾರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಜಾಥಾವು ನಗರದ ಮುಖ್ಯ ರಸ್ತೆಯಲ್ಲಿ ಸಾಗಿ ರಥಬೀದಿ ಮೂಲಕ ಕೆವಿಜಿ ಪುರಭವನದಲ್ಲಿ ಸಮಾಪನಗೊಂಡಿತು.
ಸಮಾಪನ ಸಮಾರಂಭದಲ್ಲಿ ಸುಳ್ಯ ಜೆಎಂಎಫ್‌ಸಿ ನ್ಯಾಯಾಲಯದ ಕಿರಿಯ ನ್ಯಾಯಾಧೀಶ ಯಶ್ವಂತ್ ಕುಮಾರ್ ಕೆ ಮಾತನಾಡಿ, ಕೇಂದ್ರ ಸರಕಾರದ ಭೇಟಿ ಪಡಾವು, ಭೇಟಿ ಬಚಾವು ಕಾರ್ಯಕ್ರಮದಡಿ ಹೆಣ್ಣು ಮಕ್ಕಳ ಸಂರಕ್ಷಣೆ ನಿಟ್ಟಿನಲ್ಲಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ಎಲ್ಲರನ್ನು ಹೆಣ್ಣು ಮಕ್ಕಳ ಅಗತ್ಯತೆ, ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ ಎಂದರು.
ಹೆಣ್ಣು ಮಗು ಜನಿಸಿದರೆ ಹೊರೆ ಎಂಬ ಭಾವನೆ ಹೆತ್ತವರಿಂದ ಪೂರ್ಣವಾಗಿ ತೊಲಗಿಲ್ಲ. ಸಮಾಜದಲ್ಲಿ ಲಿಂಗಾನುಪಾತ ವ್ಯತ್ಯಾಸದಿಂದ ಸಾಮಾಜಿಕ ಪಿಡುಗಿಗೆ ಕಾರಣವಾಗಬಹುದು ಎಂದ ಅವರು, ಹೆಣ್ಣಿನ ಬಗ್ಗೆ ತಾತ್ಸಾರ ಸಲ್ಲದು. ಹೆಣ್ಣು ಮತ್ತು ಗಂಡು ಎಂಬ ಬೇದ ಬೇಡ. ಹೆಣ್ಣು-ಗಂಡಿನಷ್ಟೇ ಸಮರ್ಥಳು. 2005 ರಲ್ಲಿ ಹಿಂದೂ ಉತ್ತರಧಿಕಾರಿ ಕಾಯ್ದೆಗೆ ತಿದ್ದುಪಡಿ ತಂದು ಗಂಡು ಮಕ್ಕಳಿಗೆ ಇರುವಷ್ಟೇ ಆಸ್ತಿ ಹಕ್ಕನ್ನು ಹೆಣ್ಣು ಮಕ್ಕಳಿಗೆ ನೀಡಲಾಯಿತು. ಇದರ ಮೂಲ ಉದ್ದೇಶ ಅಸಮಾನತೆ ಹೋಗಲಾಡಿಸುವಿಕೆ ಆಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಮಾತನಾಡಿ, ದೇಶದ ವಿವಿಧ ಭಾಗಗಳಲ್ಲಿ ಹೆಣ್ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದನ್ನು ಮಾಧ್ಯಮಗಳ ಮೂಲಕ ನಾವು ಗಮನಿಸಬಹುದು. ಮಹಿಳಾ ತಹಶೀಲ್ದಾರನ್ನು ಕರ್ತವ್ಯ ನಿರತ ಕಚೇರಿಯಲ್ಲಿ ಸುಟ್ಟು ಹಾಕಿರುವುದು, ಪಶು ವೈದ್ಯಾಧಿಕಾರಿಯನ್ನು ಸಾಮೂಹಿಕ ಅತ್ಯಾಚಾರ ಎಸಗಿ ಸುಟ್ಟು ಹಾಕಿರುವ ಪ್ರಕರಣಗಳು ಇಡೀ ಸಮಾಜ ತಲೆತಗ್ಗಿಸುವಂತಿದೆ. ಇಂತಹ ಕೌರ್ಯಗಳನ್ನು ಎಲ್ಲರೂ ವಿರೋಧಿಸಿ ಹೆಣ್ಣು ಮಕ್ಕಳು ಗೌರವಯುತ ಬಾಳ್ವೆ ನಡೆಸಲು ಬೇಕಾದ ವಾತಾವರಣವನ್ನು ಸಮಾಜದಲ್ಲಿ ನಿರ್ಮಿಸಬೇಕಿದೆ ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್., ತಾಲೂಕು ವೈದ್ಯಾಧಿಕಾರಿ ಡಾ|ಸುಬ್ರಹ್ಮಣ್ಯ, ಎಸ್.ಐ. ಹರೀಶ್ ಎಂ.ಎನ್., ಕ್ರೈಂ ವಿಭಾಗದ ಎಸ್.ಐ. ರತ್ನಕುಮಾರ್, ವಕೀಲರ ಸಂಘದ ವಿನಯ ಕುಮಾರ್ ಮುಳುಗಾಡು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಸರಕಾರಿ ಪ್ರೌಢಶಾಲೆ ಸುಳ್ಯ, ಸೈಂಟ್ ಜೋಸೆಫ್ ಪ್ರೌಢಶಾಲೆ, ಶ್ರೀ ಶಾರದಾ ಹೆಣ್ಮಕ್ಕಳ ಪ್ರೌಢಶಾಲೆ, ಗಾಂಧಿನಗರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.