Advertisement

ಕಾಳಿ ರಕ್ಷಿಸಿ, ಜೋಯಿಡಾ ಉಳಿಸಿ

05:21 PM Mar 15, 2022 | Team Udayavani |

ಜೋಯಿಡಾ: ಕಾಳಿ ನದಿ ನೀರನ್ನು ಬೇರೆ ಜಿಲ್ಲೆಗೆ ಹರಿಸುವ ಯೋಜನೆ ಖಂಡಿಸಿ ಕಾಳಿ ಬ್ರಿಗೇಡ್‌ ಸಂಘಟನೆಯಡಿ ಸೋಮವಾರ ಕಾಳಿ ರಕ್ಷಿಸಿ ಜೋಯಿಡಾ ಉಳಿಸಿ ಬೃಹತ್‌ ಪ್ರತಿಭಟನೆ ನಡೆಯಿತು.

Advertisement

ಬೆಳಗ್ಗೆಯಿಂದಲೇ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಸಾರ್ವಜನಿಕರು ಪಕ್ಷಾತೀತವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಶಿವಾಜಿ ಸರ್ಕಲ್‌ ಬಳಿ 11 ಗಂಟೆಗೆ ಆರಂಭವಾದ ಪ್ರತಿಭಟನಾ ಸಭೆ ಮಧ್ಯಾಹ್ನ 1 ಗಂಟೆವರೆಗೆ ನಡೆಯಿತು. ಬಳಿಕ ತಹಶೀಲ್ದಾರ ಕಾರ್ಯಾಲಯದ ವರೆಗೆ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು ತಹಶೀಲ್ದಾರ್‌ ಸಂಜಯ ಕಾಂಬ್ಳೆಯವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆ ವೇಳೆ ಕಾಳಿ ಬ್ರಿಗೇಡ್‌ ಮುಖ್ಯ ಸಂಚಾಲಕ ರವಿ ಮಾತನಾಡಿ, ಜಿಲ್ಲೆಯ ಮೂರು ಜಲವಿದ್ಯುತ್‌ ಘಟಕಗಳು, ಕೈಗಾ ಅಣುಸ್ಥಾವರ, ವನ್ಯಜೀವಿಗಳು, ಸಂರಕ್ಷಿತ ಕಾಡು ಇವೆಲ್ಲ ಕಾಳಿ ನದಿಯನ್ನು ಅವಲಂಬಿಸಿವೆ. ಇವಕ್ಕೆಲ್ಲ ಸಾಕಾಗುವಷ್ಟು ನೀರಿಲ್ಲದಿದ್ದರೂ ಬೇರೆ ಜಿಲ್ಲೆಗೆ ಒತ್ತಾಯಪೂರ್ವಕವಾಗಿ ನದಿ ನೀರನ್ನು ಕೊಂಡೊಯ್ಯುವುದು ಅವೈಜ್ಞಾನಿಕ. ಈ ಯೋಜನೆಗೆ ನಮ್ಮೆಲ್ಲರ ವಿರೋಧವಿದೆ. ಈ ಬಗ್ಗೆ ಸರಕಾರ ಕೂಲಂಕುಷವಾಗಿ ವಿಚಾರಿಸಿ ಜನರ ಅಹವಾಲು ಸ್ವೀಕರಿಸಿ ನಿರ್ಣಯ ಬದಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ಉಗ್ರಹೋರಾಟ ನಡೆಸುವುದು ಅನಿವಾರ್ಯ ಎಂದರು.

ಕಾಳಿ ಜಲ ವಿದ್ಯುದಾಗಾರ, ಕೊಡಸಳ್ಳಿ, ಕದ್ರಾ ಅಣೆಕಟ್ಟುಗಳು ವಿದ್ಯುತ್‌ ಉತ್ಪಾದನೆ ಮಾಡುವ ಮೂಲಕ ರಾಜ್ಯಕ್ಕೆ ವಿದ್ಯುತ್‌ ನೀಡುತ್ತಿದ್ದು, ಕೈಗಾ ಅಣುಸ್ಥಾವರದ ಶೀತಲೀಕರಣಕ್ಕೆ ಕಾಳಿ ನೀರು ಬಳಕೆಯಾತ್ತಿದೆ. ಅಲ್ಲದೆ ದಾಂಡೇಲಿ ಕಾಗದ ಕಾರ್ಖಾನೆ, ದಾಂಡೇಲಿ, ಹಳಿಯಾಳ ನಗರಕ್ಕೆ ಕುಡಿಯುವ ನೀರು ಸಹ ಕಾಳಿಯಿಂದ ಪೂರೈಕೆಯಾಗುತ್ತಿದೆ. ಕಾಳಿ ನದಿಯ ಉದ್ದಕ್ಕೂ ಕೋಟ್ಯಂತರ ಜಲಚರಗಳು, ವನ್ಯಜೀವಿಗಳು, ಸಂರಕ್ಷಿತ ಅರಣ್ಯ ಪ್ರದೇಶವಿದ್ದು ಈಗಾಗಲೇ ಕಾಳಿ ನದಿ ತನ್ನ ಧಾರಣ ಸಾಮರ್ಥ್ಯ ಕಳೆದುಕೊಂಡಂತಿದೆ. ಇಂತಹ ಪರಿಸ್ಥಿತಿಯಲ್ಲಿ ಅಳ್ನಾವರಕ್ಕೆ ಕುಡಿಯುವ ನೀರು ಪೂರೈಕೆ, ಹಾಗೂ ಉತ್ತರ ಕರ್ನಾಟಕದ 5 ಜಿಲ್ಲೆಗೆ ನೀರು ಪೂರೈಕೆ ಅಸಾಧ್ಯದ ಸಂಗತಿಯಾಗಿದೆ. ಸರಕಾರ ಪರಿಸ್ಥಿತಿ ಅವಲೋಕಿಸದೇ ಸಾರ್ವಜನಿಕರ ಅಭಿಪ್ರಾಯ ಪಡೆಯದೇ ಕಾಳಿ ನದಿ ನೀರನ್ನು ಉತ್ತರ ಕರ್ನಾಟಕಕ್ಕೆ ಕೊಂಡೊಯ್ಯುವ ತೀರ್ಮಾನಕ್ಕೆ ಬಂದಿರುವುದು ಜೋಯಿಡಾ ತಾಲೂಕಿನ ಜನರಿಗೆ ಮಾಡಿದ ಅನ್ಯಾಯವಾಗಿದೆ. ಸರಕಾರ ಈ ಯೋಜನೆ ಕೈಬಿಡದಿದ್ದರೆ ಹೋರಾಟದ ಸ್ವರೂಪ ಬದಲಾಗಲಿದೆ ಎಂದರು.

ಮಾಜಿ ಎಂಎಲ್‌ಸಿ ಎಸ್‌.ಎಲ್‌. ಘೋಕ್ಲೃಕರ್‌ ಮಾತನಾಡಿ, ಕಾಳಿ ಈ ಭಾಗದ ಜೀವ ನದಿ. ಇದರ ನೀರನ್ನು ಅಳ್ನಾವರಕ್ಕೆ ಹಾಗೂ ಉತ್ತರ ಕರ್ನಾಟಕಕ್ಕೆ ಕೊಂಡೊಯ್ಯುವ ಪ್ರಯತ್ನ ಸರಿಯಲ್ಲ. ಜೋಯಿಡಾ ತಾಲೂಕನ್ನು ಹಿಂದುಳಿದ ತಾಲೂಕು, ಇಲ್ಲಿಯ ಜನ ಮುಗ್ಧರು ಎನ್ನುತ್ತಾ ಇನ್ನೂ ಹಿಂದಕ್ಕೆ ಇಡುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ. ಕಾಳಿ ನದಿ ನೀರನ್ನು ಅಳ್ನಾವರಕ್ಕಾಗಲಿ, ಉತ್ತರ ಕರ್ನಾಟಕಕ್ಕಾಗಲಿ ಒಯ್ಯುವ ಯೋಜನೆಗೆ ಸಂಪೂರ್ಣ ವಿರೋಧವಿದೆ. ಇದಕ್ಕಾಗಿ ಯಾವುದೇ ಹೋರಾಟಕ್ಕೂ ಸಿದ್ಧ ಎಂದರು.

Advertisement

ಉದ್ಯಮಿ ಹಾಗೂ ವ್ಯಾಪಾರಿ ಸಂಘದ ಅಧ್ಯಕ್ಷ ರಫೀಕ, ಕಾಜಿ, ರೈತ ಸಂಘದ ಅಧ್ಯಕ್ಷ ಶ್ರೀಕಾಂತ ಟೆಂಗ್ಸೆ, ಕುಣಬಿ ಮುಖಂಡ ಸುಭಾಷ ಗಾವಡಾ, ಹಳಿಯಾಳದ ಮುಖಂಡರಾದ ಬೋಬಾಟೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಎನ್‌. ವಾಸರೆ ಸೇರಿದಂತೆ ಹಲವರು ಮಾತನಾಡಿ,ಯೋಜನೆ ವಿರೋಧಿಸಿದರಲ್ಲದೇ ಸರಕಾರ ಇದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಪ್ರಮುಖರಾದ ನ್ಯಾಯವಾದಿ ಸುನೀಲ ದೇಸಾಯಿ, ಅಜೀತ ಟೆಂಗ್ಸೆ, ಸುಬ್ರಾಯ ದಬಗಾರ, ಪ್ರಭಾಕರ ನಾಯ್ಕ, ಕೀರ್ತಿ ಗಾಂವಕರ್‌, ಮೋಹನ ಹಲವಾಯಿ, ಗ್ರಾ.ಪಂ. ಅಧ್ಯಕ್ಷ ಅರುಣ ನಾಯ್ಕ, ಆನಂದ ಪೋಕಳೆ, ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

24 ಕ್ಕೆ ರಾಮನಗರ ಬಂದ್‌

ಕಾಳಿ ಬಚಾವೋ ಆಂದೋಲನ ರೂಪ ಪಡೆದಿದ್ದು, ಹತ್ತಾರು ಸಂಘಟನೆಗಳು ಕಾಳಿ ಬ್ರಿಗೇಡ್‌ ನೇತ್ರತ್ವದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು ಹಾಗೂ ರಾಮನಗರ ಭಾಗದ ಜನ ಪಾಲ್ಗೊಂಡಿರಲಿಲ್ಲ. ಮಾ.24 ರಂದು ಪ್ರತ್ಯೇಕವಾಗಿ ರಾಮನಗರ ಬಂದ್‌ ಮಾಡುವ ಮೂಲಕ ಕಾಳಿ ಉಳಿಸಿ ಪ್ರತಿಭಟನೆ ನಡೆಸಲು ರಾಮನಗರದ ವಿವಿಧ ಸಂಘಟನೆಗಳು ಕರೆ ನೀಡಿವೆ.

ಉಪವಾಸ ಸತ್ಯಾಗ್ರಹದ ಎಚ್ಚರಿಕೆ

ಸರಕಾರ ಕಾಳಿ ನೀರನ್ನು ಅಳ್ನಾವರಕ್ಕೆ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸಾಗಿಸುವ ನಿರ್ಧಾರ ಕೈಬಿಡಬೆಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ದಾಂಡೇಲಿ, ಹಳಿಯಾಳ, ಜೋಯಿಡಾ ತಾಲೂಕಿನಾದ್ಯಂತ ಪಕ್ಷಾತೀತವಾಗಿ ಉಪವಾಸ ಸತ್ಯಾಗ್ರಹ ಹಾಗೂ ಉಗ್ರ ಹೋರಾಟ ಕೈಗೊಳ್ಳುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next