Advertisement

ಉರಿ ಬಿಸಿಲು ದೇಹಾಯಾಸದಿಂದ ರಕ್ಷಿಸಿಕೊಳ್ಳಿ

11:19 PM Apr 08, 2019 | Sriram |

ಈಗಾಗಲೇ ಬೇಸಗೆ ಆರಂಭವಾಗಿದ್ದು, ಬಿಸಿಲಿನ ಚುರುಕು ನಮಗೆ ದಿನಾಲೂ ಮುಟ್ಟುತ್ತಿದೆ. ಬೇಸಗೆಯಲ್ಲಿ ಬಿಸಿಲಿನಿಂದ ರಕ್ಷಣೆಯ ಜತೆಗೆ ಆರೋಗ್ಯದ ಕಾಳಜಿ ಅಗತ್ಯವಾಗಿದೆ. ಬಿಸಿ ಲಿನ ಝಳಕ್ಕೆ ಸುಸ್ತು,ನಿರ್ಜಲಿಕರಣ ಹಾಗೂ ನಿಶ್ಶಕ್ತಿ ಸರ್ವೇ ಸಾಮಾನ್ಯ. ಹೀಗಾಗಿ ಬೇಸಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಬೇಕಾದ ಅಂಶಗಳ ಹಾಗೂ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Advertisement

ಬೇಸಗೆ ಬಂತೆಂದರೆ ದೇಹಾಲಸ್ಯ ಜಾಸ್ತಿಯಾಗುತ್ತದೆ. ಹಾಗಂತ ಇದು ಉದಾಸೀನತೆ ಅಥವಾ ಮೈಗಳ್ಳತನದ ನೆಪ ಎಂದರೆ ತಪ್ಪಾಗುತ್ತದೆ. ಬೇಸಗೆ ಕಾಲದಲ್ಲಿ ಅತಿಯಾದ ಉರಿ ಬಿಸಿಲು, ಸೆಕೆ, ಬಿಸಿಯ ಧಗೆಯಿಂದಾಗಿ ಸುಸ್ತು, ಆಯಾಸ, ನಿಶ್ಶಕ್ತಿ ಜತೆಗೆ ದೇಹಾಲಸ್ಯದ ಅನುಭವ ಕಾಡುವುದು ಸಹಜ. ಪ್ರತಿ ಬೇಸಗೆಯಲ್ಲಿ ಬಿಡದೇ ಕಾಡುವ ಸಮಸ್ಯೆ ಎಂದರೆ ಸುಸ್ತು.

ಸಾಮಾನ್ಯವಾಗಿ ಸುಸ್ತು, ಬಳಲಿಕೆ ಎಲ್ಲ ಕಾಲದಲ್ಲಿಯೂ ಇದ್ದರೂ, ಕೂಡ ಬೇಸಗೆಯಲ್ಲಿ ಇದರ ಕಾಡುವಿಕೆ ತುಸು ಹೆಚ್ಚು. ಬೇಸಗೆಯಲ್ಲಿ ಸುಸ್ತು ಅತಿಯಾಗಿರಲು ಮುಖ್ಯ ಕಾರಣ ದೇಹದಲ್ಲಿ ಏರಿಕೆಯಾಗುವ ಶಾಖ ಮತ್ತು ಇಳಿಕೆಯಾಗುವ ನೀರಿನ ಅಂಶ. ಅದಕ್ಕೇ ಪ್ರತಿ ವೈದ್ಯರ ಸಲಹೆ ಎಂದರೆ ನೀರು ಕುಡಿಯಿರಿ; ದೇಹ ತಂಪು ಮಾಡಿಕೊಳ್ಳಿ ಎಂಬುದು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ತಾಪಮಾನ ಇನ್ನಷ್ಟು ಹೆಚ್ಚಾಗಿದೆ. ಇದರಿಂದ ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ ಸುಸ್ತು, ಬಳಲಿಕೆ, ಆಯಾಸ ಕಾಡುವಿಕೆ ಪ್ರತಿವರ್ಷದಂತೆ ಈ ವರ್ಷವೂ ಸಾಮಾನ್ಯವಾಗಿದ್ದರೂ, ತುಸು ಹೆಚ್ಚೇ ಇದೆ. ಸಾಮಾನ್ಯ ಬಿಸಿಯ ಸ್ಥಿತಿಯಲ್ಲಿ ದೇಹವು ಬೆವರುವ ಮೂಲಕ ತಂಪು ಮಾಡಿಕೊಳ್ಳುತ್ತದೆ. ಆದರೆ ಉರಿ ಬಿಸಿಲಿಗೆ ದೇಹದ ಶಾಖ ಏರಿಕೆಯಾಗಿ ನೀರಿನಾಂಶ ದೇಹದಲ್ಲಿ ನಷ್ಟವಾಗುತ್ತದೆ. ಇಷ್ಟೇ ಅಲ್ಲದೆ, ಬಿಸಿಲಿನ ಧಗೆಗೆ ಮನೆಯೊಳಗಿನಿಂದ ಹೊರಗಿದ್ದು ಕೆಲಸ ಮಾಡಬೇಕಾಗಿ ಬಂದಾಗ ಅತಿಯಾದ ನಿಶ್ಶಕ್ತಿ, ಬಳಲಿಕೆಯ ಅನುಭವವಾಗುತ್ತಲೇ ಇರುತ್ತದೆ. ಇದು ಮನುಷ್ಯ ಸಹಜ ಸಮಸ್ಯೆ ಎಂದರೂ ತಪ್ಪಾಗದು.

ದ್ರವಾಹಾರ ಸೇವಿಸಿ
ಪ್ರತಿನಿತ್ಯ ಕನಿಷ್ಠ ಐದು ಲೀಟರ್‌ ನೀರು ಸೇವಿಸಬೇಕೆಂಬುದು ವೈದ್ಯರ ಮಾತು. ನೀರಿನೊಂದಿಗೆ ದೇಹ ತಂಪಾಗಿಸುವ ಇತರ ದ್ರವಾಹಾರ ಸೇವನೆಯೂ ಅಗತ್ಯ. ಪ್ರತಿ ದಿನ ಬೆಳಗ್ಗೆ ಹನ್ನೊಂದು ಗಂಟೆಗೂ ಮುಂಚೆ ಎಳನೀರು ಸೇವನೆಯಿಂದ ದೇಹ ತಂಪಾಗಿಸಲು ಸಹಕಾರಿ. ಎಳನೀರಿಗೆ ದೇಹವನ್ನು ಸಮತೋಲನದಲ್ಲಿಡುವ ಶಕ್ತಿ ಇರುವುದರಿಂದ ದಿನನಿತ್ಯವಲ್ಲದಿದ್ದರೂ, ವಾರಕ್ಕೆ ಮೂರು ಎಳನೀರು ಸೇವಿಸಲೇಬೇಕು. ಆ್ಯಪಲ್‌ ರಸ, ಕಿತ್ತಳೆ ಹಣ್ಣಿನ ರಸ, ಬಾಳೆಹಣ್ಣು ರಸ, ಲಿಂಬೆ ಜ್ಯೂಸ್‌, ಮಜ್ಜಿಗೆ, ಮೊಸರು ಸೇವನೆಯಿಂದ ದೇಹವನ್ನು ತಂಪಾಗಿಡಲು ಸಾಧ್ಯವಾಗುತ್ತದೆ.

Advertisement

ವ್ಯಾಯಾಮ ಮಾಡಿ
ಅತಿಯಾದ ಸುಸ್ತು, ಬಳಲಿಕೆಯನ್ನು ವ್ಯಾಯಾಮದಿಂದಲೂ ನಿಯಂತ್ರಿಸಲು ಸಾಧ್ಯವಿದೆ. ಪ್ರತಿನಿತ್ಯ ವ್ಯಾಯಾಮದಿಂದ ರಕ್ತಪರಿಚಲನೆ ಸರಾಗವಾಗಿ ದೇಹ ಸುಸ್ಥಿತಿಯಲ್ಲಿರಲು ಸಹಕಾರಿಯಾಗುತ್ತದೆ. ಆದರೆ ಸುಸ್ತು ಒಂದು ಸಮಸ್ಯೆಯಾಗಿಯೇ ಮುಂದುವರಿದಲ್ಲಿ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಸಲಹೆ, ಮಾರ್ಗದರ್ಶನ ಮತ್ತು ಚಿಕಿತ್ಸೆಗಳನ್ನು ಪಡೆದುಕೊಳ್ಳುವುದು ಅಗತ್ಯ.

ನಿರ್ಲಕ್ಷ್ಯಸಲ್ಲದು
ದಿನವಿಡೀ ನೀರು ಕುಡಿಯದೇ ಇದ್ದರೆ, ಉರಿಮೂತ್ರ, ಹೊಟ್ಟೆಯಲ್ಲಿ ಉರಿಯ ಅನುಭವವಾಗುತ್ತದೆ. ಆಗ ತತ್‌ಕ್ಷಣ ಸಾಕಷ್ಟು ನೀರು ಕುಡಿಯಬೇಕು. ಆದರೆ ಇವುಗಳನ್ನು ನಿರ್ಲಕ್ಷಿಸಿದರೆ ಮುಂದೆ ಕಿಡ್ನಿ, ಮೂತ್ರಕೋಶದ ಕಲ್ಲು ಮುಂತಾದವುಗಳಿಗೂ ಕಾರಣವಾಗಬಹುದು. ಕೈಕಾಲು ಸೆಳೆತ, ಹೊಟ್ಟೆ ನೋವು ಮುಂತಾದ ಸಮಸ್ಯೆಗಳೂ ದೇಹದಲ್ಲಿನ ದ್ರವಾಹಾರದ ಕೊರತೆಯಿಂದ ಕಾಣಿಸಿಕೊಳ್ಳಬಹುದು. ಚಿಕ್ಕ ತೊಂದರೆ ಕಾಣಿಸಿಕೊಂಡರೂ, ಈ ಬಿಸಿಲಿನ ಕಾಲದಲ್ಲಿ ಅಲಕ್ಷಿಸದೇ ವೈದ್ಯರ ಸಲಹೆ ಪಡೆಯುವುದೊಳಿತು. ಇಲ್ಲವಾದಲ್ಲಿ ಅತಿಯಾದ ಉರಿ ಬಿಸಿಲು ಪ್ರಾಣಕ್ಕೂ ಕುತ್ತು ತರುವ ಸಂದರ್ಭಗಳೂ ಇಲ್ಲದಿಲ್ಲ.

ತಂಪಾಗಿರಲಿ ದೇಹ
ಸೂಕ್ತ ಗುಣಮಟ್ಟದ ತಂಪಾಗಿಡುವ ಆಹಾರ ಸೇವನೆ ಮತ್ತು ಆದಷ್ಟು ದ್ರವಾಹಾರ ಸೇವನೆ, ತಂಪು ಪಾನೀಯಗಳ ಸೇವನೆಯಿಂದ ದೇಹವನ್ನು ಅತಿಯಾದ ಶಾಖದಿಂದ ರಕ್ಷಿಸಿಕೊಳ್ಳಬೇಕು ಎನ್ನುತ್ತಾರೆ ವೈದ್ಯರು. ದೇಹದ ಶಾಖ ಜಾಸ್ತಿಯಾದಾಗ ತಂಪು ಸೇವಿಸುತ್ತಲೇ ಇರಬೇಕು. ಇಲ್ಲವಾದಲ್ಲಿ ಮೆದುಳು, ಮೂತ್ರಕೋಶ, ಯಕೃತ್‌ಗಳಿಗೆ ನಷ್ಟವುಂಟಾಗುವ ಸಾಧ್ಯತೆಗಳಿರುತ್ತವೆ. ರಕ್ತದೊತ್ತಡ ಇರುವವರು, ಹಿರಿಯರು, ಮಕ್ಕಳಿಗೆ ಬೇಸಗೆಯ ಧಗೆಯಿಂದ ರಕ್ಷಣೆ ಪಡೆದುಕೊಳ್ಳುವುದು ಅವಶ್ಯ ಆಗಿದೆ. ಬಿಸಿಲಿನಲ್ಲಿ ಮೈಯೊಡ್ಡಿ ದುಡಿಯುವ ವ್ಯಕ್ತಿಯ ದೇಹದಲ್ಲಿ ಅತಿಯಾದ ಬೆವರಿನಿಂದಾಗಿ ಇಲೆಕ್ಟ್ರೋಲೈಟ್‌ ಸಮತೋಲನ ಕಳೆದುಕೊಳ್ಳುತ್ತದೆ. ಇದರಿಂದ ಕಾಲು ನೋವು, ಹೊಟ್ಟೆ ನೋವೂ, ಸುಸ್ತು, ಆಯಾಸ ಕಾಣಿಸಿಕೊಳ್ಳುವುದಿದೆ. ಇದನ್ನು ತಡೆಯಲು ಅತಿಯಾದ ನೀರು ಸೇವನೆ ಅತ್ಯಗತ್ಯವಾಗಿರುತ್ತದೆ. ನೀರಿಗೆ ಉಪ್ಪು, ಲಿಂಬೆರಸ, ಸಕ್ಕರೆ ಬೆರೆಸಿ ಸೇವಿಸುವುದು ಹೆಚ್ಚು ಸೂಕ್ತವಾಗಿರುತ್ತದೆ.

ದ್ರವಾ ಹಾರ ಸೇವನೆ ಅಗತ್ಯ
ಬೇಸಗೆಯಲ್ಲಿ ಸುಸ್ತು ಕಾಡುವುದು ಸಾಮಾನ್ಯ. ಆದಷ್ಟು ದ್ರವಾಹಾರ ಸೇವನೆ ಅಗತ್ಯ. ಹಣ್ಣು ಹಂಪಲು ತಿನ್ನಬೇಕು. ಬಿಸಿಲಿಗೆ ಮೈಯೊಡ್ಡುವುದನ್ನು ಕಡಿಮೆ ಮಾಡಬೇಕು. ಅತಿಯಾದ ಸುಸ್ತು ಕಾಡುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಯೋಗದಿಂದ ಆರೋಗ್ಯಭಾಗ್ಯ ನಿರಂತರ.
– ಡಾ| ಪುನಿತ್‌ ಕೆ.ವೈದ್ಯರು

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next