Advertisement

ವೇಶ್ಯಾವಾಟಿಕೆ ಜಾಲ ಪತ್ತೆ: ಆರು ಮಂದಿ ಸೆರೆ, 6 ಯುವತಿಯರ ರಕ್ಷಣೆ

04:20 AM Jun 23, 2018 | Karthik A |

ಮಂಗಳೂರು: ಪಂಪ್‌ ವೆಲ್‌ ನ ಲಾಡ್ಜೊಂದಕ್ಕೆ ದಾಳಿ ನಡೆಸಿದ ಪೊಲೀಸರು ವೇಶ್ಯಾವಾಟಿಕೆ ಜಾಲವನ್ನು  ಭೇದಿಸಿ ಆರು ಯುವಕರನ್ನು ಬಂಧಿಸಿದ್ದು, ಸ್ಥಳದಲ್ಲಿದ್ದ ಆರು ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ. ಬೆಳ್ತಂಗಡಿ ಕಕ್ಕಿಂಜೆ ಗ್ರಾಮದ ನಾಗಪ್ಪ ಆಚಾರ್ಯ ಅವರ ಪುತ್ರ ಪವನ್‌ ಆಚಾರ್ಯ (26), ಶಿವಮೊಗ್ಗದ ಸೊರಬ ತಾಲೂಕಿನ ಶನಿದೇವಪ್ಪ ಅವರ ಪುತ್ರ ದಿನೇಶ್‌ (26), ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ನಾರಾಯಣ ಅವರ ಪುತ್ರ ವೀರೇಂದ್ರ ನಾರಾಯಣ ಕುಂಬಾರ್‌ (32), ಮಂಡ್ಯ ಜಿಲ್ಲೆ ಕೆ. ಆರ್‌. ಪೇಟೆ ತಾಲೂಕು ಬೂಕನಕೆರೆ ಹೋಬಳಿ ನಿವಾಸಿ ದಿ| ಕಾಳೇಗೌಡ ಅವರ ಪುತ್ರ ರೇವಣ್ಣ (27) ತುಮಕೂರು ಜಿಲ್ಲೆಯ ಕುಣಿಗಲ್‌ ತಾಲೂಕಿನ ಸೊಬಗನ ಹಳ್ಳಿಯ ಕೆಂಪ ನಾಯಕ ಅವರ ಪುತ್ರ ರವಿ ಕುಮಾರ್‌ (28), ಚಿಕ್ಕಮಗಳೂರು ಜಿಲ್ಲೆಯ ಹಸನ ಬಾಳು ಗ್ರಾಮದ ಕೃಷ್ಣಮೂರ್ತಿ ಅವರ ಮಗ ರಾಜೇಶ್‌ (25) ಎಂದು ಗುರುತಿಸಲಾಗಿದೆ. ಜಾಲದ ಪ್ರಮುಖ ಆರೋಪಿ ಶಿವರಾಮ ಪೂಜಾರಿ ಹಾಗೂ ಲಾಡ್ಜ್ ನ ಮಾಲಕ ಹಾಗೂ ಮ್ಯಾನೇಜರ್‌ ಆಗಿರುವ ಶೇಖರ್‌ ತಪ್ಪಿಸಿಕೊಂಡಿದ್ದಾರೆ. ಬಂಧಿತರಿಂದ ಬಾಂಗ್ಲಾ ದೇಶದ ಕರೆನ್ಸಿ, ಮೊಬೈಲ್‌ ಫೋನ್‌ ಹಾಗೂ ಗರ್ಭನಿರೋಧಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಚೈಲ್ಡ್‌ ಲೈನ್‌ ನವರು  ವೇಶ್ಯಾವಾಟಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧಾರದಂತೆ, ಡಿಸಿಪಿ ಉಮಾ ಪ್ರಶಾಂತ್‌ ನೇತೃತ್ವದಲ್ಲಿ ಲಾಡ್ಜ್ ನ ಮೂರನೇ ಮಹಡಿಗೆ ದಾಳಿ ನಡೆಸಿದ ಪೊಲೀಸರ ತಂಡ ಶುಕ್ರವಾರ ಬೆಳಗ್ಗೆ ಒಟ್ಟು ಆರು ಜನ ಯುವತಿಯರನ್ನು ರಕ್ಷಿಸಿದೆ.

Advertisement

ಯುವತಿಯರಲ್ಲಿ ಕೋಲ್ಕತಾ ಹಾಗೂ ಮುಂಬಯಿಯ ತಲಾ ಇಬ್ಬರು, ಆಂಧ್ರ ಹಾಗೂ ಬೆಂಗಳೂರಿನ ತಲಾ ಒಬ್ಬ ಯುವತಿಯರಿದ್ದರು ಎನ್ನಲಾಗಿದೆ. ಬಂಧಿತರ ಮೇಲೆ ಮಾನವ ಕಳ್ಳಸಾಗಣೆ ಕಾಯ್ದೆಯ ಸೆಕ್ಷನ್‌ 370ರಡಿ  ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಲಾಡ್ಜ್ ನಲ್ಲಿತ್ತು ಎಸ್ಕೇಪ್‌ ರೂಂ!  
ಲಾಡ್ಜಿನ ನಾಲ್ಕನೇ ಮಹಡಿಯಲ್ಲಿ ಒಟ್ಟು 8 ರೂಂಗಳಿದ್ದು, ಪೊಲೀಸ್‌ ದಾಳಿಯ ಸಂದರ್ಭ ಸುಲಭದಲ್ಲಿ ತಪ್ಪಿಸಿಕೊಳ್ಳುವಂತೆ ಒಂದು ಎಸ್ಕೇಪ್‌ ರೂಂ ಮಾಡಲಾಗಿದೆ.  ಇಲ್ಲಿ ಒಂದು ರಹಸ್ಯ ಬಾಗಿಲು ಮಾಡಲಾಗಿದ್ದು, ಇದರಾಚೆ ಇನ್ನೊಂದು ಕೊಠಡಿ ಇದೆ. ಸೂಕ್ಷ್ಮವಾಗಿ ಗಮನಿಸದ ಹೊರತು, ಇದನ್ನು ಬಾಗಿಲು ಎಂದು ಕಂಡುಹಿಡಿಯುವುದು ಸಾಧ್ಯವಾಗುವುದಿಲ್ಲ. ಏಕೆಂದರೆ ಈ ಬಾಗಿಲು ಟೈಲ್ಸ್‌ ಅಳವಡಿಸಿದ ಗೋಡೆ ಎಂದಷ್ಟೇ ಕಾಣುತ್ತದೇ ಹೊರತು, ಬಾಗಿಲು ಎಂಬುದಾಗಿ ತಿಳಿಯುವುದಿಲ್ಲ. ಪೊಲೀಸ್‌ ದಾಳಿಯಾದಾಗ ಈ ಕೊಠಡಿಯಲ್ಲಿ ಅಶ್ರಯ ಪಡೆಯಬಹುದಾಗಿದೆ. ಪೊಲೀಸ್‌ ದಾಳಿ ನಡೆದರೆ ಲಾಡ್ಜ್ ಸಿಬಂದಿ ತ್ವರಿತವಾಗಿ ಸೂಚನೆ ನೀಡಿ ವೇಶ್ಯಾವಾಟಿಕೆ ನಿರತರನ್ನು ಈ ಬಾಗಿಲಿನ ಮೂಲಕ, ರಹಸ್ಯ ಕೋಣೆಗೆ ಬಂದು ತಪ್ಪಿಸಿಕೊಳ್ಳುವಂತೆ ಮಾಡಲಾಗಿದೆ. ಶುಕ್ರವಾರ ದಾಳಿ ನಡೆದಾಗ ಪೊಲೀಸರು ಈ ರಹಸ್ಯವನ್ನು ಪತ್ತೆ ಹಚ್ಚಿದ್ದಾರೆ.

‘ಒಡನಾಡಿ’ಯ ಕಾರ್ಯಾಚರಣೆ 
ವಿಶೇಷವೆಂದರೆ, ಈ ವೇಶ್ಯಾವಾಟಿಕೆ ಜಾಲವನ್ನು ಪತ್ತೆ ಹಚ್ಚಲು ಸಹಕರಿಸಿದ್ದು ಮೈಸೂರಿನ ಒಡನಾಡಿ ಸಂಸ್ಥೆ ಎನ್ನಲಾಗಿದೆ. ಈ ಸಂಸ್ಥೆ ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಬಗ್ಗೆ ವಿಶೇಷ ಗಮನವಿರಿಸಿ ನಿಗೂಢ ತನಿಖೆಯನ್ನೂ ನಡೆಸುತ್ತಿತ್ತು. ಮಂಗಳೂರಿನಲ್ಲಿ ವೇಶ್ಯಾವಾಟಿಕೆ ಜಾಲ ಇರುವುದನ್ನು ಪತ್ತೆ ಹಚ್ಚಿದ ಈ ಸಂಸ್ಥೆ, ಬಳಿಕ ಗಿರಾಕಿಗಳ ಹಾಗೂ ಇದೇ ವಸತಿ ಗೃಹದಲ್ಲಿ ಕೆಲಸ ಕೇಳುವ ನೆಪದಲ್ಲಿ ಬಂದು ಹೆಚ್ಚಿನ ಮಾಹಿತಿ ಕಲೆ ಹಾಕಿದರು. ಈ ನಡುವೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾಪ್ರಶಾಂತ್‌ ಅವರೊಂದಿಗೆ ನಿಕಟ ಸಂಪರ್ಕವಿರಿಸಿ ಎಲ್ಲ ಮಾಹಿತಿಗಳನ್ನು ನೀಡಿ ಲಾಡ್ಜ್ ಗೆ ದಾಳಿ ನಡೆಸುವಂತೆ ಮಾಡಲಾಯಿತು.

ಬಿಜೈನಲ್ಲಿ ಹೈಟೆಕ್‌ ವೇಶ್ಯಾವಾಟಿಕೆ : ಇಬ್ಬರ ಬಂಧನ, ಇಬ್ಬರ ರಕ್ಷಣೆ
ಮಂಗಳೂರು: ನಗರದಲ್ಲಿ ಇಂಟರ್‌ ನೆಟ್‌ ವೆಬ್‌ ಸೈಟ್‌ ಮೂಲಕ ಹೈಟೆಕ್‌ ವೇಶ್ಯಾವಾಟಿಕೆ ನಡೆಸುತ್ತಿದ್ದ ಬೃಹತ್‌ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆ ಹಚ್ಚಿ, ಈ ದಂಧೆಯನ್ನು ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿ ಅವರಿಂದ 2 ಮೊಬೈಲ್‌ ಫೋನ್‌, 30,220 ರೂ. ಮತ್ತು 2 ದ್ವಿಚಕ್ರ ವಾಹನಗಳು ಸಹಿತ ಒಟ್ಟು  1,26,295 ರೂ. ಮೌಲ್ಯದ ಸೊತ್ತು ಗಳನ್ನು ವಶಪಡಿಸಿಕೊಂಡು, ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ. ಪಿಂಪ್‌, ಉಡುಪಿ ಜಿಲ್ಲೆ ಪಡು ಪಲಿಮಾರ್‌ ನ ಜೀವನ್‌ ಪೂಜಾರಿ (27) ಮತ್ತು ಹಾಸನ ಜಿಲ್ಲೆ  ಚೆನ್ನರಾಯಪಟ್ಟಣ ತಾಲೂಕು ಹಿರಿಸಾವೆ ಹೋಬಳಿಯ ಕೆ.ಪಿ. ನಾಗರಾಜ್‌ (27) ಬಂಧಿತರು.

Advertisement

ಮಂಗಳೂರು ನಗರದಲ್ಲಿ ಮಂಗಳೂರು. ಲೊಕಾಂಟೊ.ನೆಟ್‌ ಎಂಬ ವೆಬ್‌ ಸೈಟ್‌ನಲ್ಲಿ ಇಂಟರ್‌ ನೆಟ್‌ ಮೂಲಕ ವೇಶ್ಯಾವಾಟಿಕೆಗಾಗಿ ಗ್ರಾಹಕರಿಗೆ ಯುವತಿಯರನ್ನು ಒದಗಿಸಿ ವ್ಯವಹಾರ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಶುಕ್ರವಾರ ನಗರದ ಬಿಜೈ ಕಾಪಿಕಾಡ್‌ ರಸ್ತೆಯ ಕೊಟ್ಟಾರ ಕ್ರಾಸ್‌ ಬಳಿಯ ಆಪಾರ್ಟ್‌ಮೆಂಟ್‌ ನ ಫ್ಲ್ಯಾಟ್‌ ಗೆ ದಾಳಿ ಮಾಡಿ ದಂಧೆಯನ್ನು ಪತ್ತೆ ಹಚ್ಚಿದ್ದರು. ವಶಕ್ಕೆ ಪಡೆದುಕೊಂಡ ಇಬ್ಬರು ಯುವತಿಯರನ್ನು ಮಹಿಳಾ ಸ್ವೀಕಾರ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ. ಈ ಹೈಟೆಕ್‌  ದಂಧೆಯಲ್ಲಿ ಭಾಗಿಯಾಗಿರುವ ಇಬ್ಬರು ಪಿಂಪ್‌ ಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಉರ್ವ ಪೊಲೀಸ್‌ ಠಾಣೆಗೆ ಹಸ್ತಾಂತರಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್‌ ಶಾಂತಾರಾಮ, PSIಗಳಾದ ಶ್ಯಾಮ್‌ ಸುಂದರ್‌, ಕಬ್ಟಾಳ್‌ ರಾಜ್‌ ಹಾಗೂ ಸಿಬಂದಿ ಮತ್ತು ಉರ್ವ ಠಾಣಾ ಪೊಲೀಸ್‌ ಇನ್ಸ್‌ಪೆಕ್ಟರ್‌ ರವೀಶ್‌ ನಾಯಕ್‌ ಹಾಗೂ ಸಿಬಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next