Advertisement

ಮೂರ್ತಿ ಮಹಿಮೆ

02:37 PM Feb 04, 2017 | |

ಫೋಟೋ ಅಂದರೆ ಇದಪ್ಪಾ! ಅನ್ನೋ ರೀತಿ ತೆಗೆಯೋದು ಬಹಳ ಕಷ್ಟ. ಆದರೆ ಚಾಮರಾಜಪೇಟೆಯ ಪ್ರೊ.ಶ್ರೀಧರಮೂರ್ತಿಯವರಿಗೆ ನೀರು ಕುಡಿದಷ್ಟು ಸುಲಭ.  ಚಕ್ರವರ್ತಿ ರಾಜಗೋಪಾಲ್‌ ಅವರ ಶಿಷ್ಯರಾಗಿರುವ ಇವರು  ಎರಡು, ಮೂರು ತಲೆಮಾರುಗಳ ಸಂಗೀತ, ಸಾಹಿತ್ಯ, ರಾಜಕೀಯ ಹೀಗೆ ನಾನಾ ಕ್ಷೇತ್ರದ ಸಾಧಕರನ್ನು “ಸೆರೆ’ಹಿಡಿದ “ಸೆರೆ’ಗಾರರು.  ಇವರ ಫೋಟೋ ನೋಡವುದೇ ಹಬ್ಬ, ಅಬ್ಬಬ್ಟಾ…

Advertisement

ಪಂಡಿತ್‌ ಗಂಗೂಬಾಯಿ ಹಾನಗಲ್‌ ಹಾಡ್ತಾ ಇದ್ದಾರೆ; ತನ್ಮಯತೆ. ಯಾವ ರಾಗವೋ ಏನೋ ಅವರನ್ನು ಸಂಪೂರ್ಣ ಆವಾಹಿಸಿಕೊಂಡಂತಿದೆ.  ಹಾಗೇ ನೋಡುತ್ತಲಿದ್ದರೇ ಹಿಂದೆ ಒಂದು ತಂಬೂರಿ ಹಿಡಿದಿದ್ದಾರೆ. ಮನಸ್ಸು ಹೌಹಾರಿತು. ಅರೇ… ಜೀವನದಲ್ಲಿ ಗಂಗೂಬಾಯಿ ಯಾವತ್ತು ತಂಬೂರಿ ಹಿಡಿದು ಕಾರ್ಯಕ್ರಮ ಕೊಟ್ಟವರಲ್ಲ. ಇದು ಹೇಗೆ ಸಾಧ್ಯವಾಯ್ತು? ನಿಜಕ್ಕೂ ತಂಬೂರಿ ಹಿಡಿದಿದ್ದಾರೆಯೇ? ಫೋಟೋ ಕೈಗಿಟ್ಟ ಪ್ರೊ.ಶ್ರೀಧರಮೂರ್ತಿಯವರು ಸುಮ್ಮನಿರಲಿಲ್ಲ…

  “ನಿಮ್ಮ ಅನುಮಾನ ಕರೆಕ್ಟ್. ಗಂಗೂಬಾಯಿ ಹಾನಗಲ್‌ ತಂಬೂರಿ ಹಿಡಿದೇ ಇಲ್ಲ. ನೀವು ನೋಡುತ್ತಿರುವ ಚಿತ್ರದಲ್ಲೂ’ ಅಂದರು. ಅರೆ ನೋಡಿದರೆ ಹಾಗೇ ಇದೆ. ಕಂಡಂತೆಯೂ ಕಾಣದಂತೆಯೂ ಇರಬೇಕು. ಅದೇ ಛಾಯಾಚಿತ್ರಗಾರನ ಜಾಣ್ಮೆ. ಮೂರ್ತಿಗಳು ನಕ್ಕರು. ಗಂಗೂಬಾಯಿ ಹಾಡ್ತಾನೇ ಇದ್ದರು.  ” ನೋಡಿ. ಹಾಗೇ ಇನ್ನೊಂದು ಫೋಟೋ’

 … ಪಂಡಿತ್‌ ಮಾಧವಗುಡಿ. ಅದು ಯಾವ ರಾಗವೋ ಏನೋ ಅದರ ಆಳದಲ್ಲಿ ಇಳಿದು, ಜಗತ್ತನ್ನೇ ಮರೆತು ತಾದಾತ್ಮದಿಂದ ಹಾಡುತ್ತಿರುವ ಭಿನ್ನವಾದ ಫೋಟೋವಾಗಿಬಿಟ್ಟಿದ್ದಾರೆ. 

Advertisement

  ಅಬ್ಟಾ…ಅನ್ನೋ ರೀತಿ ಮಾಡಿದ್ದು ಮಾತ್ರ ಸತ್ಯಜಿತ್‌ ರೇ ಅವರ ಫೋಟೋ. ಚುಟ್ಟಾದಿಂದ ಹೊರಬಿದ್ದ ಹೊಗೆ ಹಾಗೇ ರಿಂಗು, ರಿಂಗಾಗಿ ನಿಂತು ಬಿಟ್ಟಿದೆ. ಅದರಲ್ಲಿ ಹುದುಗಿರುವ ಮುಖ, ಚುಟ್ಟಾ ಎರಡೂ ಸ್ಪಷ್ಟವಾಗಿ ಕಾಣಿಸುವಂತೆ ಫೋಟೋ ತೆಗೆದಿದ್ದಲ್ಲ.  ಅದನ್ನು ಕಡೆದಿಟ್ಟಿರುವುದು. 

  ಬಿಳಿಕಪ್ಪು ಗಡ್ಡದಲ್ಲಿ ಯು.ಆರ್‌. ಅನಂತಮೂರ್ತಿ ನಗುತ್ತಿದ್ದರೆ, ದೇವನೂರ ಮಹದೇವರ ಮುಖದಲ್ಲಿ ಸಿಟ್ಟಿನ ಗೆರೆಗಳು ನಾಪತ್ತೆ. ಬೆಳ್ಳಗೆ ಕಾಣುತ್ತಾ ಕುಂ.ವೀ ಆಶ್ಚರ್ಯ ಮೂಡಿಸಿದರೆ, ಯಡಿಯೂರಪ್ಪನವರ ಮುಖದಲ್ಲಿ ಭಾರವಾದ ನಗು ಕಣ್ಮರೆ- ಇಂಥ ಫೋಟೋ ನಿಮಗೂ ಕಂಡರೆ ಅದರಲ್ಲಿ ಶ್ರೀಧರಮೂರ್ತಿ ಇರುತ್ತಾರೆ. ನಯನ್‌ಘೋಷ್‌, ರಾಜೀವ್‌ತಾರಾನಾಥ್‌, ಪಾಲಕ್ಕಾಡ್‌ ರಘು, ಕೆಎಸ್‌ನ, ದೇಜಗೌ, ಎಸ್‌.ಎಂ.ಕೃಷ್ಣ ಫೋಟೋಗಳಲ್ಲೂ ಶ್ರೀಧರಮೂರ್ತಿಗಳ ನೆರಳು, ಬೆಳಕಿನ ಜೂಟಾಟ ಹುಡುಕಬಹುದು. 

  ಶ್ರೀಧರಮೂರ್ತಿಗಳು ನಮ್ಮ ಎರಡು, ಮೂರು ತಲೆಮಾರಿನ ಸಂಗೀತಗಾರರು, ಸಾಹಿತಿಗಳು, ರಾಜಕಾರಣಿಗಳ ಸೌಂದರ್ಯಗಳನ್ನು ಹಿಡಿದಿಟ್ಟಿರುವ ಸೆರೆಗಾರ. ಎನ್‌.ಎಂ.ಕೆ.ಆರ್‌ವಿ ಕಾಲೇಜಿನಲ್ಲಿ ಮನಃಶಾಸ್ತ್ರ ಪ್ರೊಫೆಸರರಾಗಿ ಈಗ ನಿವೃತ್ತಿ. ಕಣ್ಣಿಗೆ ಫೋಟೋಗ್ರಫಿ; ಕಿವಿಗೆ ಸಂಗೀತ.

  “ಫೋಟೋಗ್ರಫಿ ನನಗೆ ಸಂಗೀತಗಾರರನ್ನು ಹತ್ತಿರ ಮಾಡಿದೆ. ಸಂಗೀತ ವಿನಿಮಯ ಆಗಿದೆ. ಒಂದು ಸಲ ಲಾಹೋರ್‌ನಲ್ಲಿ ನನ್ನ ಫೋಟೋಗಳ ಪ್ರದರ್ಶನ ಆಯ್ತು. ಪ್ರಶಸ್ತಿಗಳು ಬಂದವು. ಇದಾದ ಮೇಲೆ ಮನೆಗೆ ಒಂದು ಪತ್ರ ಬಂತು. “ನಾನು ನಿಮ್ಮ ಪ್ರದರ್ಶನ ನೋಡಿದ್ದೇನೆ. ಅದರಲ್ಲಿ  ಒಂದು ಪುಟ್ಟ ಮಗು ನಗುತ್ತಿರುವ ಫೋಟೋ ಬಹಳ ಇಷ್ಟ ಆಯ್ತು. ತುಂಬು ಗರ್ಭಿಣಿ ನಾನು. ಆ ಮಗು ಚಿತ್ರವನ್ನು ಪದೇ, ಪದೇ ನೋಡಬೇಕು ಎನಿಸುತ್ತಿದೆ. ದಯಮಾಡಿ ಆ ಫೋಟೋ ನನಗೆ ಕೊಡಿ’ ಅಂತ ಒಬ್ಬ ಹೆಂಗಸು ಪತ್ರ ಬರೆದಿದ್ದಳು. ಫೋಟೋ ಕಳುಹಿಸಿದೆ. ಆಕೆ ಖುಷಿಯಾದಳು. ನನಗೆ ಪಾಕಿಸ್ತಾನಿ ಹಾಡುಗಾರ ಸಲಾಮುತ್ತಾಲಿ, ರಜಾಕತ್ತಾಲಿ ಅವರ 30 ಕ್ಯಾಸೆಟ್‌ಗಳನ್ನು ಕಳುಹಿಸಿದಳು. ಇದ್ದಕ್ಕಿಂತ ಬೇರೆ ಭಾಗ್ಯ ಬೇಕಾ?’

 ಶ್ರೀಧರಮೂರ್ತಿಗಳು ಹಿರಿಯ ಫೋಟೋಗ್ರಾಫ‌ರ್‌.  ರಾಜಗೋಪಾಲ್‌, ಸುಂದರಂ, ಶ್ರೀನಿವಾಸ್‌ ಅವರ ಶಿಷ್ಯರು. ಗಾಂಧಿಬಜಾರ್‌ನಲ್ಲಿದ್ದ ಸುಂದರಂ ಅವರ “ಜೂಮ್‌’ ಸ್ಟುಡಿಯೋದಲ್ಲಿ ಇವರ ತಾಲೀಮು. ಪ್ರತಿದಿನ ಒಂದಷ್ಟು ಛಾಯಾಚಿತ್ರಗಳೊಂದಿಗೆ ಚರ್ಚೆ, ಹರಟೆ. ಆಗ ಬಸವನಗುಡಿ ಕ್ಲಬ್‌ಗ ಹೋಗುವ ಮೊದಲು ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಈ ಸ್ಟುಡಿಯೋಗೆ ಬರುತ್ತಿದ್ದರಂತೆ. “ಏನ್ರೊà, ಇವತ್ತು ಏನು ತೆಗೆದಿದ್ದೀರಾ’ ಅಂತ ಕೇಳಿ, ಫೋಟೋ ನೋಡಿ ಕಣ್ತುಂಬಿಕೊಂಡು ಕ್ಲಬ್‌ಗ ಹೋಗುತ್ತಿದ್ದರಂತೆ. 

 “ನಾವೆಲ್ಲ ಹಂಡ್ರೆಡ್‌ ಪರ್ಸೆಂಟ್‌ ಫೋಟೋಗ್ರಾಫ‌ರ್‌. ಡೆವಲಪ್‌, ಪ್ರೊಸಸಿಂಗ್‌, ಪ್ರಿಂಟಿಂಗ್‌ ಹೀಗೆ ಎಲ್ಲವೂ ಗೊತ್ತಿತ್ತು. ರಾಜಗೋಪಾಲ್‌ ಕೇಳ್ಳೋರು ” ಡು ಯು ಸೀ ವಾಟ್‌ ಐ ಸಿ’.  ” ನೋ ‘ ಅಂದರೆ ಸಾಕು.  “ಸೆಲ್‌ ಕ್ಯಾಮರಾ ಬೈ ಎ ಕಲರ್‌ ಟಿವಿ’ ಅನ್ನೋರು. 

  “ಅಂದರೆ ಫೋಟೋಗ್ರಫಿಯಲ್ಲಿ ಪ್ರೊಸಸ್‌ನ ಹೇಳಿಕೊಡಬಹುದು. ಆದರೆ ನೋಡೋದನಲ್ಲ. ನೋಟ ಅನ್ನೋದು ನಮ್ಮ ಪರ್ಸನಲ್‌ ಜರ್ನಿ. ಒಬ್ಬ ಗುರುವಿಗೆ 10 ಜನ ಶಿಷ್ಯರಿದ್ದರೂ, 10 ಜನರ ಫೋಟೋಗ್ರಫಿ ಬೇರೆ, ಬೇರೆ ರೀತಿ ಇರುತ್ತದೆ. ನಾನು ಸುಮಾರು 9 ವರ್ಷಗಳ ಕಾಲ ಬರೀ ಅವರಿವರು ತೆಗೆದ ಬೆಸ್ಟ್‌ ಫೋಟೋಗ್ರಾಫ್ಗಳನ್ನು ನೋಡುತ್ತಾ ಪ್ರಜ್ಞೆಯ ಆಳದಲ್ಲಿ ಇಳಿಸಿಕೊಂಡಿದ್ದೇನೆ’ ಅಂತಾರೆ ಶ್ರೀಧರಮೂರ್ತಿ.

  ಮೂರ್ತಿಗಳಿಗೆ ಫೋಟೋ ಆದಾಯ ಮೂಲವಲ್ಲ; ಅದು ಹುಚ್ಚು ಮತ್ತು ಪ್ರೀತಿ. ಸಂಗೀತ, ಸಾಹಿತ್ಯದ ಮೇಲೆ ಮಮತೆ ಇರೋದರಿಂದ ಕಲಾವಿದರ ಫೋಟೋ ತೆಗೀತೀನಿ ಅಷ್ಟೇ ಆಂತಾರೆ. ಪಂಡಿತ್‌ ಪುಟ್ಟರಾಜಗವಾಯಿಗಳು, ಪಂಡಿತ್‌ ಎಂ. ವೆಂಕಟೇಶ್‌ಕುಮಾರ್‌, ವಿದ್ವಾಂಸ ಲಕ್ಷೀಶ ತೋಳಾºಡಿ ಇಂಥ ಮಹನೀಯರನ್ನು ಮನೆಗೆ ಕರೆದು, ಆದರಿಸಿ ಫೋಟೋ ತೆಗೆಯೋದು ಉಂಟು. ಕೆಲವರು ಇವರನ್ನೇ ಕರೆಸಿಕೊಂಡು, ಕೆಲ ಸಲ ಇವರೇ ಹುಡುಕಿಕೊಂಡು ಅವರ ಫೋಟೋ ತೆಗೆದ ಪ್ರಸಂಗಗಳು ಉಂಟು. 

  “ಒಂದು ಸಲ ಒಬ್ಬ ಆಫೊÅà-ಅಮೇರಿಕನ್‌ ಹುಡುಗನೊಬ್ಬನನ್ನು ನೋಡ ನೋಡುತ್ತಿದ್ದಂತೆ ಫೋಟೋ ತೆಗೆಯುವ ಉಮೇದು ಜಾಸ್ತಿ ಆಯ್ತು. ಅವನನ್ನು ಫ್ರೆಂಡ್‌ ಮಾಡಿಕೊಂಡೆ. ವಿದ್ಯಾರ್ಥಿಭವನದ ದೋಸೆ ಕೊಡಿಸಿ, ಬ್ರಾಹ್ಮಣರ ಕಾಫಿ ಬಾರ್‌ನ ಇಡ್ಲಿ ತಿನ್ನಿಸಿ ಹೀಗೆ ತಿಂಗಳ ಕಾಲ ಊಟ ತಿಂಡಿ ಕೊಡಿಸಿ, ನಂಬಿಕೆ ಹುಟ್ಟಿದ ಮೇಲೆ  ಫೋಟೋ ಪ್ರಪೋಸ್‌ ಮಾಡಿದೆ. ಒಪ್ಪಿದ.  ಅನಂತರ ಆ ವ್ಯಕ್ತಿಯ ಬ್ಯಾಗ್ರೌಂಡ್‌ ಕಪ್ಪು ಇಟ್ಟು ತೆಗೆದೆ. ಅದ್ಬುತ ಫೋಟೋ ಬಂತು ‘ ಶ್ರೀಧರಮೂರ್ತಿಗಳು ನೆನಪಿಸಿಕೊಳ್ಳುತ್ತಾರೆ. 

  ಮೂರ್ತಿಗಳು ಫೋಟೋದಲ್ಲಿ ಚಮತ್ಕಾರವಿಲ್ಲ. ಫೋಟೋ ಹಿನ್ನೆಲೆಗೆ ಬಳಸೋದು ಅವರ ತಾಯಿಯ ಸೀರೆ ಅಥವಾ ಬೆಡ್‌ಷಿಟ್‌. ಇಡೀ ಚಿತ್ರದಲ್ಲಿ ಕಾಣೋದು ನೆರಳು ಬೆಳಕಿನ ಆಟ ಮಾತ್ರ. ಶ್ರೀಧರಮೂರ್ತಿಗಳ ಪ್ರಕಾರ ಚಿತ್ರ ಅಲ್ಲಿರುತ್ತದೆ. ಅದರಲ್ಲಿ ಬೇಡವಾದ ಸಂಗತಿ ತೆಗೆದು ನಮಗೆ ಬೇಕಾಗಿರೋದನ್ನು ಹೇಳ್ಳೋದು ಫೋಟೋಗ್ರಾಫ‌ರ್‌ನ ವ್ಯಾಖ್ಯಾನ. ಚಿತ್ರಕ್ಕೆ ಜೀವಂತಿಕೆ ಕೋಡೋದು ಅವನ ಕ್ರಿಯಶೀಲತೆ. ಇಲ್ಲ ಅಂದರೆ ಎಲ್ಲವೂ ಮದುವೆ ಆಲ್ಬಂ ಆಗುತ್ತದಂತೆ. 

  “ಈ ಕಾಲದ ಹೈ ಎಂಡ್‌ ಕ್ಯಾಮರಾಗಳಿಂದ ಫೋಟೋಗ್ರಾಫ‌ರ್‌ಗಳ ಒದ್ದಾಟಗಳನ್ನು ಕಡಿಮೆ ಮಾಡಬಹುದೇ ಹೊರತು  ಭಾವಪೂರ್ವಕ, ಜೀವಂತಿಕೆ ಇರೋ ಒಳ್ಳೇ ಫೋಟೋ ಬರೋಲ್ಲ. ಒಳ್ಳೇ ಫೋಟೋ ಬರಬೇಕಾದರೆ ತಲೆಯಲ್ಲಿ ಇಮೇಜ್‌ ಇರಬೇಕು’  ಅನ್ನೋದು ಶ್ರೀಧರಮೂರ್ತಿಗಳ ನಂಬಿಕೆ.  ಈ ಕಾರಣಕ್ಕೆ ಅವರು ಮೂಡ್‌ ಕ್ರಿಯೇಟ್‌ ಮಾಡೋಲ್ಲ,  ಹುಟ್ಟಿದ ಮೂಡಿಗೆ ಕ್ಯಾಮರ ಇಡುತ್ತಾರೆ. 

 ಮೂರ್ತಿ ಚಿಕ್ಕದಾದರೂ ಫೋಟೋಗಳು ದೊಡ್ಡದು. 

 ಕಟ್ಟೆ ಗುರುರಾಜ್

Advertisement

Udayavani is now on Telegram. Click here to join our channel and stay updated with the latest news.

Next