ಹುಬ್ಬಳ್ಳಿ: ಕಲ್ಲು ತೂರಾಟ, ದಾಂಧಲೆ ನಡೆಸಿ ಕಾನೂನು ಕೈಗೆತ್ತಿಕೊಳ್ಳುವ ಪ್ರಯತ್ನ ಮಾಡಿದವರು ಯಾರೇ ಆಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಹಾಗೂ ಗಲಭೆಯಲ್ಲಿ ಕಲ್ಲು ತೂರಾಟಕ್ಕೆ ಗುರಿಯಾಗಿದ್ದ ದಿಡ್ಡಿ ಓಣಿ ಹನುಮಂತ ದೇವಸ್ಥಾನಕ್ಕೆ ಭೇಟಿ ಕೊಟ್ಟ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಯುವಕನೊಬ್ಬ ವಾಟ್ಸ್ಆ್ಯಪ್ ನಲ್ಲಿ ಸ್ಟೇಟ್ಸಸ್ ಇರಿಸಿದ್ದಕ್ಕೆ ಪೊಲೀಸರು ಅವನನ್ನು ಕೂಡಲೇ ಬಂಧಿಸಿದ್ದರು. ಬಂಧಿಸಿದ್ದರೂ ನೂರಾರು ಜನರು ಸೇರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಲ್ಲದೆ ಯುವಕನನ್ನು ಒಪ್ಪಿಸಿ ಎಂದು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಅವರ ವಾಹನಗಳನ್ನು ಜಖಂ ಮಾಡಿ ಓಣಿಗಳಲ್ಲಿ ಕಲ್ಲು ತೂರಾಟ ಮಾಡಿ ಅರಾಜಕತೆ ಉಂಟು ಮಾಡಿದ್ದಾರೆ. ಇದನ್ನು ಸರಕಾರ ತೀವ್ರ ವಾಗಿ ಖಂಡಿಸುತ್ತದೆ ಎಂದರು.
ಇಂತಹ ಘಟಬೆಯನ್ನು ಸಹಿಸಲಾಗದು. ಕಾನೂನು ಕೈಗೆ ತೆಗೆದುಕೊಳ್ಳುತ್ತೇನೆಂಬುವವರ ಅಲೋಚನೆ ಇಲ್ಲಿ ನಡೆಯುವುದಿಲ್ಲ. ಕಾನೂನು ಮತ್ತು ಸಂವಿಧಾನ ಯಾರು ಉಲ್ಲಂಘನೆ ಮಾಡುತ್ತಾರೋ ಅವರು ಈ ದೇಶದ ನಾಗರಿಕರಲ್ಲ. ಆ ಕಾರಣಕ್ಕಾಗಿ ಸರಿಯಾದ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ. ಈಗಾಗಲೇ ಕೆಲ ಕಿಡಿಗೇಡಿಗಳನ್ನು ಬಂಧಿಸಲಾಗಿದೆ. ಈ ಕುರಿತು ತನಿಖೆ ನಡೆದಿದೆ. ಅವರು ಯಾರೇ ಆಗಲಿ ಕಠಿಣ ಶಿಕ್ಷೆ ನೀಡಲಾಗುವುದು ಎಂದರು.
ಇಂಟಲಿಜೆನ್ಸ್ ವೈಫಲ್ಯ ಎನ್ನುವಂತಿಲ್ಲ
ಈ ಘಟನೆಯಲ್ಲಿ ಯಾವ ಸಂಘಟನೆಗಳಿವೆ. ಅವನ್ನೆಲ್ಲ ಹೊರಗೆ ತರುತ್ತೇವೆ. ಮುಂದೆ ಎಲ್ಲಾ ಧರ್ಮದವರು ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಈ ರೀತಿ ಆದಲ್ಲಿ ಸರಕಾರವಿದೆ. ಪೋಲೀಸರಿದ್ದಾರೆ. ಅವರು ಯಾವ ರೀತಿ ಕಾನೂನು ಕ್ರಮ ಕೈಗೊಳ್ಳುತ್ತಾರೆ ಅವರಿಗೆ ಬಿಟ್ಟದ್ದು. ಏಕಾಏಕಿ ಗಲಭೆ ನಡೆದಿದ್ದು, ಹೀಗಾಗಿ ಇಂಟಲಿಜೆನ್ಸ್ ವೈಫಲ್ಯ ಎನ್ನುವಂತಿಲ್ಲ. ಇನ್ನು ಪೂರ್ವಯೋಜಿತ ಗಲಾಟೆಯೋ ಏನೆಂಬುದರ ಬಗ್ಗೆ ತನಿಖೆ ನಂತರ ತಿಳಿಯುತ್ತದೆ ಎಂದರು.