Advertisement

ಸದನದಲ್ಲಿ ಮೇಲ್ಸೇತುವೆ ಹೋರಾಟ ಪ್ರಸ್ತಾಪ

01:07 PM Mar 27, 2017 | |

ದಾವಣಗೆರೆ: ಅಶೋಕ ಚಿತ್ರಮಂದಿರ ಬಳಿಯ ರೈಲ್ವೆ ಹಳಿಗೆ ಮೇಲ್ಸೇತುವೆ ನಿರ್ಮಾಣ, ನಿರಂತರ ಧರಣಿ ವಿಷಯವನ್ನು ಸೋಮವಾರ ಜೆಡಿಎಸ್‌ನಿಂದ ವಿಧಾನ ಸಭೆಯಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ಮಾಜಿ ಸಚಿವ, ಜೆಡಿಎಸ್‌ ನಾಯಕ ಬಂಡೆಪ್ಪ ಕಾಶೆಂಪುರ ತಿಳಿಸಿದ್ದಾರೆ. 

Advertisement

ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಜೆಡಿಎಸ್‌ನಿಂದ ಹಮ್ಮಿಕೊಂಡಿರುವ ನಿರಂತರ ಅಹೋರಾತ್ರಿ ಧರಣಿಯ 7ನೇ ದಿನವಾದ ಭಾನುವಾರ ಧರಣಿನಿರತರನ್ನು ಭೇಟಿಮಾಡಿ, ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಅವರು, ಅಶೋಕ ರಸ್ತೆ ರೈಲ್ವೆ ಗೇಟ್‌ ಸಮಸ್ಯೆ ಕಳೆದ 40 ವರ್ಷಗಳಿಂದ ನಗರವನ್ನು ಕಾಡುತ್ತಿದೆ.

ಜನ ದಿನಂಪ್ರತಿ ಸಂಚಾರ ಸಮಸ್ಯೆಗೆ ಈಡಾಗುತ್ತಿದ್ದಾರೆ. ಎರಡು ವಿಧಾನ ಸಭಾ ಕ್ಷೇತ್ರಗಳ ಮಧ್ಯಭಾಜಕದಂತಿರುವ ರೈಲ್ವೆ ಹಳಿಯು ನಗರವನ್ನು ಇಬ್ಭಾಗ ಮಾಡಿದೆ. ಇದರ ಸಮಸ್ಯೆ ನಿವಾರಣೆ ಆಗಬೇಕಿದೆ ಎಂದರು. ಇಲ್ಲಿನ ಜನಪ್ರತಿನಿಧಿಗಳು ಈ ಕುರಿತು ನಿರಾಸಕ್ತಿ ಹೊಂದಿದ್ದಾರೆ. ಸೇತುವೆ ನಿರ್ಮಾಣಕ್ಕೆ ಮೂರು ವರ್ಷಗಳ ಹಿಂದೆಯೇ ಅನುದಾನ ಬಿಡುಗಡೆ ಆಗಿದೆ.

ಕಾಮಗಾರಿ ಕೈಗೊಳ್ಳುವ ಬದಲು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುತ್ತಾ ಕಾಮಗಾರಿ ಆರಂಭಿಸುವಲ್ಲಿ ವಿನಾ ಕಾರಣ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಜೆಡಿಎಸ್‌ ಕಾರ್ಯಕರ್ತರು ಜನರ ಸಮಸ್ಯೆ ಮುಂದಿಟ್ಟುಕೊಂಡು ಇದೀಗ ಹೋರಾಟಕ್ಕೆ ಇಳಿದಿದ್ದಾರೆ. ಇದು ನಿಜಕ್ಕೂ ಉತ್ತಮ ಹೋರಾಟ. ಇದು ಸಫಲವಾಗುವವರಗೆ ಹೋರಾಟ ನಡೆಸಿ ಎಂದು ಕಾರ್ಯಕರ್ತರಿಗೆ ಕರೆಕೊಟ್ಟರು. 

ವಿಧಾನ ಸಭಾ ಅಧಿವೇಶನ ನಡೆಯುತ್ತಿದೆ. ಸೋಮವಾರ ಶೂನ್ಯ ವೇಳೆಯಲ್ಲಿ ನಮ್ಮ ಪಕ್ಷದ ವಿಧಾನ ಸಭಾ ಉಪ ನಾಯಕ ವೈ. ಎಸ್‌.ವಿ. ದತ್ತಾರ ಮೂಲಕ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪ ಮಾಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಎಸ್‌. ಮಲ್ಲಿಕಾರ್ಜುನ್‌, ಲೋಕೋಪಧಿ ಯೋಗಿ ಇಲಾಖೆ ಸಚಿವ ಎಚ್‌.ಸಿ. ಮಹಾದೇವಪ್ಪನವರ ಮೇಲೆ ಒತ್ತಡ ಹೇರಿ, ಶೀಘ್ರ ಕಾಮಗಾರಿ ಆರಂಭಿಸಲು ಕ್ರಮ ವಹಿಸುವಂತೆ ಮನವಿಮಾಡಲಾಗುವುದು ಎಂದು ತಿಳಿಸಿದರು. 

Advertisement

ಹೋರಾಟದ ರೂವಾರಿ, ಜೆಡಿಎಸ್‌ ಯುವ ಘಟಕದ ಜಿಲ್ಲಾಧ್ಯಕ್ಷ ಜೆ. ಅಮಾನುಲ್ಲಾ ಖಾನ್‌ ಮಾತನಾಡಿ, ನಗರದಸಮಸ್ಯೆ ಕುರಿತು ಜಿಲ್ಲಾಡಳಿತ, ರೈಲ್ವೆ ಇಲಾಖೆ  ಆಧಿಕಾರಿಗಳು ಪರಸ್ಪರ ದೋಷಾರೋಪಣೆ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಅನುದಾನ ಬಂದರೂ ಕಾಮಗಾರಿ ಆರಂಭಕ್ಕೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಜನರು ನಿರಂತರ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದರು.

ಜೆಡಿಎಸ್‌ನಿಂದ ಕಳೆದ 7 ದಿನಗಳಿಂದ ನಿರಂತರ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ.ಆದರೂ ಯಾವುದೇ ಪರಿಹಾರ ಸೂಚಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ರೈಲ್ವೆ ಇಲಾಖೇ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಕಾಮಗಾರಿ ಆರಂಭಕ್ಕೆ ಕ್ರಮ ವಹಿಸುವ ಬದಲು ಇಂದು, ನಾಳೆ ಎಂದು ನೆಪ ಹೇಳುತ್ತಿದ್ದಾರೆ ಎಂದರು. 

ಪಕ್ಷದ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಟಿ. ಅಸರ್‌, ಮುಖಂಡರಾದ ಅನೀಸ್‌ಪಾಷ, ಕೆ. ಮಂಜುಳ, ಬಾತಿ ಶಂಕರ್‌, ಕೆ. ಹನೀಫ್‌ ಸಾಬ್‌, ಖಾದರ್‌ ಬಾಷ, ಬಾಷಾಸಾಬ್‌, ಜಹಿರುದೀªನ್‌ಖಾನ್‌, ಅಹಮದ್‌ಬಾಷ, ಫಕೃದೀನ್‌, ಟಿ. ಮಹಮದ್‌ ಗೌಸ್‌, ಜೆ.ಎಂ. ಬಾಷ, ಕೆ.ಎಚ್‌. ಪ್ರಕಾಶ್‌, ಎ. ಶ್ರೀನಿವಾಸ್‌, ಹನುಮಂತ ರೆಡ್ಡಿ ಧರಣಿಯ ನೇತೃತ್ವ ವಹಿಸಿದ್ದರು. ಸಿಪಿಐಎಂಎಲ್‌ನ ಕೆ.ಎಲ್‌. ಭಟ್‌, ಇ. ಶ್ರೀನಿವಾಸ್‌ ಹೋರಾಟ ಬೆಂಬಲಿಸಿ, ಕೆಲಹೊತ್ತು ಧರಣಿಯಲ್ಲಿ ಪಾಲ್ಗೊಂಡರು.  

Advertisement

Udayavani is now on Telegram. Click here to join our channel and stay updated with the latest news.

Next