Advertisement

ಕೆರೆಗೆ ನೀರು ಹರಿಸಲು ಕೇಂದ್ರಕ್ಕೆ ಪ್ರಸ್ತಾವನೆ

01:03 PM Jul 16, 2019 | Team Udayavani |

ರಾಮನಗರ: ಜಿಲ್ಲೆಯಲ್ಲಿ ಕೈಗೊಂಡಿರುವ ಕರೆಗಳಿಗೆ ನೀರು ಹರಿಸುವ ಯೋಜನೆಯ ಬಗ್ಗೆ ಭಾರತ ಸರ್ಕಾರದ ಗಮನ ಸೆಳೆದು, ಇತರ ರಾಜ್ಯಗಳು ಸಹ ಈ ಮಾದರಿಯನ್ನು ಅನುಸರಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭಾರತ ಸರ್ಕಾರದ ಜಲಶಕ್ತಿ ಅಭಿಯಾನದ ಜಿಲ್ಲಾ ಉಸ್ತುವಾರಿ ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯದ ಆರ್ಥಿಕ ಸಲಹೆಗಾರರಾದ ಯೋಗಿತಾ ಸ್ವರೂಪ್‌ ತಿಳಿಸಿದರು.

Advertisement

ಸದರಿ ಅಭಿಯಾನವನ್ನು ಪರಿಣಾಮಗಾರಿಯಾಗಿ ಜಿಲ್ಲೆಯಲ್ಲಿ ಜಾರಿಗೊಳಿಸುವ ಸಲುವಾಗಿ ಜಿಲ್ಲಾ ಕಚೇರಿಗಳ ಸಂಕಿರ್ಣದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ, ಭಾರತ ಸರ್ಕಾರ ದೇಶಾದ್ಯಂತ ಜಲ ಭದ್ರತೆಗಾಗಿ ಜಲ ಶಕ್ತಿ ಅಭಿಯಾನವನ್ನು ಇದೇ ಸೆಪ್ಟಂಬರ್‌ನಿಂದ ಹಮ್ಮಿಕೊಂಡಿದೆ. ನದಿ ಮೂಲಗಳಿಂದ ಕರೆಗಳಿಗೆ ನೀರು ಹರಿಸಿ ಶೇಖರಿಸುವ ಯೋಜನೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಜಲಮೂಲ ರಕ್ಷಣೆಗೆ ಜಲಶಕ್ತಿ ಅಭಿಯಾನ: ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನದ ಬಗ್ಗೆ ವಿವರ ನೀಡಿದ ಅವರು, ಪಾರಂಪರಿಕ ಜಲಮೂಲಗಳಾದ ಕೆರೆ, ಬಾವಿ, ನದಿಗಳ ರಕ್ಷಣೆ, ಜಲರಕ್ಷಣೆ, ಜಲ ಮರುಪೂರಣ ಹಾಗೂ ಅರಣ್ಯೀಕರಣ ಮಾಡುವುದು ಜಲಶಕ್ತಿ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ರಾಜ್ಯ ಸರ್ಕಾರ ಜಾರಿಗೊಳಿಸಿರುವ ಜಲಾಮೃತ ಯೋಜನೆಯಡಿ ಕರೆಕಟ್ಟೆಗಳಲ್ಲಿರುವ ಹೂಳು ತೆಗೆಸಿ, ಕರೆ ಬದುಗಳಲ್ಲಿ ಸಸಿಗಳನ್ನು ನೆಟ್ಟು ಹಸರೀಕರಣಗೊಳಿಸುವುದು ಹಾಗೂ ಜಲ ಸಾಕ್ಷಾರತೆ, ಜಲ ಪುನಃಶ್ಚೇತನ, ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿರುವುದು ಶ್ಲಾಘನೀಯ ಎಂದರು.

ಆಂದೋಲನಕ್ಕೆ ಕ್ರಿಯಾ ಯೋಜನೆ ರೂಪಿಸಿ: ಜಿಲ್ಲಾದ್ಯಂತ ನಿರ್ಮಾಣವಾಗಿರುವ 1716 ಮಲ್ಟಿ ಆರ್ಚ್‌ ಚೆಕ್‌ ಡ್ಯಾಂ, ಕೃಷಿ ಹೊಂಡ ನಿರ್ಮಾಣ, ಕೊಳವೆ ಬಾವಿ ಮರು ಪೂರ್ಣ, ನರೇಗಾ ಮೂಲಕ 256 ಕೆರೆಗಳ ಅಭಿವೃದ್ಧಿ, ಖಾಸಗಿ ಸಂಸ್ಥೆಗಳ ಸಾಮಾಜಿಕ ಸೇವಾ ಯೋಜನೆಯಡಿ ಹೂಳು ತೆಗೆಯುವ ಕಾಮಗಾರಿ ಹಾಗೂ ಅರಣ್ಯೀಕರಣ ಕುರಿತಂತೆ ಮಾಹಿತಿ ಪಡೆದ ಅವರು, ಜಲಶಕ್ತಿ ಆಂದೋಲನ ಕುರಿತಂತೆ ಕ್ರಿಯಾಯೋಜನೆ ತಯಾರಿಸುವಂತೆ ತಿಳಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ, ಭಾರತ ಸರ್ಕಾರದ ಕೃಷಿ ಸಚಿವಾಲಯದ ಉಪ ಕಾರ್ಯದರ್ಶಿ ರಾಜೇಶ್‌ ಜೈಸ್ವಾಲ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ.ಎನ್‌. ನಾಗರಾಜ್‌, ಉಪಾಧ್ಯಕ್ಷೆ ವೀಣಾ ಕುಮಾರಿ, ಜಿಲ್ಲಾ ಪಂಚಾಯ್ತಿ ಸಿಇಒ ಎಂ.ಪಿ. ಮುಲ್ಲೈ ಮುಲನ್‌, ತಾಲೂಕು ಪಂಚಾಯ್ತಿ ಅಧ್ಯಕ್ಷ ಗಾಣಕಲ್ ನಟರಾಜ್‌ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಕೇಂದ್ರ ಸರ್ಕಾರದ ಈ ಅಧಿಕಾರಿಗಳ ನಿಯೋಗ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿ, ಜಲ ಸಂರಕ್ಷಣೆ ಕುರಿತು ಅನುಷ್ಠಾನಗೊಳಿಸಿರುವ ಕಾಮಗಾರಿಗಳನ್ನು ವೀಕ್ಷಿಸಿತು.

Advertisement

Udayavani is now on Telegram. Click here to join our channel and stay updated with the latest news.

Next