Advertisement

ಬಿಸಿಯೂಟಕ್ಕೆ ಸಿರಿಧಾನ್ಯ ಬಳಸಲು ಪ್ರಸ್ತಾವನೆ

01:57 AM Jan 28, 2019 | |

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಿರಿಧಾನ್ಯದ ಬಿಸಿಯೂಟ ದೊರೆಯುವ ದಿನಗಳ ಸನ್ನಿಹಿತವಾಗುತ್ತಿದೆ.

Advertisement

ಹೌದು, ಸಿರಿಧಾನ್ಯಗಳಿಂದ ಸಿದ್ಧಪಡಿಸಿದ ಮಧ್ಯಾಹ್ನದ ಬಿಸಿಯೂಟವನ್ನು ವಿದ್ಯಾರ್ಥಿಗಳಿಗೆ ನೀಡುವ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಧ್ಯಾಹ್ನದ ಬಿಸಿಯೂಟ ಯೋಜನೆ ವಿಭಾಗದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಸಮ್ಮಿಶ್ರ ಸರ್ಕಾರ ಈ ಕುರಿತು ಆಸಕ್ತಿ ಹೊಂದಿದ್ದು, ಇದಕ್ಕೆ ಸರಿಯಾಗಿ ಇಲಾಖೆಯಿಂದ ಪ್ರಸ್ತಾವನೆಯೂ ಸಲ್ಲಿಕೆಯಾಗಿದೆ. ಸಿರಿಧಾನ್ಯದ ಲಭ್ಯತೆ ಹಾಗೂ ಹೆಚ್ಚುವರಿ ವೆಚ್ಚದ ಕುರಿತು ಸರ್ಕಾರದಿಂದ ಪರಿಶೀಲನೆ ನಡೆಸಲಾಗುತ್ತಿದೆ. ಆರ್ಥಿಕ ಇಲಾಖೆಯ ಒಪ್ಪಿಗೆ ಪಡೆದ ನಂತರ ಸರ್ಕಾರ ಮುಂದಿನ ಕ್ರಮ ತೆಗೆದುಕೊಳ್ಳಲಿದೆ. ಸರ್ಕಾರದಿಂದ ಅನುಮತಿ ಸಿಕ್ಕ ನಂತರ ವಿದ್ಯಾರ್ಥಿಗಳಿಗೆ ಸಿರಿಧಾನ್ಯದ ಬಿಸಿಯೂಟ ನೀಡಲಾಗುತ್ತದೆ ಎಂದು ಬಿಸಿಯೂಟ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಅನ್ನ ಮತ್ತು ಸಾರು ಸಹಿತವಾದ ಬಿಸಿಯೂಟ ನೀಡಲಾಗುತ್ತಿದೆ. ಮಕ್ಕಳಲ್ಲಿ ಪೌಷ್ಟಿಕಾಂಶವನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಸಿರಿಧಾನ್ಯಗಳಿಂದ ಸಿದ್ಧಪಡಿಸಿದ ಬಿಸಿಯೂಟ ನೀಡಲು ಇಲಾಖೆಯಿಂದ ಪ್ರಸ್ತಾವನೆ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಬಾರ್ಲಿ, ಸಾಮೆ, ರಾಗಿ, ಸಜ್ಜೆ, ನವಣೆ, ಆರ್ಕ, ಊದಲು, ಬರಗು, ಜೋಳ ಮೊದಲಾದ ಸಿರಿಧಾನ್ಯಗಳಲ್ಲಿ ಪ್ರಾದೇಶಿಕವಾಗಿ ಲಭ್ಯವಾಗಿರುವ ಸಿರಿಧಾನ್ಯ ಅಥವಾ ರಾಜ್ಯದ ಎಲ್ಲ ವಿದಾರ್ಥಿಗಳಿಗೂ ಒಂದೇ ಬಗೆಯ ಸಿರಿಧಾನ್ಯದ ಬಿಸಿಯೂಟ ನೀಡುವುದಾದರೂ ಸಮಸ್ಯೆ ಇಲ್ಲ ಎಂಬ ಅಂಶಸಹಿತ ವಿವರವಾದ ಪ್ರಸ್ತಾವನೆಯನ್ನು ಇಲಾಖೆಗೆ ರವಾನಿಸಲಾಗಿದೆ.

Advertisement

ವಿದ್ಯಾರ್ಥಿಗಳಿಗಿಲ್ಲ ಜೇನುತುಪ್ಪ: ಸರ್ಕಾರಿ ಶಾಲಾ ಮಕ್ಕಳಿಗೆ ಜೇನು ತುಪ್ಪ ನೀಡುವ ಸಂಬಂಧ ಅಗತ್ಯ ಮಾಹಿತಿ ಕೋರಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆರೋಗ್ಯ ಇಲಾಖೆಗೆ ಈ ಹಿಂದೆ ಪತ್ರ ಬರೆಯಲಾಗಿತ್ತು. ಆರೋಗ್ಯ ಇಲಾಖೆಯಿಂದ ಶಿಕ್ಷಣ ಇಲಾಖೆಗೆ ಬಂದಿರುವ ಮಾಹಿತಿ ಆಧರಿಸಿ, ವಿದ್ಯಾರ್ಥಿಗಳಿಗೆ ಬಿಸಿಯೂಟದ ಜತೆ ಜೇನುತುಪ್ಪ ನೀಡದೇ ಇರಲು ಇಲಾಖೆ ನಿರ್ಧರಿಸಿದೆ.

ಸರ್ಕಾರಿ ಶಾಲಾ ಮಕ್ಕಳಿಗೆ ಜೇನುತುಪ್ಪು ನೀಡುವ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿತ್ತು. ಅದರಂತೆ ಸಾರ್ವಜನಿಕ ಶಿಕ್ಷಣ ಇಲಾಖೆ, ವಿದ್ಯಾರ್ಥಿಗಳಿಗೆ ಜೇನುತುಪ್ಪ ಎಷ್ಟು ಪ್ರಮಾಣದಲ್ಲಿ ನೀಡಬೇಕು ಹಾಗೂ ಯಾವ ಸಮಯದಲ್ಲಿ ನೀಡಬೇಕು ಎಂಬ ಕುರಿತು ಮಾಹಿತಿ ನೀಡುವಂತೆ ಆರೋಗ್ಯ ಇಲಾಖೆಗೆ ಪತ್ರ ಬರೆದಿತ್ತು.

ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟಕ್ಕೆ ಸಿರಿಧಾನ್ಯ ಬಳಕೆ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರದ ಅನುಮತಿ ದೊರೆತ ನಂತರ ಬಿಸಿಯೂಟದಲ್ಲಿ ಸಿರಿಧಾನ್ಯ ಬಳಸಲಾಗುತ್ತದೆ. ● ಎಂ.ಆರ್‌.ಮಾರುತಿ, ಬಿಸಿಯೂಟ ಯೋಜನೆ ಸಹ ನಿರ್ದೇಶಕ

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next