ಕೊಪ್ಪಳ: ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಕಾಣುತ್ತಿರುವ ಕೊಪ್ಪಳ ಜಿಲ್ಲೆಯು ವಿವಿಧ ಹಂತದಲ್ಲಿ ಸ್ಥಳೀಯವಾಗಿಯೇ ರೋಗಿಗಳಿಗೆ ಚಿಕಿತ್ಸೆ ಕೊಡುವ ಕಾಯಕಕ್ಕೆ ಮುಂದಾಗಿದೆ. ಜಿಲ್ಲೆಗೆ ಅವಶ್ಯಕತೆ ಇರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಕ್ಕೆ ಕಿಮ್ಸ್‌ನಿಂದ ರಾಜ್ಯಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ.
ಕೆಲವು ವರ್ಷಗಳಿಂದೀಚೆಗೆ ಆರೋಗ್ಯ ಕ್ಷೇತ್ರದ ಕಾಳಜಿ ವಹಿಸಿರುವ ಈ ಭಾಗದ ಅಧಿಕಾರಿ ವರ್ಗ ಸೇರಿದಂತೆ ಜನಪ್ರತಿನಿಧಿ ಗಳು ಜನತೆ ದೂರದ ಊರಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕ್ಕೆ ಬ್ರೇಕ್ ಹಾಕುತ್ತಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಸುಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗಿದ್ದು, ಜೊತೆಗೆ ಮೆಡಿಕಲ್ ಕಾಲೇಜು ಆರಂಭಗೊಂಡಿದ್ದು ಜಿಲ್ಲೆಯ ಜನರಿಗೆ ಸ್ವಲ್ಪ ಸಮಾಧಾನ ತಂದಿದೆ.
ಇದರೊಟ್ಟಿಗೆ ಜಿಲ್ಲೆಯೂ ಇನ್ನೂ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಮಾಡುವ ದೃಷ್ಟಿಯಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಕ್ಕೆ ಕಿಮ್ಸ್ ನಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಸರ್ಕಾರದ ಮಟ್ಟದಲ್ಲಿ ಇದಕ್ಕೆ ಅನುಮತಿ ದೊರೆಯಬೇಕಿದೆ. ಸಂಸದ ಸಂಗಣ್ಣ ಕರಡಿ ಸೇರಿದಂತೆ ಶಾಸಕ ರಾಘವೇಂದ್ರ ಹಿಟ್ನಾಳ ಜಿಲ್ಲಾ ಕೇಂದ್ರಕ್ಕೆ ಸೂಪರ್ ಸ್ಪೆಷಾಲಿಟಿಆಸ್ಪತ್ರೆ ಅವಶ್ಯವಿದೆ ಎಂದು ಈ ಹಿಂದಿನಿಂದಲೂ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದರು. ಆದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಕ್ಕೆ ಕೆಲ ನಿಯಮಾವಳಿಗಳು ಅಡ್ಡಿಯಾದ ಹಿನ್ನೆಲೆಯಲ್ಲಿ ಸ್ವಲ್ಪ ವಿಳಂಬವಾಗಿತ್ತು. ಈಗ ಜಿಲ್ಲಾ ಕೇಂದ್ರದಲ್ಲಿ 450 ಹಾಸಿಗೆಯುಳ್ಳ ಆಸ್ಪತ್ರೆಯು ನಿರ್ಮಾಣವಾಗುತ್ತಿದೆ. ಆಸ್ಪತ್ರೆ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ.
ಕೊಪ್ಪಳ ಕಿಮ್ಸ್‌ಗೆ ಶುಕ್ರವಾರ ಕಲಬುರಗಿ ಆಯುಕ್ತ ಸುಬೋದ್ ಯಾದವ್ ಅವರು ಭೇಟಿ ನೀಡಿದ್ದ ವೇಳೆ ಕಿಮ್ಸ್ ನಿರ್ದೇಶಕ ದತ್ತಾತ್ರೇಯ ಭಂಟ್ ಅವರು ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಿದ ಕುರಿತು ಗಮನಕ್ಕೆ ತಂದಿದ್ದಾರೆ. ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಅಂದಾಜು 190 ಕೋಟಿ ರೂ. ಅವಶ್ಯಕತೆಯಿದೆ. ಇನ್ನೂ ಭೂ ಸ್ವಾ ಧೀನ ಪ್ರಕ್ರಿಯೆ ನಡೆಸಿದರೆ ಅನುದಾನ ಹೆಚ್ಚುವರಿ ಆಗುವ ಸಾಧ್ಯತೆಯಿದೆ ಎನ್ನುವ ಮಾಹಿತಿಯನ್ನೂ ನೀಡಿದ್ದಾರೆ.
ಕ್ಯಾನ್ಸರ್ ಆಸ್ಪತ್ರೆ ಆರಂಭಕ್ಕೆ ಚಿಂತನೆ: ಜಿಲ್ಲೆಯಲ್ಲಿ ಕ್ಯಾನ್ಸ್‌ರ್ ಆಸ್ಪತ್ರೆಯಿಲ್ಲ. ಇಲ್ಲಿನ ಜನರು ಹುಬ್ಬಳ್ಳಿ, ಧಾರವಾಡ ಸೇರಿ ಬೆಂಗಳೂರಿಗೆ ತೆರಳಿ ಕಾನ್ಸರ್‌ಗೆ ಚಿಕಿತ್ಸೆ ಪಡೆದುಕೊಂಡು ಬರಬೇಕಿತ್ತು. ಆದರೆ ಕಾಯಿಲೆ ತೀವ್ರವಾಗುವ ಹಂತದಲ್ಲಿದ್ದರೆ ಕನಿಷ್ಟ 2-3 ಲಕ್ಷ ರೂ. ವ್ಯಯವಾಗುತ್ತಿತ್ತು. ಆ ಜನರಿಗೆ ಇಲ್ಲಿಯೇ ಚಿಕಿತ್ಸೆ ನೀಡುವ ಉದ್ದೇಶದಿಂದ ಕಿಮ್ಸ್ ಕ್ಯಾನ್ಸರ್ ಆಸ್ಪತ್ರೆ ಆರಂಭಕ್ಕೂ ಚಿಂತನೆ ನಡೆಸಿರುವ ಕುರಿತು ಆಯುಕ್ತರ ಗಮನಕ್ಕೆ ತಂದಿದ್ದಾರೆ. ಆದರೆ ಆಸ್ಪತ್ರೆ ನಿರ್ಮಾಣಕ್ಕೆ ಕನಿಷ್ಟ 50 ಕೋಟಿ ರೂ. ಅವಶ್ಯಕತೆಯಿದೆ. ಇದೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಧಿಧೀನದಡಿ ಬರಲಿದೆ ಎನ್ನುವ ಲೆಕ್ಕಾಚಾರವನ್ನು ಆಯುಕ್ತರಿಗೆ ತಿಳಿಸಿದ್ದಾರೆ.
ಕೊಳಚೆ ನೀರು ಶುದ್ಧೀಕರಣ ಘಟಕ: ಇನ್ನೂ ಈ ಹಿಂದೆ ಬೃಹದಾಕಾರದಲ್ಲಿ ಜಿಲ್ಲಾ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ಆಸ್ಪತ್ರೆ ನಿರ್ಮಿಸುವ ವೇಳೆ ಕೊಳಚೆ ನೀರನ್ನು ಪುನರ್ ಬಳಕೆಗೆ ಸರಿಯಾದ ಯೋಜನೆಯನ್ನೂ ಮಾಡಿಲ್ಲ. ಪ್ರಸ್ತುತ ಆಸ್ಪತ್ರೆಯ ಕೊಳಚೆ ನೀರು ಮಣ್ಣಿನಲ್ಲಿ ಇಂಗುವಂತೆ ಮಾಡಿದ್ದು, ಮುಂದಿನ ದಿನದಲ್ಲಿ ಕೊಳಚೆ ನೀರು ಮಣ್ಣನ್ನು ಮಲೀನ ಮಾಡಲಿದೆ. ಜೊತೆಗೆ ಇಂಗು ಗುಂಡಿ ತುಂಬಿದ ಬಳಿಕ ಕೊಳಚೆ ನೀರು ಹೊರಗೆ ಹರಿಯುವ ಸಾಧ್ಯತೆಯಿದೆ. ಇದನ್ನು ತಡೆಯಲು ಮಣ್ಣಿಗೆ ಯಾವುದೇ ಹಾನಿಯಾಗದಂತೆ
ನೋಡಿಕೊಳ್ಳಲು ಜಿಲ್ಲಾ ಆಸ್ಪತ್ರೆಯಲ್ಲಿ ಅಂದಾಜು 2 ಕೋಟಿ ರೂ. ವೆಚ್ಚದಡಿ ಕೊಳಚೆ ನೀರು ಶುದ್ಧೀಕರಣ ಘಟಕ ಆರಂಭಕ್ಕೆ ಚಿಂತನೆ ನಡೆಸಿದ್ದು, ಈ ಕುರಿತು ಪ್ರಾದೇಶಿಕ ಆಯುಕ್ತರಿಗೂ ಗಮನಕ್ಕೆ ತರಲಾಗಿದೆ. ಒಟ್ಟಿನಲ್ಲಿ ಕಿಮ್ಸ್‌ನಿಂದ ಕೆಲವೊಂದು ಯೋಜನೆಗಳ ರೂಪುರೇಷ ಸಿದ್ಧಪಡಿಸಲಾಗಿದ್ದು, ಇವುಗಳು ಏಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ. ಎನ್ನುವುದನ್ನು ಜನತೆ ಕಾದು ನೋಡಲಿದ್ದಾರೆ. ರಾಜ್ಯ ಮಟ್ಟದಲ್ಲಿ ಅಧಿಕಾರಿಗಳ ಇಲ್ಲಿನ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದರಷ್ಟೇ ಯೋಜನೆಗಳು ಸಕಾರಗೊಳ್ಳಲಿವೆ.
-ದತ್ತು ಕಮ್ಮಾರ