Advertisement

ಬ್ಯಾಂಕಿಂಗ್‌ ಪರೀಕ್ಷೆ ಕನ್ನಡದಲ್ಲಿ ನಡೆಸಲು ಪ್ರಸ್ತಾಪ

05:51 PM Mar 05, 2018 | |

ಯಾದಗಿರಿ: ಪ್ರತಿಯೊಬ್ಬರಲ್ಲಿ ಕನ್ನಡ ಭಾಷೆ ಅಭಿಮಾನ ಮೂಡಿದಾಗ ಮಾತ್ರ ಕನ್ನಡ ಭಾಷೆ ಸಂಪತ್ತು ಉಳಿಸಿ ಬೆಳೆಸಿಕೊಂಡು ಹೋಗಲು ಸಾಧ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಪ್ರೊ| ಎಸ್‌.ಜಿ.ಸಿದ್ದರಾಮಯ್ಯ ಹೇಳಿದರು.

Advertisement

ನಗರದ ವಿದ್ಯಾಮಂಗಲ ಕಾರ್ಯಲಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡ ಕಲಬುರಗಿ ವಿಭಾಗದ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಭಾಷೆಯಲ್ಲಿ ಸೃಜನಶೀಲತೆ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಪ್ರತಿಯೊಬ್ಬರು ಕನ್ನಡ ಭಾಷೆಯಲ್ಲಿ ಪ್ರಭುತ್ವ ಸಾಧಿಸಿದಾಗ ಮಾತ್ರ ಕನ್ನಡ ಭಾಷೆ ಸಮೃದ್ಧಗೊಳ್ಳುವುದು. ಆದ್ದರಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿಯೂ ಕೂಡ ಕನ್ನಡಿಗರಿಗೆ ಸಿಗಬೇಕಾಗಿದ್ದ ಹುದ್ದೆಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆದಿದೆ. ಕನ್ನಡ·ಭಾಷೆಯಲ್ಲಿ ಬ್ಯಾಂಕಿಂಗ್‌ ಪರೀಕ್ಷೆ ನಡೆಸದೆ, ಕನ್ನಡಿಗರಿಗೆ ಅನ್ಯಾಯ ಮಾಡಲಾಗುತ್ತಿದೆ. ಈ ಬಗ್ಗೆ ಕೇಂದ್ರಕ್ಕೆ ಮನವಿ ಪ್ರಸ್ತಾಪ ಮಾಡಲಾಗಿದೆ ಎಂದರು.

ಹಿರಿಯ ಸಾಹಿತಿ ಡಾ| ಮೀನಾಕ್ಷಿ ಬಾಳಿ ಮಾತನಾಡಿ, ಶ್ರೀಮಂತರು, ನಗರೀಕರಣದಿಂದ ಕನ್ನಡ ಭಾಷೆ ಉಳಿದಿಲ್ಲ. ಗ್ರಾಮೀಣ ಪ್ರದೇಶದ ಬಡವರು, ಶ್ರಮಿಕರು, ರೈತಾಪಿ ವರ್ಗ, ಕೂಲಿಕಾರ್ಮಿರ ಮಕ್ಕಳೆ ಅತೀ ಹೆಚ್ಚು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿಕೊಂಡು ಬರುತ್ತಿದ್ದರಿಂದ ಕನ್ನಡ ಭಾಷೆ ಸಂಪತ್ತು ಉಳಿದುಕೊಂಡು ಬಂದಿದೆ ಎಂದು ಹೇಳಿದರು.
 
ಶಾಸಕ ಡಾ| ಎ.ಬಿ. ಮಾಲಕರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷೆ, ನೆಲ, ಜಲ, ಸಂಪತ್ತಿನ ಬಗ್ಗೆ·ಅಭಿಮಾನ ಪ್ರತಿಯೊಬ್ಬರು ಬೆಳೆಸಿಕೊಂಡಾಗ ಕನ್ನಡ ಉಳಿಯಲಿದೆ. ಕನ್ನಡಕ್ಕೆ ತನ್ನದೆಯಾದ ಪರಂಪರೆ, ಹಿರಿಮೆ ಇದ್ದು, ಅನೇಕ ಮಹನಿಯರು ವಿವಿಧ ಸಾಧನೆಗೈದು ಕನ್ನಡ ಭಾಷೆಗೆ ಗೌರವ ತಂದಿದ್ದಾರೆ. ಈ ನಾಡಿನ ಮೂಲ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಇಂದಿನ ಮಕ್ಕಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಾರಿ ಚೈತ್ರ ಅವರಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಹಾಗೂ 25 ಸಾವಿರ ರೂ. ಚೆಕ್‌ ನೀಡಿ ಗೌರವಿಸಲಾಯಿತು. ಪ್ರಸ್ತುತ ಸಾಲಿನಲ್ಲಿ ಎಸ್‌.ಎಸ್‌.ಎಲ್‌.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಕಲಬುರಗಿ ವಿಭಾಗದ ಒಟ್ಟು 352 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. 

Advertisement

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಶ್ರೀ ಗಂಗಾಧರ ಮಹಾಸ್ವಾಮೀಜಿ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಮರೆಡ್ಡಿ ತಂಗಡಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರತ್ನಾಕರ ಶೆಟ್ಟಿ, ಸಿ.ಎಫ್‌. ನಾಯ್ಕ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಜಿಪಂ ಸಿಇಒ ಡಾ| ಅವಿನಾಶ ಮೆನನ್‌ ರಾಜೇಂದ್ರನ್‌, ಯಾದಗಿರಿ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಹಿರಿಯ ಸಾಹಿತಿ ಜಗನಾಥ ಹೆಬ್ಟಾಳೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗುರುಲಿಂಗಪ್ಪ ಮಿಣಸಗಿ, ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಸೇರಿದಂತೆ ಇತರರು ಇದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ| ಕೆ. ಮುರಳಿಧರ ಸ್ವಾಗತಿಸಿ, ನಿರೂಪಿಸಿದರು

ಮಕ್ಕಳಿಗೆ ಕನ್ನಡ ಶಿಕ್ಷಣ ನೀಡಿ ಖಾಸಗಿ ಆಂಗ್ಲ ಮಾಧ್ಯಮ ಶಿಕ್ಷಣದಿಂದಾಗಿ ಈ ನೆಲದ ಮೂಲ ಕನ್ನಡ ತಾಯಿ ಭಾಷೆ ಸದ್ದಿಲ್ಲದೆ ಅಳಿವಿನಂಚಿಗೆ ತಲುಪುತ್ತಿದೆ. ಕನ್ನಡ ಭಾಷೆಯ·ಬಗ್ಗೆ ಅಭಿಮಾನ ಇರಬೇಕು, ಹೊರತಾಗಿ ತಾತ್ಸಾರ ಮನೋಭಾವನೆ ಬೇಡ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ದೊರಕಿರುವುದು ಕನ್ನಡದ ಹಿರಿಮೆ-ಗರಿಮೆ ಹೆಚ್ಚಿಸಿದೆ. ಹೀಗಾಗಿ ಕನ್ನಡ ಮಾಧ್ಯಮದಲ್ಲಿಯೇ ಮಕ್ಕಳಿಗೆ ಶಿಕ್ಷಣ ಕೊಡಿಸುವಂತಹ ಕೆಲಸ ಪಾಲಕರು ಮಾಡಬೇಕು.
 ಪ್ರೊ| ಎಸ್‌.ಜಿ. ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

ಮೊದಲು ಕನ್ನಡ ಭಾಷೆ ಕಲಿಯಿರಿ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತರೆ ಮಾತ್ರ ಪರಿಣಿತರಾಗಬಹುದು ಎಂಬುದು ತಪ್ಪು,
ಭಾಷೆಯು ಪರಸ್ಪರ ಸಂಪರ್ಕದಿಂದ ಕಲಿಯಬಹುದಾಗಿದೆ. ಮೊದಲು ಕನ್ನಡ ತಾಯಿ ಭಾಷೆ ಕಲಿತವರಿಗೆ ಎಲ್ಲ ಭಾಷೆಯಲ್ಲಿಯೂ ಹಿಡಿತ ಸಾಧಿ ಸಬಹುದು.
ಡಾ| ಮೀನಾಕ್ಷಿ ಬಾಳಿ, ಹಿರಿಯ ಸಾಹಿತಿ 

Advertisement

Udayavani is now on Telegram. Click here to join our channel and stay updated with the latest news.

Next