Advertisement

ಟ್ರಕ್‌ ಟರ್ಮಿನಲ್‌ ಜಾಗ ಗುರುತಿಸಲು ಪ್ರಸ್ತಾವನೆ ಸಲ್ಲಿಕೆ

03:17 PM Jun 09, 2020 | mahesh |

ದಾವಣಗೆರೆ: ಬಹು ಕಾಲದಿಂದ ನನೆಗುದಿಗೆ ಬಿದ್ದಿರುವ ಟ್ರಕ್‌ ಟರ್ಮಿನಲ್‌ಗೆ ಅತ್ಯಗತ್ಯವಾಗಿರುವ ಜಾಗ  ಗುರುತಿಸುವ ಪ್ರಸ್ತಾವನೆ ಸಲ್ಲಿಸಲು ಸೋಮವಾರ ಹೆಚ್ಚುವರಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಎಂ. ರಾಜೀವ್‌ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ  ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಸಭೆಯ ಪ್ರಾರಂಭದಲ್ಲಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯ್ಯದ್‌ ಸೈಪುಲ್ಲಾ ಮಾತನಾಡಿ, ದಾವಣಗೆರೆಯಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಾಣಕ್ಕೆ ಜಾಗ ಗುರುತಿಸುವ ಕಾರ್ಯ ಬಹಳ
ಕಾಲದಿಂದ ನನೆಗುದಿಗೆ ಬಿದ್ದಿದೆ. ಈ ಸಭೆಯಲ್ಲೇ ಜಿಲ್ಲಾ ಧಿಕಾರಿಗಳ ಮೂಲಕ ಟ್ರಕ್‌ ಟರ್ಮಿನಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಸ್ಥಳ ಪರಿಶೀಲಿಸುವಂತೆ ಪತ್ರ ಬರೆಯಬೇಕು ಎಂದು ಒತ್ತಾಯಿಸಿದರು.

25 ವರ್ಷಗಳ ಯೋಜನೆಯಾಗಿದ್ದು, ಈ ಬಗ್ಗೆ ಹಲವಾರು ಜಿಲ್ಲಾ ಕಾರಿಗಳೊಂದಿಗೆ ಚರ್ಚಿಸಿದ್ದರೂ ಟ್ರಕ್‌ ಟರ್ಮಿನಲ್‌ ವಿಷಯ ಈಗಲೂ ನೆನೆಗುದಿಗೆ ಬಿದ್ದಿದೆ. ಸರ್ಕಾರಕ್ಕೆ ಟ್ರಕ್‌ ಟರ್ಮಿನಲ್‌ ಜಾಗ ಗುರುತಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್‌.ಜೆ. ಬಣಕಾರ್‌ ಮಾತನಾಡಿ, ಹಿಂದಿನ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ
ನಡಾವಳಿಯ ಆದೇಶದಂತೆ ದಾವಣಗೆರೆ ತಾಲೂಕಿನ ಹಳೇಬಾತಿ ಗ್ರಾಮದ ಸರ್ವೇ ನಂ 83/03 ರ 5.8 ಎಕರೆ ಜಾಗವನ್ನು ಫೆ. 6 ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನೆ ಮಾಡಲಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಈ ಕೆಲಸ ಆಗಿರಲಿಲ್ಲ. ಜಿಲ್ಲಾ ಧಿಕಾರಿಗಳಿಗೆ ವಿಷಯ ತಿಳಿಸಿ ಟ್ರಕ್‌ ಟರ್ಮಿನಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಪರಿಶೀಲನೆ ನಡೆಸುವಂತೆ ಪ್ರಸ್ತಾವನೆ
ಸಲ್ಲಿಸಲಾಗುವುದು ಎಂದರು.

ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್‌ ಮಾತನಾಡಿ, ವಾಹನ ಚಾಲನೆ ಬಗ್ಗೆ ಅರಿವು ಕೊರತೆ ಇದೆ. ಡಿಎಲ್‌ ಅಮಾನತು ಮಾಡುವ ಸಂಖ್ಯೆ ಹೆಚ್ಚಿಸಬೇಕು. ಕೆಲವು ಕಡೆ ಪುಟ್‌ಪಾತ್‌ ಕೆಲಸ ಆಗಬೇಕು ಎಂದರು. ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಕೆಲಸ ಪ್ರಾರಂಭಿಸಲಾಗುವುದು ಎಂದು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ರಾಗಿ, ಜೋಳ, ತೊಗರಿ ರಸ್ತೆಗೆ ಹಾಕುವುದರಿಂದ ಎಷ್ಟೋ ಅಪಘಾತಗಳು ಸಂಭವಿಸಿವೆ. ಆಯಾಯ ಠಾಣಾ ಪೊಲೀಸರು ಕ್ರಮ ವಹಿಸುವಂತೆ ಕೆಲವರು ಮನವಿ ಮಾಡಿದರು. ಮಹಾನಗರ ಪಾಲಿಕೆ ಸೇರಿದಂತೆ 7 ಕಡೆ ವಾಹನ ನಿಲ್ದಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಆರ್‌ಟಿಒ ತಿಳಿಸಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

ರಿಫ್ರಾಕ್ಟರ್‌ ಅಳವಡಿಸಿ
ಹೆದ್ದಾರಿಯಲ್ಲಿ ಅಪಘಾತ ತಪ್ಪಿಸಲು ಇಂಟರ್‌ಸೆಪ್ಟರ್‌ ಅಳವಡಿಸುವ ಪ್ರಸ್ತಾಪ ಇದೆ. ಆದರೆ ಅಪಘಾತ ಸಂಭವಿಸುತ್ತಿರುವುದು ಲಾರಿ, ಬಸ್‌ಗಳಿಂದ ಅಲ್ಲ. ಬದಲಾಗಿ ದ್ವಿಚಕ್ರ ವಾಹನಗಳಿಂದ. ದ್ವಿಚಕ್ರ ವಾಹನ ಚಾಲಕರಿಗೆ ಹೆದ್ದಾರಿಯಲ್ಲಿ ವಾಹನ ಚಲಾಯಿಸುವ ಬಗ್ಗೆ ಅರಿವಿಲ್ಲ. ಅವರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ರಾತ್ರಿ ಹೊತ್ತು ಹೈವೇಯಲ್ಲಿ ಟೇಪ್‌ರೆಕಾರ್ಡರ್‌ ಹಾಕಿಕೊಂಡು ಎತ್ತಿನಗಾಡಿಯನ್ನು ಸಹ ಓಡಿಸಲಾಗುತ್ತದೆ. ಜೊತೆಗೆ ಬಹುತೇಕ ಟ್ರ್ಯಾಕ್ಟರ್‌ ಟಿಪ್ಪರ್‌ಗಳಿಗೆ ರಿಫ್ರಾಕ್ಟರ್‌ ಇಲ್ಲ. ಇದರಿಂದ ಅಪಘಾತ ಹೆಚ್ಚುತ್ತಿದೆ ಎಂದು ಸೈಯದ್‌ ಸೈಪುಲ್ಲಾ ತಿಳಿಸಿದರು. ಪೊಲೀಸ್‌ ಇಲಾಖೆಯಿಂದ ಹೈವೇಯಲ್ಲಿ ರಿಫ್ರಾಕ್ಟರ್‌ ಅಳವಡಿಸುವ ಆಂದೋಲನದ ಜೊತೆಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಎಎಸ್ಪಿ ಎಂ. ರಾಜೀವ್‌ ತಿಳಿಸಿದರು. ಸರ್ಕಾರದ ವತಿಯಿಂದಲೇ ಜಿಲ್ಲಾವಾರು ಟ್ರ್ಯಾಕ್ಟರ್‌ಗಳಿಗೆ ರಿಫ್ರಾಕ್ಟರ್‌ ಅಳವಡಿಸುವ ಆಲೋಚನೆ ನಡೆಸಲಾಗುತ್ತಿದೆ ಎಂದು ಆರ್‌ಟಿಒ ಎನ್‌.ಜೆ. ಬಣಕಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next