Advertisement

ಕಣ್ಣಿ ತರಕಾರಿ ಮಾರುಕಟ್ಟೆ ಅಭಿವೃದ್ಧಿಗೆ ಪ್ರಸ್ತಾವನೆ

11:07 AM Nov 26, 2019 | Suhan S |

ಕಲಬುರಗಿ: ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕೇಂದ್ರ ಬಸ್‌ ನಿಲ್ದಾಣ ಬಳಿಯ ಕಣ್ಣಿ ತರಕಾರಿ ಮಾರುಕಟ್ಟೆ ಅಭಿವೃದ್ಧಿಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸಹಯೋಗದಲ್ಲಿ ಅಭಿವೃದ್ಧಿಪಡಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಸೋಮವಾರ ನಡೆದ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ (ಕುಡಾ) ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಜಿಲ್ಲಾಧಿಕಾರಿ ಬಿ. ಶರತ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಣ್ಣಿ ತರಕಾರಿ ಮಾರುಕಟ್ಟೆಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಹಭಾಗಿತ್ವ ವಹಿಸುವ ಕುರಿತಾಗಿ ಎಪಿಎಂಸಿ ಒಪ್ಪಂದ ಪತ್ರ ಕಳುಹಿಸಿರುವುದರಿಂದ ಈಗ ಸರ್ಕಾರಕ್ಕೆ ಕುಡಾ-ಎಪಿಎಂಸಿ ಕರಾರುಗಳ ಒಪ್ಪಂದದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಅಭಿವೃದ್ಧಿಗೆ ಗ್ರೀನ್‌ ಸಿಗ್ನಲ್‌ ಪಡೆಯಲು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಅದೇ ರೀತಿ ಎಂಎಸ್‌ಕೆ ಮಿಲ್‌ನ ಕುಡಾ ಬಡಾವಣೆಯಲ್ಲಿ 54 ಕೋ.ರೂ ವೆಚ್ಚದ ಬೃಹತ್‌ ವಾಣಿಜ್ಯ ಮಳಿಗೆಯು ಪಿಪಿಯು ಆಧಾರದ ಮೇಲೆ ನಿರ್ಮಿಸಲು ಇಂಡೋಕ್‌ ಕಂಪನಿ ಮುಂದೆ ಬಂದಿರುವುದರಿಂದ ಆದಷ್ಟು ಬೇಗನೇ ಒಪ್ಪಂದ ಕಾರ್ಯ ಪೂರ್ಣಗೊಳಿಸಿ ಕಾಮಗಾರಿ ಶುರು ಮಾಡಲು ಸಹ ಸಭೆಯಲ್ಲಿ ಒಮ್ಮತಕ್ಕೆ ಬರಲಾಯಿತು.

ಕೋಟನೂರ ಡಿ ಬಡಾವಣೆಯ ಹಣವನ್ನು ಬೇರೆಯದಕ್ಕೆ ಬಳಸಬೇಡಿ. ರೈತರು ಪರಿಹಾರ ಕೋರಿ ನ್ಯಾಯಾಲಯಕ್ಕೆ ಮೋರೆ ಹೋಗಿದ್ದರಿಂದ ಯಾವುದೇ ಸಂದರ್ಭದಲ್ಲಿ ಆದೇಶ ಬರಬಹುದು. ಹೀಗಾಗಿ ಅಟಲ್‌ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಮಾರಾಟವಾಗಿರುವ ನಿವೇಶನ ಹಣ ಮೀಸಲಿಡಿ ಬೇರೆಯದಕ್ಕೆ ಬಳಸಬೇಡಿ ಎಂದು ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ ಹೇಳಿದರು.

ಧರಿಯಾಪುರ-ಕೋಟನೂರ ಕುಡಾ ಬಡಾವಣೆಯಲ್ಲಿ ಅರ್ಧಕ್ಕೆ ನಿಂತಿರುವ ರಾಜೀವ್‌ ಗಾಂಧಿ ಥೀಮ್‌ ಪಾರ್ಕ್‌ ಕುರಿತಾಗಿ ಸಭೆಯಲ್ಲಿ ಚರ್ಚೆಗೆ ಬಂತು. ಕಾಮಗಾರಿ ಉಸ್ತುವಾರಿ ಕೆಕೆಆರ್‌ಡಿಬಿಯೇ ವಹಿಸಿಕೊಂಡಿದೆ. ಕಾಮಗಾರಿಗೆ ಅನುದಾನ ಕೊರತೆಯಿಂದ ಅರ್ಧಕ್ಕೆ ನಿಂತಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು. ಮುಂದಿನ ಸಭೆಗೆ ಸಮಗ್ರ ಮಾಹಿತಿ ತರಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಯಿತು.

ಸಭೆಯಲ್ಲಿ ಶಾಸಕರಾದ ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ್‌, ಖನೀಜಾ ಫಾತೀಮಾ, ತಿಪ್ಪಣ್ಣಪ್ಪ ಕಮಕನೂರ, ಇಕ್ಬಾಲ್‌ ಅಹ್ಮದ ಸರಡಗಿ, ಕುಡಾ ಆಯುಕ್ತ ಎಂ. ರಾಚಪ್ಪ ಹಾಗೂ ಅಧಿಕಾರಿಗಳು ಹಾಜರಿದ್ದರು. ಕುಸನೂರ ಕುಡಾ ಬಡಾವಣೆಗೆ ಭೂಮಿ ನೀಡಿರುವ ರೈತರಿಗೆ ಪರಿಹಾರ ನೀಡುವ ಹಾಗೂ ಬಡಾವಣೆಗೆ ಕುಡಾ ಕಳುಹಿಸಿರುವ 117 ಕೋ. ರೂ ಪ್ರಸ್ತಾವನೆ ಬದಲು ಕೇವಲ 95 ಕೋ. ರೂ ಗೆ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ಕುಡಾ ಯಾವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕೆಂಬುದೇ ಗೊತ್ತಾಗುತ್ತಿಲ್ಲ ಎಂದು ಕುಡಾ ಅಧಿಕಾರಿಗಳು ಸಭೆ ಗಮನಕ್ಕೆ ತಂದರು.

Advertisement

ರೈತರು ಭೂಮಿ ನೀಡಿ ನಾಲ್ಕೈದು ವರ್ಷಗಳಾಯಿತು. ಆದರೂ ಪರಿಹಾರ ಕೊಡದೇ ಇರುವುದು ರೈತರ ತಾಳ್ಮೆ ಪರೀಕ್ಷಿಸುವಂತಾಗಿದೆ. ಭೂಮಿ ನೀಡಿದ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಿ ಎಂದು ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಆಗ್ರಹಿಸಿದರು. ಇದಕ್ಕೆ ಬಿ.ಜಿ. ಪಾಟೀಲ್‌ ಧ್ವನಿಗೂಡಿಸಿದರು.

ಆದರೆ ಕುಡಾ ಪ್ರಸ್ತಾವನೆಗಿಂತ 22 ಕೋ. ರೂ ಕಡಿಮೆಗೊಳಿಸಿ ಸಂಪುಟ ಅನುಮೋದನೆ ನೀಡಿರುವದರಿಂದ ಕುಡಾಗೆ ಪರಿಹಾರ ನೀಡಲು ಸಾಧ್ಯವಾಗದಂತಾಗಿದೆ. ಎಲ್ಲವನ್ನು ಅವಲೋಕಿಸಿ 117 ಕೋ.ರೂ ಯೋಜನೆ ರೂಪಿಸಲಾಗಿದೆ. ಆದರೆ 22 ಕೋ.ರೂ. ಕಡಿಮೆಯಾಗಿರುವುದರಿಂದ ಕುಡಾ ನಷ್ಟವೇ ಜಾಸ್ತಿ. ಹೀಗಾಗಿ ಏನು ಹೆಜ್ಜೆ ಇಡಬೇಕೆಂಬುದೇ ಗೊತ್ತಾಗುತ್ತಿಲ್ಲ ಎಂದು ಅಧಿಕಾರಿಗಳು ಸಭೆ ಗಮನಕ್ಕೆ ತಂದರು.

ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಹಣ ಇರದೇ ಇದ್ದರೆ ರೈತರಿಂದ ಭೂಮಿ ಏಕೆ ಪಡೆದಿರಿ. ಈ ಬಡಾವಣೆಯಿಂದ ಕುಡಾಗೆ ನಷ್ಟವಾದರೆ ಮಾಡುವುದು ಹೇಗೆ? ಎಂದು ಖಾರವಾಗಿ ಪ್ರಶ್ನಿಸಿದರಲ್ಲದೇ ರೈತರಿಗೆ ನೇರವಾಗಿ ಪರಿಹಾರ ದೊರಕಬೇಕೆಂದರು. ಇದಕ್ಕೆ ಜಿಲ್ಲಾಧಿಕಾರಿ ಬಿ. ಶರತ್‌ ಅವರು, ಭೂಮಿ ನೀಡಿದ ರೈತರಿಗೆ ನೇರವಾಗಿ ಆರ್‌ಟಿಜಿಎಸ್‌ ಮೂಲಕ ಅವರ ಖಾತೆಗೆ ಪರಿಹಾರ ಪಾವತಿಯಾಗುತ್ತದೆ. ಇಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಎದುರಾಗುವುದಿಲ್ಲ ಎಂದು ವಿವರಣೆ ನೀಡಿದರು. ಒಟ್ಟಾರೆ ಈ ಬಡಾವಣೆ ಜಟಿಲವಾಗಿದೆ. ಹೀಗಾಗಿ ಸಧ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದು ಸಭೆ ಗಮನಕ್ಕೆ ತಂದರು. ಹೀಗಾಗಿ ಯಾವುದೇ ನಿರ್ಧಾರಕ್ಕೆ ಬರದೇ ಮುಂದಿನ ವಿಷಯಗಳತ್ತ ಚರ್ಚೆ ಮುಂದುವರೆಯಿತು.

Advertisement

Udayavani is now on Telegram. Click here to join our channel and stay updated with the latest news.

Next