Advertisement

ಕೊಳಗೇರಿ ಪ್ರದೇಶ ಘೋಷಣೆಗೆ ಸರ್ಕಾರಕ್ಕೆ ಪ್ರಸ್ತಾವನೆ: ಬೆಲ್ಲದ

03:16 PM Jul 01, 2017 | Team Udayavani |

ಹುಬ್ಬಳ್ಳಿ: ಇಲ್ಲಿನ ಆನಂದನಗರ ಚಂದನ ಕಾಲೋನಿಯನ್ನು ಕೊಳಗೇರಿ ಪ್ರದೇಶವೆಂದು ಘೋಷಣೆ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದರು. ಶುಕ್ರವಾರ ಆನಂದನಗರದ ಚಂದನ ಕಾಲೋನಿಗೆ ಭೇಟಿ ನೀಡಿ ಪರಿಶೀಲಿಸಿದ ‌ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಈ ಪ್ರದೇಶದಲ್ಲಿ ವಾಸಿಸುತ್ತಿರುವವರ ಮೇಲೆ ಕೆಲವರು ಪದೇ ಪದೇ ಬೆದರಿಕೆ ಹಾಕುವ ಆರೋಪ ಕೇಳಿ ಬಂದಿದೆ. ಎಂದೋ ಮಾರಾಟ ಮಾಡಿದ ಆಸ್ತಿ ಬಗ್ಗೆ ಇದೀಗ ನಮ್ಮದೆಂದು ಹೇಳಿಕೊಂಡು ನಿವಾಸಿಗಳ ಮೇಲೆ ದಬ್ಟಾಳಿಕೆ ಮಾಡುತ್ತಿದ್ದಾರೆ. ಅಧಿಕಾರಿಗಳು ಇದನ್ನು ನೋಡಿ ಮೂಕ ಪ್ರೇಕ್ಷಕರಂತೆ ಇರುವುದು ಸರಿಯಲ್ಲ.

ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು. ಕಳೆದ 25 ವರ್ಷಗಳಿಂದ ಚಂದನ ಕಾಲೋನಿ ಯಲ್ಲಿ ಬಡವರು ವಾಸ ಮಾಡುತ್ತಿದ್ದು, ಅವರನ್ನು ಒಕ್ಕಲೆಬ್ಬಿಸಲು ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ.

ಚಂದನ ಕಾಲೋನಿಯಲ್ಲಿ ಸುಮಾರು 36 ಮನೆಗಳನ್ನು ಕೆಡವಲಾಗಿದ್ದು, ಅಲ್ಲಿನ ನಿವಾಸಿಗಳಿಗೆ ಅಲ್ಲಿಯೇ ವಾಸಿಸುವಂತೆ ತಿಳಿಸಲಾಗಿದೆ. ಈ ಹಿಂದೆ ಸುಮಾರು 25ಕ್ಕೂ ಹೆಚ್ಚು ಜನರು ಬಂದು ಇಲ್ಲಿನ ನಿವಾಸಿಗಳ ಮೇಲೆ ದೌರ್ಜನ್ಯ ಮಾಡಿ ಮನೆಗಳನ್ನು ಬುಲ್ಡೋಜರ್‌ನಿಂದ ತೆರವುಗೊಳಿಸಿರುವುದು ಕಾನೂನು ಬಾಹಿರವಾಗಿದೆ ಎಂದರು.

ಬಡವರಿಗೆ ಆದ್ಯತೆ: 17 ವರ್ಷಗಳ ಹಿಂದೆ ಬಡವರನ್ನು ಗುರುತಿಸಿ ಸರಕಾರ 612 ಫ‌ಲಾನುಭವಿಗಳಿಗೆ ಜಗದೀಶ ನಗರದಲ್ಲಿ ಆಶ್ರಯ ಮನೆಗಳನ್ನು ನೀಡಿತ್ತು. ಆದರೆ, ಅದರಲ್ಲಿ ಕೇವಲ 200 ಜನ ಮೂಲ ಫ‌ಲಾನುಭವಿಗಳು ವಾಸ ಮಾಡಿದ್ದು ಇನ್ನುಳಿದವರು ಆ ಮನೆಗಳನ್ನು ಬಾಡಿಗೆ ಅಥವಾ ಇನ್ಯಾರಿಗೋ ಮಾರಾಟ ಮಾಡಿದ್ದಾರೆ. 

Advertisement

ನಿಯಮದ ಪ್ರಕಾರ ಆಶ್ರಯ ಮನೆಗಳ ಫ‌ಲಾನುಭವಿಗಳಿಗೆ ನೀಡಿದ ನಂತರ 15 ವರ್ಷಗಳ ವರೆಗೆ ಪರಭಾರೆ ಮಾಡಲು ಬರುವುದಿಲ್ಲ. ಆದರೆ, ಬೇರೆಡೆ ಮನೆ ಇರುವ ಫ‌ಲಾನುಭವಿಗಳು ಅಲ್ಲಿರುವ ಮನೆಗಳನ್ನು ಇನ್ನೊಬ್ಬರಿಗೆ ನೀಡಿ ಬೇರೆಡೆ ವಾಸಿಸುತ್ತಿದ್ದಾರೆ.

ಅಂತಹ ಮನೆಗಳನ್ನು ಮರಳಿ ಪಡೆದು ಅರ್ಹ ಫ‌ಲಾನುಭವಿಗಳನ್ನು ಗುರುತಿಸಿ ಆಶ್ರಯ ಮನೆಗಳನ್ನು ಮರು ಹಂಚಿಕೆ ಮಾಡಲಾಗಿದೆ ಎಂದರು. ಇದೀಗ ವಿಮಾನ ನಿಲ್ದಾಣ, ಇಸ್ಫೋಸಿಸ್‌ ಸೇರಿದಂತೆ ಜಗದೀಶ ನಗರದ ಭಾಗ ಅಭಿವೃದ್ಧಿ ಹೊಂದಿದ್ದು ಅಂದಿನ ಫ‌ಲಾನುಭವಿಗಳು ನಮಗೆ ಮನೆ ಬೇಕು ಎಂದು ಬರುತ್ತಿದ್ದಾರೆ. 

ಆದರೆ ಈಗಾಗಲೇ ಅಧಿಕಾರಿಗಳು ಸಮೀಕ್ಷೆ ನಡೆಸಿ ಅರ್ಹ ಫ‌ಲಾನುಭವಿಗಳಿಗೆ ಮನೆ ಹಂಚಿಕೆ ಮಾಡಿದ್ದಾರೆ. ನಿರ್ಮಿತಿ ಕೇಂದ್ರದವರು ನಿರ್ಮಿಸುತ್ತಿರುವ ಮನೆಗಳಲ್ಲಿ ಕಳಪೆ ಕಾಮಗಾರಿ ನಡೆಯುತ್ತಿಲ್ಲ ಎಂದರು. ಪಾಲಿಕೆ ಸದಸ್ಯ ಸತೀಶ ಹಾನಗಲ್ಲ, ಮಹೇಶ ಚಂದರಗಿ, ಅಶೋಕ ವಾಲಿಕಾರ, ಬಸವರಾಜ ಸಾಲಿ, ಶೇಖರ ಮಠದ, ಎಸಿಪಿ ಎನ್‌.ಬಿ. ಸಕ್ರಿ, ಡಾ| ಶಿವಾನಂದ ಚಲವಾದಿ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next