Advertisement

ಕೈಗಾರಿಕಾ ಟೌನ್‌ಶಿಪ್‌ ರಚಿಸಲು ಪ್ರಸ್ತಾವನೆ

12:22 PM Feb 19, 2019 | |

ಶಿವಮೊಗ್ಗ: ಮಾಚೇನಹಳ್ಳಿ ನಿದಿಗೆ ಕೈಗಾರಿಕಾ ಟೌನ್‌ ಶಿಪ್‌ ರಚನೆ ಮಾಡಲು ನಿದಿಗೆ ಗ್ರಾಪಂನವರು ನಿರಾಕ್ಷೇಪಣಾ ಪತ್ರ ಸಲ್ಲಿಸಿದ್ದು, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಹೇಳಿದರು.

Advertisement

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಮಟ್ಟದ ಏಕ ಗವಾಕ್ಷಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮಾಚೇನಹಳ್ಳಿ ನಿದಿಗೆ ಕೈಗಾರಿಕಾ ಪ್ರದೇಶದ ಒಟ್ಟು 800 ಎಕರೆ ಪ್ರದೇಶದಲ್ಲಿ ಟೌನ್‌ಶಿಪ್‌ ರಚನೆಯಿಂದ ಈ ಭಾಗದ ಕೈಗಾರಿಕೆಗಳ ಬೆಳವಣೆಗೆಗೆ ಉತ್ತೇಜನ ದೊರೆಯಲಿದೆ. ಈ ಕುರಿತು ಪ್ರಸ್ತಾವನೆ ಪೌರಾಡಳಿತ ಇಲಾಖೆಗೆ ಸಲ್ಲಿಸುವ ಮೂಲಕ ಆದಷ್ಟು ಬೇಗನೆ ಟೌನ್‌ಶಿಪ್‌ ರಚನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಅತಿಕ್ರಮಣ ತೆರವುಗೊಳಿಸಿ ಜೆಸಿಬಿ ಬಳಸಿ ಗಡಿ ಗುರುತಿಸುವ ಕಾರ್ಯ ಮಾಡಬೇಕು. ಸರ್ವೇ ಸಂಖ್ಯೆ 120ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿರುವ 604 ಎಕರೆ ಜಮೀನಿನ ಪೈಕಿ ಖಾಸಗಿಯವರಿಗೆ ಸೇರಿದ 21 ಎಕರೆ ಜಮೀನು ಈಗಾಗಲೇ ಕೆಐಎಡಿಬಿಯವರಿಗೆ ಹಸ್ತಾಂತರಿಸಲಾಗಿದೆ. ಇನ್ನುಳಿದ ಸರ್ಕಾರಕ್ಕೆ ಸೇರಿರುವ 582 ಎಕರೆ ಜಮೀನು ಕುರಿತು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
ಇದನ್ನು ಹಸ್ತಾಂತರಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಉಪವಿಭಾಗಾಧಿಕಾರಿ ಅವರಿಗೆ ಸೂಚಿಸಿದರು.

ಸಿದ್ಲಿಪುರ ಕೈಗಾರಿಕಾ ವಸಾಹತು ಪ್ರದೇಶಕ್ಕೆ ಸಾಗರ ರಸ್ತೆಯಿಂದ ಮುಖ್ಯ ರಸ್ತೆ ಅಭಿವೃದ್ಧಿಪಡಿಸಲು ಸ್ವಾಧೀನಪಡಿಸಿಕೊಳ್ಳಬಹುದಾದ ಭೂಮಿ ಗುರುತಿಸಿ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಕೆಎಸ್‌ಎಸ್‌ಐಡಿಸಿ ಅಧಿಕಾರಿಗಳಿಗೆ ತಿಳಿಸಿದರು.

ಕೈಗಾರಿಕಾ ಪ್ರದೇಶದಲ್ಲಿರುವ ಅಟೋ ಕಾಂಪ್ಲೆಕ್ಸ್‌ ನಲ್ಲಿ ಶೌಚಾಲಯ ನಿರ್ಮಿಸಬೇಕು. ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅವರಿಗೆ ಡಿಸಿ ಸೂಚನೆ ನೀಡಿದರು. ಇದೇ ರೀತಿ ಸಮರ್ಪಕ ವಿದ್ಯುತ್‌ ಸಂಪರ್ಕ ಕಲ್ಪಿಸಲು ಮಹಾನಗರ ಪಾಲಿಕೆ ಕ್ರಮಕೈಗೊಳ್ಳಬೇಕು ಎಂದರು. ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ ಹೆಗಡೆ ಮಾತನಾಡಿ, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶವನ್ನು ರಾಜ್ಯದಲ್ಲೇ ಮಾದರಿ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿಪಡಿಸಬೇಕಾಗಿದೆ. 

Advertisement

ಇಲ್ಲಿ ಘನ ತ್ಯಾಜ್ಯ ಸೂಕ್ತ ವಿಲೇವಾರಿಗೆ 10 ಎಕರೆ ಜಮೀನು ಒದಗಿಸಲು ಈ ಹಿಂದೆ ಅನುಮೋದನೆ ನೀಡಲಾಗಿದ್ದು, ಇನ್ನೂ ಜಮೀನು ಹಸ್ತಾಂತರಿಸಿಲ್ಲ. ಕೈಗಾರಿಕಾ ಪ್ರದೇಶದಲ್ಲಿ ಕಾಲುದಾರಿ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಭದ್ರಾವತಿ ನಗರ ಸಭೆಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ಜಿಪಂ ಸಿಇಒ ಶಿವರಾಮೇಗೌಡ, ಶಿವಮೊಗ್ಗ ಉಪ ವಿಭಾಗಾ ಧಿಕಾರಿ ಪ್ರಕಾಶ್‌, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್‌. ಗಣೇಶ್‌, ಉಪ ನಿರ್ದೇಶಕ ಶಿವಪ್ರಸಾದ್‌, ಕೆಎಸ್‌ಎಸ್‌ಐಡಿಸಿ ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ ಶಿವಕುಮಾರ್‌, ಶಿವಮೊಗ್ಗ ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಜೆ.ಆರ್‌. ವಾಸುದೇವ್‌ ಇತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next