Advertisement

ಪುತ್ತೂರಿಗೆ 8 ಹೊಸ ರೈಲ್ವೆ ಮೇಲ್ಸೇತುವೆ‌ಗೆ ಪ್ರಸ್ತಾವನೆ

10:07 AM Jul 19, 2018 | |

ಪುತ್ತೂರು: ರೈಲ್ವೇ ಗೇಟ್‌ ಗಳ ಬದಲಿಗೆ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರಕಾರ ಮುಂದಾಗಿದ್ದು, ಪುತ್ತೂರಿಗೆ 8 ಮೇಲ್ಸೇತುವೆ ಅಗತ್ಯವೆಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಮುರ ರೈಲ್ವೇ ಗೇಟನ್ನು ಮುಚ್ಚಿ, ಮೇಲ್ಸೇತುವೆ ನಿರ್ಮಿಸಲಾಗಿದೆ. ಇಲ್ಲಿ ವಾಹನ ಸಂಚಾರವೂ ಆರಂಭಗೊಂಡಿದೆ. ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಮುರ ರೈಲ್ವೇ ಮೇಲ್ಸೇತುವೆ ಮಾದರಿಯಲ್ಲಿ ತಾಲೂಕಿನ ಹಲವು ಕಡೆಗಳಲ್ಲಿ ಮೇಲ್ಸೇತುವೆ ನಿರ್ಮಿಸುವಂತೆ ಪ್ರಸ್ತಾವನೆಯಲ್ಲಿ ಉಲ್ಲೇಖ ಮಾಡಲಾಗಿದೆ.

Advertisement

ಪ್ರತಿ ರೈಲ್ವೇ ಗೇಟ್‌ನಲ್ಲಿ ಓರ್ವ ಸಿಬಂದಿಯನ್ನು ಇಲಾಖೆ ನೇಮಕ ಮಾಡಿರುತ್ತದೆ. ರೈಲು ಬರುವ ವೇಳೆಯಲ್ಲಿ ಮಾತ್ರ ಇವರಿಗೆ ಕೆಲಸ. ವಾಹನ ಸಂಚಾರವನ್ನು ತಡೆದು ಗೇಟ್‌ ಮುಚ್ಚಿದರೆ, ರೈಲು ಹೋದ ಬಳಿಕ ಮತ್ತೆ ಗೇಟ್‌ ತೆರೆಯುವುದು. ಇಂತಹ ಗೇಟ್‌ ಗಳ ಸ್ಥಳದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿದರೆ, ಸಿಬಂದಿ ಅಗತ್ಯ ಇರುವುದಿಲ್ಲ. ಅಪಘಾತಗಳ ಸಾಧ್ಯತೆಯೂ ಇಲ್ಲ. ಒಮ್ಮೆಗೇ 2.5 ಕೋಟಿ ರೂ. ಖರ್ಚು ಮಾಡಿದರೆ, ಬಳಿಕ ಪ್ರತಿ ತಿಂಗಳು ಸಿಬಂದಿಗೆ ವೇತನ ನೀಡುವ ಪ್ರಮೇಯ ಬರುವುದಿಲ್ಲ ಎನ್ನುವುದು ಲೆಕ್ಕಾಚಾರ.

ಪುತ್ತೂರಿನಲ್ಲಿ ದೊಡ್ಡ ಮಟ್ಟಿಗೆ ಸುದ್ದಿಯಲ್ಲಿರುವ ಎರಡು ರೈಲ್ವೇ ಸೇತುವೆಗಳೆಂದರೆ ಎಪಿಎಂಸಿ ಹಾಗೂ ನೆಹರೂನಗರ. ಈ ಎರಡು ಸೇತುವೆಗಳ ಬಗ್ಗೆ ರೈಲ್ವೇ ಇಲಾಖೆ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಅಸಾಧ್ಯ. ರಾಜ್ಯ ಸರಕಾರದ ಸಹಯೋಗ ಇದ್ದರೆ ಮಾತ್ರ ಮುಂದಡಿ ಇಡಬಹುದು ಎಂದು ಸಂಸದರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಿಳಿಸಲಾಗಿದೆ. ಆದರೆ ದೊಡ್ಡ ಪ್ರಮಾಣದ ಅನುದಾನ ನೀಡಲು ಸಾಧ್ಯವಿಲ್ಲ ಎಂದಿರುವ ರಾಜ್ಯ ಸರಕಾರ, ಪರ್ಯಾಯ ಮಾರ್ಗಗಳ ಹುಡುಕಾಟಕ್ಕೆ ರೈಲ್ವೇ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದೆ.

ನೆಹರೂನಗರಕ್ಕೆ ಓವರ್‌ ಬ್ರಿಡ್ಜ್?
ನೆಹರೂನಗರ ವಿವೇಕಾನಂದ ಕಾಲೇಜು ರಸ್ತೆಯಲ್ಲಿರುವ ಸೇತುವೆ ಬಗ್ಗೆ ಈಗಾಗಲೇ ಹಲವು ಬಾರಿ ಗಮನ ಸೆಳೆಯಲಾಗಿದೆ. ರಸ್ತೆಗಿಂತ ಸೇತುವೆ ಕಿರಿದಾಗಿದ್ದು, ಕಾಲೇಜು ಬಿಟ್ಟ ವೇಳೆ ವಾಹನ ಸಂಚಾರ ದುಸ್ತರ. ಆದ್ದರಿಂದ ಇಲ್ಲಿ ಹೊಸ ಸೇತುವೆ ನಿರ್ಮಿಸುವಂತೆ ಬೇಡಿಕೆ ಇಡಲಾಗಿತ್ತು. ಆದರೆ ರಾಜ್ಯ ಸರಕಾರದ ಅನುದಾನ ಸಿಗದೇ, ರೈಲ್ವೇ ಇಲಾಖೆ ಮುಂದಡಿ ಇಡುತ್ತಿಲ್ಲ. ಮೇಲ್ಸೇತುವೆಗೆ ದೊಡ್ಡ ಪ್ರಮಾಣದ ಅನುದಾನ ಅಗತ್ಯ ಇರುವುದರಿಂದ, ಇದರ ಬದಲಿಗೆ ನಡೆದು ಹೋಗಲು ಓವರ್‌ ಬ್ರಿಡ್ಜ್ ನಿರ್ಮಿಸಿದರೆ ಹೇಗೆ ಎಂದು ಪ್ರಶ್ನಿಸಲಾಗಿದೆ. ಒಂದು ವೇಳೆ ರೈಲ್ವೇ ಇಲಾಖೆ ಇದಕ್ಕೆ ಸಮ್ಮತಿ ಸೂಚಿಸಿದರೆ, ಈಗಿರುವ ರೈಲ್ವೇ ಮೇಲ್ಸೇತುವೆ ಪಕ್ಕದಲ್ಲೇ ಓವರ್‌ ಬ್ರಿಡ್ಜ್ ನಿರ್ಮಾಣ ಆಗಲಿದೆ.

ಈ ಹಿಂದೆ ನೆಹರೂನಗರಕ್ಕೆ ಹೊಸ ಮೇಲ್ಸೇತುವೆ ನಿರ್ಮಾಣದ ಎಸ್ಟಿಮೇಟ್‌ ಸಿದ್ಧಪಡಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಇದಕ್ಕೆ ಪೂರ್ಣ ಹಣವನ್ನು ರಾಜ್ಯ ಸರಕಾರವೇ ಭರಿಸುವಂತೆ ರೈಲ್ವೇ ಇಲಾಖೆ ತಿಳಿಸಿದ್ದರಿಂದ, ಎಸ್ಟಿಮೇಟ್‌ ಮೂಲೆ ಗುಂಪಾಯಿತು. ಇದೀಗ ಸೇತುವೆ ನಿರ್ಮಾಣದ ಹಿನ್ನೆಲೆಯಲ್ಲೂ ಎಸ್ಟಿಮೇಟ್‌ ಸಿದ್ಧ ಪಡಿಸಲಾಗುತ್ತಿದೆ. ರೈಲ್ವೇ ಮೇಲ್ಸೇತುವೆ ನಿರ್ಮಾಣವೋ ಅಥವಾ ಓವರ್‌ ಬ್ರಿಡ್ಜ್ ನಿರ್ಮಾಣವೋ ಎನ್ನುವುದು ಕೊನೆಯಲ್ಲಿ ತೀರ್ಮಾನ ಆಗಬೇಕಿದೆ.

Advertisement

ಎಲ್ಲೆಲ್ಲಿ ಮೇಲ್ಸೇತುವೆ?
ಪುತ್ತೂರು ತಾಲೂಕಿನ ಕಡಬದ ಸುಂಕದಕಟ್ಟೆ ಕ್ರಾಸಿಂಗ್‌, ಐತ್ತೂರು ಗ್ರಾಮದ ಬಜಕೆರೆ ಕ್ರಾಸಿಂಗ್‌, ಕೋಡಿಂಬಾಳ ಬಳಿ ಇರುವ ಕ್ರಾಸಿಂಗ್‌, ಸವಣೂರು ಕ್ರಾಸಿಂಗ್‌, ವೀರಮಂಗಲ ಕ್ರಾಸಿಂಗ್‌, ಮುಕ್ವೆ ಬಳಿಯ ಪುರುಷರಕಟ್ಟೆ ಕ್ರಾಸಿಂಗ್‌, ನರಿಮೊಗರು ಗ್ರಾ.ಪಂ. ಬಳಿಯ ಸಾಂದೀಪನಿ ಶಾಲಾ ಬಳಿಯ ಕ್ರಾಸಿಂಗ್‌, ಸಾಮೆತ್ತಡ್ಕ ರೈಲ್ವೇ ಕ್ರಾಸಿಂಗ್‌ಗಳ ಬದಲಿಗೆ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ ಎಂದು ರೈಲ್ವೇ ಇಲಾಖೆಯ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next