Advertisement

ಸುವರ್ಣ ಭವನ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆ

04:09 PM Sep 10, 2019 | Team Udayavani |

ಮಾಗಡಿ: ಮಾಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 75 ವರ್ಷ ತುಂಬಿದೆ. ಇದರ ಪ್ರಯುಕ್ತ ಇಲ್ಲೊಂದು ಸುಂದರವಾದ ಸುವರ್ಣ ಭವನ ನಿರ್ಮಿಸಲು 5 ಕೋಟಿ ರೂ. ಯೋಜನಾ ಪಟ್ಟಿ ತಯಾರಿಸಿ, ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಎ.ಮಂಜುನಾಥ್‌ ತಿಳಿಸಿದರು.

Advertisement

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಬಹಳ ವರ್ಷಗಳ ಹಿಂದೆಯೇ ಹೊನ್ನಸಿದ್ದಪ್ಪ ಎಂಬ ದಾನಿ ಹರ್ತಿ ಬಳಿ 20 ಎಕರೆ ಜಮೀನನ್ನು ಶಿಕ್ಷಣ ಇಲಾಖೆ ದಾನವಾಗಿ ನೀಡಿದ್ದರು. ಅದನ್ನು ಬೇರೆಯವರು ಉಳಿಮೆ ಮಾಡುತ್ತಿದ್ದರು. ಈಗ ಅದನ್ನು ಪತ್ತೆ ಮಾಡಿ, ಶಿಕ್ಷಣ ಇಲಾಖೆ ವಶಕ್ಕೆ ಪಡೆದಿದೆ ಎಂದು ತಿಳಿಸಿದರು.

ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ: ಮಾಗಡಿಯಲ್ಲಿ ಅದ್ಧೂರಿಯಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಆಚರಿಸಲು ತೀರ್ಮಾನಿಸಲಾಗಿದೆ. ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಜವಾಬ್ದಾರಿಯುತ ಶಿಕ್ಷಕರು ಒಗ್ಗೂಡಿ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಇತರರಿಗೆ ಮಾದರಿಯಾಗಬೇಕಿದೆ ಎಂದು ಹೇಳಿದರು.

ಮಾಗಡಿ ಸಾಂಸ್ಕೃತಿಕ ತೊಟ್ಟಿಲು: ನಾಡಪ್ರಭು ಕೆಂಪೇಗೌಡರ ತವರೂರು ಮಾಗಡಿ. ಕಲೆ, ಸಾಹಿತ್ಯ, ಸಂಗೀತ, ಜನಪದ ಪರಂಪರೆಯ ಇಲ್ಲಿ ಹಾಸುಹೊಕ್ಕಾಗಿದೆ. ಇದೊಂದು ಸಾಂಸ್ಕೃತಿಕ ತೊಟ್ಟಿಲು ಇದ್ದಂತೆ. ಆಯಾ ಪ್ರದೇಶಕ್ಕೆ ತಕ್ಕಂತೆ ಆಡು ಭಾಷೆ ಪ್ರಚಲಿತವಾಗಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಶಿಕ್ಷಕರು ಗುರುತಿಸಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಪ್ರಯತ್ನ ಹಾಗೂ ಆತ್ಮವಿಶ್ವಾಸದಿಂದ ಈ ವೇದಿಕೆಯ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ಈ ಮೂಲಕ ರಾಜ್ಯಮಟ್ಟದಲ್ಲಿಯೂ ಜಯ ಗಳಿಸಿ, ತಾಲೂಕಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ದೇಶದ ಪ್ರಗತಿಗೆ ಶಿಕ್ಷಣವೇ ಶಕ್ತಿ: ವಿಧಾನ ಪರಿಷತ್‌ ಸದಸ್ಯ ಆ.ದೇವೇಗೌಡ ಮಾತನಾಡಿ, ಈ ದೇಶದ ಪ್ರಗತಿಗೆ ಶಿಕ್ಷಣವೇ ಶಕ್ತಿಯಾಗಿದೆ. ಈ ಶಕ್ತಿ ಕೇಂದ್ರದ ವಿದ್ಯಾರ್ಥಿಗಳ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ತಮ್ಮ ಕೈಲಾದ ಸೇವೆಯನ್ನು ಮಾಡಲು ಸದಾ ಬದ್ಧರಾಗಿದ್ದೇವೆ. ಇಲ್ಲಿನ ಶಿಥಿಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದುರಸ್ತಿಗೆ ಅನುದಾನ ನೀಡಿದ್ದೇವೆ ಎಂದು ಹೇಳಿದರು.

Advertisement

ಪ್ರತಿಭೆ ಅನಾವರಣಗೊಳಿಸಿ: ಪ್ರತಿಭಾವಂತರು ಕೇವಲ ಅಂಕ ಗಳಿಸುವುದಕ್ಕೆ ಮಾತ್ರ ಸೀಮಿತವಾಗದೇ ಸಾಂಸ್ಕೃತಿಕವಾಗಿಯೂ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ಸರ್ಕಾರ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮೂಲಕ ಪ್ರತಿಭೆಗೆ ಅವಕಾಶ ಕಲ್ಪಿಸಿದೆ. ಇದರಿಂದ ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬಹುದು ಎಂದರು.

ಈ ವೇಳೆ ಕೆಂಪೇಗೌಡ ಪ್ರೌಢಶಾಲೆಯ ವಿದ್ಯಾರ್ಥಿಗಳು ಜನಪದ ಸೊಗಡಿನ ವೀರಗಾಸೆ, ಜವಳಿ ಕುಣಿತ, ಸೋಮನ ಕುಡಿತಕ್ಕೆ ಹೆಜ್ಜೆ ಹಾಕಿ ಸಭಿಕರನ್ನು ಮತ್ತು ಮಕ್ಕಳನ್ನು ರಂಜಿಸಿದರು.

ಈ ವೇಳೆಯಲ್ಲಿ ಯುವ ಬೆಂಗಳೂರು ಟ್ರಸ್ಟ್‌ ಅಧ್ಯಕ್ಷ ಸುನೀಲ್, ತಾಪಂ ಅಧ್ಯಕ್ಷೆ ಗೀತಾ ಗಂಗರಂಗಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ, ಸದಸ್ಯೆ ಸುಗುಣ ಕಾಮರಾಜ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರೇಣುಕಾರಾಧ್ಯ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ವೆಂಕಟೇಶ್‌, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಜಿ.ಶಿವರಾಮಯ್ಯ, ಬಿ.ಎನ್‌.ಜಯರಾಂ, ಆರ್‌.ಬಿ.ಅರಸನಾಳ್‌, ಎಂ.ಎಸ್‌.ಕೃಷ್ಣಮೂರ್ತಿ, ಗುಣಶೇಖರ್‌, ಬಿಆರ್‌ಪಿ ಮಂಜುನಾಥ್‌, ಸಿಆರ್‌ಪಿ ಮುನಿಯಪ್ಪ, ಹುಚ್ಚಪ್ಪ, ಕೆ.ಪಿ.ರಂಗಸ್ವಾಮಿ, ಮಲ್ಲೂರು ಲೋಕೇಶ್‌, ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಸಿ.ಪ್ರಕಾಶ್‌, ಗೌರಿಶಂಕರ್‌, ನಾಗರಾಜು, ಸಿ.ಬಿ.ಅಶೋಕ್‌, ಗುಲಾಬ್‌ಜಾನ್‌ ಸಾಬ್‌, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಗಂಗಾಧರಯ್ಯ, ಶಿವಕುಮಾರ್‌, ಉಮಾದೇವಿ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next