Advertisement

ಆಸ್ತಿ ತೆರಿಗೆ ಪರಿಷ್ಕರಿಸಲು ಪಾಲಿಕೆಗೆ ಪ್ರಸ್ತಾವನೆ

03:05 PM Nov 22, 2018 | Team Udayavani |

ಬೆಂಗಳೂರು: ಆಸ್ತಿ ತೆರಿಗೆ ಹೆಚ್ಚಳಕ್ಕೆ ಬಿಬಿಎಂಪಿ ಮುಂದಾಗಿದ್ದು, ಮುಂದಿನ ಆರ್ಥಿಕ ವರ್ಷದಿಂದ ರಾಜಧಾನಿ ನಾಗರಿಕರಿಗೆ ಆಸ್ತಿ ತೆರಿಗೆ ಹೊರೆ ಬೀಳುವ ಸಾಧ್ಯತೆಯಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶೇ.25 ಹಾಗೂ ವಸತಿಯೇತರ ಆಸ್ತಿಗಳಿಗೆ ಶೇ.30ರಷ್ಟು ತೆರಿಗೆ ಪರಿಷ್ಕರಿಸಲು ಅವಕಾಶವಿದ್ದು ಈ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕೆಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಪಾಲಿಕೆಯ ಸಭೆಯ ಮುಂದೆ ಆಯುಕ್ತರು ವಿಷಯ ಮಂಡಿಸಿದ್ದಾರೆ.

Advertisement

ಅನುಮಾನ: ಬಿಬಿಎಂಪಿ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಉದ್ದೇಶದಿಂದ 2019-20 ವರ್ಷದಿಂದ ಆಸ್ತಿ ತೆರಿಗೆ ಪರಿಷ್ಕರಣೆಗೆ ಅಗತ್ಯ ಕ್ರಮಕೈಗೊಳ್ಳುವಂತೆ ಪ್ರಸ್ತಾವನೆಯಲ್ಲಿ ಕೋರಿದ್ದಾರೆ. ಆದರೆ, ಮುಂದಿನ ವರ್ಷ ಲೋಕಸಭೆ ಚುನಾವಣೆ ಇರುವುದರಿಂದ ಆಸ್ತಿ ತೆರಿಗೆ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡುವುದೇ ಎಂಬ ಅನುಮಾನವೂ ಇದೆ. 

 ಈ ಹಿಂದೆ 2016 ರಲ್ಲಿ ತೆರಿಗೆ ಹೆಚ್ಚಳ ಮಾಡಿದ್ದು, ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಪರಿಷ್ಕರಣೆಗೆ ಅವಕಾಶವಿದ್ದು, ಹೀಗಾಗಿ, ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಒಂದೊಮ್ಮೆ ಪಾಲಿಕೆ ಸಭೆಯಲ್ಲಿ ವಿಷಯಕ್ಕೆ ಅನುಮೋದನೆ ಸಿಕ್ಕರೆ ಮುಂದಿನ ವರ್ಷದಿಂದ ಆಸ್ತಿ ತೆರಿಗೆ ಹೆಚ್ಚಾಗಲಿದ್ದು, ಆಸ್ತಿ ತೆರಿಗೆ ಪರಿಷ್ಕರಣೆಯಿಂದಾಗಿ ಪಾಲಿಕೆಗೆ ಹೆಚ್ಚುವರಿಯಾಗಿ ಸುಮಾರು 600 ಕೋಟಿ ರೂ. ಆದಾಯ ಸಂಗ್ರಹವಾಗಲಿದೆ ಎಂದು ಅಂದಾದು ಮಾಡಲಾಗಿದೆ. 

ಪ್ರತಿಭಟನೆ ನಡೆದಿತ್ತು: ಬಿಬಿಎಂಪಿಯಲ್ಲಿ 2008-09ರಲ್ಲಿ ಸ್ವಯಂ ಘೋಷಿತ ಆಸ್ತಿ (ಎಸ್‌ಎಎಸ್‌) ಪದ್ಧತಿಯನ್ನು ಜಾರಿಗೊಳಿಸಲಾಗಿತ್ತು. ಅದರಂತೆ ಪಾಲಿಕೆಯಲ್ಲಿ ಎಲ್ಲ ಆಸ್ತಿ ಮಾಲೀಕರು ತಮ್ಮ ಆಸ್ತಿಗಳ ವಿವರಗಳನ್ನು ಘೋಷಣೆ ಮಾಡಿಕೊಂಡಿದ್ದರು. 2011ರಲ್ಲಿ ಆಸ್ತಿ ತೆರಿಗೆ ಹೆಚ್ಚಿಸಲು ಪಾಲಿಕೆ ಮುಂದಾಗಿತ್ತು. ಆದರೆ, ವಿವಿಧ ಸಂಘ-ಸಂಸ್ಥೆಗಳು ಹಾಗೂ ಕ್ಷೇಮಾಭಿವೃದ್ಧಿ ಸಂಘಟನೆಗಳು ಪ್ರತಿಭಟನೆ ನಡೆಸಿದರಿಂದಾಗಿ ತೆರಿಗೆ ಹೆಚ್ಚಳ ಪ್ರಸ್ತಾವನೆಯನ್ನು ಕೈಬಿಡಲಾಗಿತ್ತು.

2015ರಲ್ಲಿ ಆಡಳಿತಾಧಿಕಾರಿಗಳು 2016- 17ನೇ ಸಾಲಿನಿಂದ ತೆರಿಗೆ ಪರಿಷ್ಕರಣೆ ಹಾಗೂ ವಲಯ ವರ್ಗೀಕರಣ ಮಾಡುವಂತೆ ಆದೇಶಿಸಿದ್ದರು. ಅದಕ್ಕೆ ಸರ್ಕಾರವೂ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ತೆರಿಗೆ ಹೆಚ್ಚಳ ನಿರ್ಧಾರ ಕೈಗೊಳ್ಳಲಾಗಿತ್ತು. ಇದೀಗ 2019ರ ಮಾರ್ಚ್‌ 31ಕ್ಕೆ ತೆರಿಗೆ ಹೆಚ್ಚಿಸಿ ಮೂರು ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಮತ್ತೆ ಪರಿಷ್ಕರಣೆ ಮಾಡಲು ಆಯುಕ್ತರು ಪ್ರಸ್ತಾವನೆಯನ್ನು ಪಾಲಿಕೆಯ ಮುಂದಿಟ್ಟಿದ್ದಾರೆ 

Advertisement

ಅಡಿಟ್‌ ವರದಿಯಲ್ಲಿ ಉಲ್ಲೇಖ ಕೆಎಂಸಿ ಕಾಯ್ದೆಯಂತೆ ಪ್ರತಿ ಮೂರು ವರ್ಷಗಳಿಗೊಮ್ಮೆ ಕನಿಷ್ಠ ಶೇ.15ರಿಂದ ಗರಿಷ್ಠ 30ವರೆಗೆ ಆಸ್ತಿ ತೆರಿಗೆ ಪ್ರದೇಶವಾರು ಯೂನಿಟ್‌ ದರಗಳನ್ನು ಪರಿಷ್ಕರಣೆ ಮಾಡಲು ಅವಕಾಶವಿದೆ. ಆದರೆ, ಪಾಲಿಕೆಯಿಂದ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಪಾಲಿಕೆಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಸಾರ್ವಜನಿಕರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗದಿರುವುದು ಕಂಡುಬಂದಿದೆ ಎಂದು ಮುಖ್ಯ ಲೆಕ್ಕ ಪರಿ ಶೋಧಕರ ವರದಿಯಲ್ಲಿ ಉಲ್ಲೇಖೀಸಲಾಗಿದೆ. 

ಕೆಎಂಸಿ ಕಾಯ್ದೆಯಂತೆ ಪ್ರತಿ ಮೂರು ವರ್ಷಗಳಿಗೊಮ್ಮೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲು ಅವಕಾಶವಿದೆ. ಇದೀಗ ತೆರಿಗೆ ಪರಿಷ್ಕರಣೆ ಮಾಡಿ ಮೂರು ವರ್ಷ ಕಳೆದಿದ್ದು, ಮುಂದಿನ ವರ್ಷದಿಂದ ತೆರಿಗೆ ಪರಿಷ್ಕರಣೆ ಮಾಡುವ ಕುರಿತಂತೆ ತೆರಿಗೆ ಹಾಗೂ ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಪಾಲಿಕೆಯ ಮುಂದೆ ವಿಷಯ ಮಂಡಿಸಲಾಗಿದೆ.
ಎನ್‌.ಮಂಜುನಾಥ ಪ್ರಸಾದ್‌, ಆಯುಕ್ತರು

ಉಪಮೇಯರ್‌, ಸ್ಥಾಯಿ ಸಮಿತಿ ಚುನಾವಣೆ ದಿನ ನಿಗದಿ ಸಾಧ್ಯತೆ 
 ಬೆಂಗಳೂರು: ಉಪಮೇಯರ್‌ ಹಾಗೂ 12 ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯ ಮತದಾರರ ಪಟ್ಟಿಯನ್ನು ಬಿಬಿಎಂಪಿ
ಆಯುಕ್ತರು ನಗರ ಪ್ರಾದೇಶಿಕ ಆಯುಕ್ತರಿಗೆ ರವಾನಿಸಿದ್ದು, ಗುರುವಾರ ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ.

ಮೇಯರ್‌ ಹಾಗೂ ಉಪಮೇಯರ್‌ ಚುನಾವಣೆ ನಡೆದು ಎರಡು ತಿಂಗಳು ಕಳೆಯುತ್ತಿದ್ದರೂ ಸ್ಥಾಯಿ ಸಮಿತಿಗಳ ಚುನಾವಣೆಗೆ ಪ್ರಾದೇಶಿಕ ಆಯುಕ್ತರು ದಿನಾಂಕ ಘೋಷಣೆ ಮಾಡಿರುವುದು ಚರ್ಚೆಗೆ ಕಾರಣವಾಗಿತ್ತು. ಜತೆಗೆ ವಿಧಾನ ಪರಿಷತ್‌ ಸದಸ್ಯರಾಗಿದ್ದ ಉಗ್ರಪ್ಪ ಅವರಿಗೆ ಮತದಾನ ನೀಡುವ ಬಗ್ಗೆಯೂ ಗೊಂದಲಗಳು ಉಂಟಾಗಿದ್ದರಿಂದ ಮತದಾರ ಪಟ್ಟಿಗೆಯನ್ನು ಸಲ್ಲಿಸಿರಲಿಲ್ಲ. 

ಇದೀಗ ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಅನಂತಕುಮಾರ್‌, ಉಪಮೇಯರ್‌ ರಮೀಳಾ ಉಮಾಶಂಕರ್‌ ಹಾಗೂ ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಉಗ್ರಪ್ಪ ಅವರ ಹೆಸರುಗಳನ್ನು ಪಟ್ಟಿಯಿಂದ ತೆಗೆಯಲಾಗಿದೆ. ಅದೇ ರೀತಿ ವಿಧಾನ
ಪರಿಷತ್‌ ಸದಸ್ಯರಾದ ಯು.ಬಿ.ವೆಂಕಟೇಶ್‌, ನಸೀರ್‌ ಅಹಮದ್‌, ವೇಣುಗೋಪಾಲ್‌ ಹಾಗೂ ರಮೇಶ್‌ ಗೌಡ ಅವರ
ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ.

ಅದರಂತೆ ಒಟ್ಟು 260 ಮಂದಿ ಮತದಾರರ ಪಟ್ಟಿಯನ್ನು ಪ್ರಾದೇಶಿಕ ಆಯುಕ್ತರಿಗೆ ಮಂಗಳವಾರ ಸಲ್ಲಿಕೆ ಮಾಡಲಾಗಿದ್ದು, ಉಪಮೇಯರ್‌ ಹಾಗೂ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ದಿನಾಂಕ ಗುರುವಾರ ಘೋಷಣೆಯಾಗುವ ಸಾಧ್ಯತೆಯಿದೆ. ಜತೆಗೆ ಎರಡೂ ಚುನಾವಣೆಗಳು ಒಂದೇ ದಿನ ನಡೆಯಲಿದೆ ಎನ್ನಲಾಗಿದೆ.

ಅವಧಿ ಕಡಿಮೆಯಾಗಲಿದೆ: ಪ್ರಸಕ್ತ ಅವಧಿಯಲ್ಲಿ ಎರಡನೇ ಬಾರಿಗೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ತಡೆಯಾಗಿದ್ದು, ಅಂತಿಮ ಅವಧಿಯ ಸ್ಥಾಯಿ ಸಮಿತಿಗಳ ಅವಧಿ ಕಡಿಮೆಯಾಗಲಿದೆ. ಈ ಹಿಂದೆ ಪದ್ಮಾವತಿ ಮೇಯರ್‌ ಆಗಿ ಆಯ್ಕೆಯಾದ ವೇಳೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ಒಂದೂವರೆ ತಿಂಗಳು ವಿಳಂಬವಾಗಿತ್ತು. ಇದೀಗ ಎರಡು ತಿಂಗಳು ವಿಳಂಬವಾಗಿರುವುದರಿಂದ ಕೊನೆಯ ಅವಧಿಯ ಸಮಿತಿಗಳ ಕಾಲಾವಧಿ ಕಡಿಮೆಯಾಗಲಿದೆ. 

ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next