Advertisement

Karnataka Public Schools: ಹೊಸದಾಗಿ ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೆ ಪ್ರಸ್ತಾವನೆ: ಆದೇಶ

12:29 PM Dec 02, 2023 | Team Udayavani |

ಚಿಕ್ಕಬಳ್ಳಾಪುರ: ವಿದ್ಯಾರ್ಥಿ ಪೋಷಕರಲ್ಲಿ ಸಾಕಷ್ಟು ಬೇಡಿಕೆ ಬಂದಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ 2024-25ನೇ ಸಾಲಿಗೆ ಹೊಸದಾಗಿ ಇನ್ನಷ್ಟು ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಆರಂಭಿಸಲು ಕೂಡಲೇ ಪ್ರಸ್ತಾವನೆಗಳನ್ನು ಕಳುಹಿಸುವಂತೆ ರಾಜ್ಯದ ಎಲ್ಲಾ ಉಪ ನಿರ್ದೇಶಕರಿಗೆ ಸಮಗ್ರ ಶಿಕ್ಷಣ ಕರ್ನಾಟಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

Advertisement

ಹೌದು,ರಾಜ್ಯದಲ್ಲಿ 2018-19ನೇ ಸಾಲಿನಿಂದ ಪೂರ್ವಪ್ರಾಥಮಿಕ ಶಾಲೆಯಿಂದ ಹಿಡಿದು 12ನೇ ತರಗತಿವರೆಗೂ ಗುಣಾತ್ಮಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೆ ಸಾಕಷ್ಟು ಬೇಡಿಕೆ ಬಂದಿರುವ ಹಿನ್ನಲೆಯಲ್ಲಿ ಸರ್ಕಾರ ಉಪ ನಿರ್ದೇಶಕರಿಂದ ಹೊಸದಾಗಿ ಕೆಪಿಎಸ್‌ ಶಾಲೆಗಳನ್ನು ಆರಂಭಿಸಲು ಪ್ರಸ್ತಾವನೆಗಳನ್ನು ಆಹ್ವಾನಿಸಿದೆ.

ಹೊಸ ಶಾಲೆಗಳಿಗೆ ಹೆಚ್ಚು ಬೇಡಿಕೆ: ಕೆಪಿಎಸ್‌ ಶಾಲೆಗಳಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಬೋಧನಾ ಪದ್ಧತಿ ಅಳವಡಿಸಿರುವುದರಿಂದ ವಿದ್ಯಾರ್ಥಿ ಪೋಷಕರಿಂದ ಈ ಶಾಲೆಗಳಿಗೆ ಸಾಕಷ್ಟು ಬೇಡಿಕೆ ಬಂದಿರುವುದನ್ನು ಗಮನಿಸಿ ಸರ್ಕಾರ ಹೊಸದಾಗಿ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದ್ದು, ಅಲ್ಲದೇ ರಾಜ್ಯದಲ್ಲಿ ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಸಂಸದರು, ಶಾಸಕರು, ಸಚಿವರುಗಳು, ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಂದಲೂ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯಿಂದಲೂ ಕೂಡ 2024-25ನೇ ಸಾಲಿಗೆ ರಾಜ್ಯದಲ್ಲಿ ಹೊಸದಾಗಿ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಆರಂಭಿಸುವಂತೆ ಮನವಿಗಳು ಸಲ್ಲಿಸಿರುವ ಹಿನ್ನಲೆಯಲ್ಲಿ ಹಲವು ಮಾನದಂಡಗಳನ್ನು ಹೊಂದಿರುವ ಶಾಲೆಗಳನ್ನು ಕೆಪಿಎಸ್‌ ಶಾಲೆಗಳಾಗಿ ಪರಿಗಣಿಸಲು ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ರಾಜ್ಯದಲ್ಲಿ ಹಾಲಿ 282 ಕೆಪಿಎಸ್‌ ಶಾಲೆಗಳು: ರಾಜ್ಯದಲ್ಲಿ ಪ್ರಸ್ತುತ 285 ಕರ್ನಾಟಕ ಪಬ್ಲಿಕ್‌ ಶಾಲೆಗಳು ಯಶಸ್ವಿಯಾಗಿ ಸ್ಥಾಪನೆಗೊಂಡು ಕಾರ್ಯನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ಸರ್ಕಾರವೂ ಒಂದೇ ಸೂರಿನಡಿ, ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವದವರೆಗೂ ಶಿಕ್ಷಣ ನೀಡುವ ಸಲುವಾಗಿ ಹಂತ ಹಂತವಾಗಿ ಒಟ್ಟು 1000 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡಿರುವ ಹಿನ್ನಲೆಯಲ್ಲಿ ಬೇಡಿಕೆ ಇರುವ ಜಿಲ್ಲೆಗಳಲ್ಲಿ ಹೊಸದಾಗಿ ಇನ್ನಷ್ಟು ಕೆಪಿಎಸ್‌ ಶಾಲೆಗಳನ್ನು ತೆರೆಲು ಮುಂದಾಗಿದೆ.

ಕೆಪಿಎಸ್‌ ಶಾಲೆ ತೆರೆಯಲು ಮಾನದಂಡಗಳೇನು?: ಒಂದೇ ಆವರಣದಲ್ಲಿ ಹೊಂದಿಕೊಂಡಂತೆ ಸರ್ಕಾರಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಕಾಲೇಜು ಹೊಂದಿರಬೇಕು, ಕನಿಷ್ಠ 500 ಮಕ್ಕಳು ದಾಖಲಾತಿ ಹೊಂದಿರಬೇಕು ಅಥವಾ ಒಂದೇ ಆವರಣದಲ್ಲಿ ಪ್ರಾಥಮಿಕ, ಪ್ರೌಢ ಶಾಲೆ ಇರಬೇಕು, 500 ಮಕ್ಕಳು ದಾಖಲಾತಿ ಇರಬೇಕು, ಒಂದು ವೇಳೆ ಒಂದೇ ಆವರಣದಲ್ಲಿ ಹೊಂದಿಕೊಂಡಂತೆ ಶಾಲೆಗಳು ಇಲ್ಲದಿದ್ದ ಪಕ್ಷದಲ್ಲಿ ಕನಿಷ್ಠ 500 ಮೀ. ಅಂತರದಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು ಇರಬೇಕು ಕನಿಷ್ಠ 500 ಮಕ್ಕಳು ದಾಖಲಾತಿ ಇರಬೇಕು ಎಂದು ಸಮಗ್ರ ಶಿಕ್ಷಣ ಕರ್ನಾಟಕದ ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ.

Advertisement

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next