ವಿಜಯಪುರ: ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿರುವ 1 ಬೈಕ್ ಆಂಬ್ಯುಲೆನ್ಸ್ ಸೇವೆ, 108 ಆರೋಗ್ಯ ರಕ್ಷಾ ಕವಚ ಯೋಜನೆಯ 28 ಆಂಬ್ಯುಲೆನ್ಸ್ ವಾಹನಗಳಿದ್ದು, ಪ್ರಸಕ್ತ ವರ್ಷದಲ್ಲಿ ಈ ಆಂಬ್ಯುಲೆನ್ಸ್‌ಗಳನ್ನು ಬದಲಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಿರುವ ಆಂಬ್ಯುಲೆನ್ಸ್‌ಗಳು ಸುಭದ್ರವಾಗಿದ್ದರೂ ಭವಿಷ್ಯದ ದೃಷ್ಟಿಯಿಂದ ಬದಲಾವಣೆ ಅಗತ್ಯ ಮನಗಂಡು ಪ್ರಸ್ತಾವನೆ ಸಲ್ಲಿಸಲಾಗಿದೆ. ಮತ್ತೂಂದೆಡೆ ಜಿಲ್ಲಾ ಸರ್ಕಾರಿ ಆಸ್ಪತ್ರೆ ವ್ಯಾಪ್ತಿಯಲ್ಲಿ ನಗುಮಗು ಸೇರಿದಂತೆ 4 ಆಂಬ್ಯುಲೆನ್ಸ್‌ಗಳಿವೆ, ಬಹುತೇಕ ವಾಹನಗಳಲ್ಲಿ ತುರ್ತು ಅಗತ್ಯ ಸಂದರ್ಭದಲ್ಲಿ ಬೇಕಾದ ವೆಂಟಿಲೇಟರ್ ವ್ಯವಸ್ಥೆ ಇದೆ. ಜಿಲ್ಲೆಯ ಮಮದಾಪುರ, ಅಥರ್ಗಾ ಹಾಗೂ ತೆಲಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೊಸದಾಗಿ ಆಂಬ್ಯುಲೆನ್ಸ್ ಸೇವೆಗೆ ಹಾಗೂ ಕಲಕೇರಿ ಆಂಬ್ಯುಲೆನ್ಸ್ ಬದಲಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಹೊರತಾಗಿ ತಾಳಿಕೋಟೆ ನಗುಮಗು ಆಂಬ್ಯುಲೆನ್ಸ್ ಅಪಘಾತದಿಂದ ಮೂಲೆ ಸೇರಿದೆ.
ಖಾಸಗಿ ಆಸ್ಪತ್ರೆಗಳ ಧನದಾಹದ ಮಧ್ಯೆ ಬಡವರ ಪಾಲಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆ ವರದಾನ ಎನಿಸಿದೆ. ಹಲವು ಆಧುನಿಕ ತಂತ್ರಜ್ಞಾನದ ಸೌಲಭ್ಯಗಳ ಸಹಿತ ಸರ್ಕಾರಿ ಆರೋಗ್ಯ ಸೇವೆ ನೀಡುವ ಜಿಲ್ಲಾ ಆಸ್ಪತ್ರೆಯ ಗುಣಮಟ್ಟದ ಸೇವೆಗಾಗಿ 2013ರಲ್ಲಿ ಇಂಡಿಯನ್ ಹೆಲ್ತ್‌ಕೇರ್ ಪ್ರಶಸ್ತಿ, 2016 ಹಾಗೂ 2017ರಲ್ಲಿ ಎರಡು ಬಾರಿ ಕಾಯಕಲ್ಪ ಪ್ರಶಸ್ತಿ ದೊರಕಿದ್ದರೆ, ಕಳೆದ ವರ್ಷವೇ ರಾಷ್ಟ್ರೀಯ ಸೇವಾ ಖಾತ್ರಿ ಪ್ರಶಸ್ತಿ ಪಡೆದಿದೆ. ಎಚ್‌ಐವಿ ಸೋಂಕಿತ ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ಮಾಡಿಸುವಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕಾಗಿ 2009 ಕೆಸೆಪ್ಸ್ ನೀಡಿದ್ದ ಪ್ರಶಸ್ತಿ ಈ ಬಾರಿಯೂ
ದೊರೆತಿದೆ.
ಜಿಲ್ಲಾಸ್ಪತ್ರೆ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭಿಸಿದ್ದು, 100 ಹಾಸಿಗೆಗಳ ಈ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ತೀವ್ರ ನಿಗಾ ಘಟಕದ 20 ಹಾಸಿಗಳೂ ಇವೆ. ಗರ್ಭಿಣಿಯರ ಸುರಕ್ಷಿತ ಹೆರಿಗೆ ಹಾಗೂ ಮಕ್ಕಳ ಆರೈಕೆಗಾಗಿ ಸ್ತ್ರೀರೋಗ, ಮಕ್ಕಳ ತಜ್ಞರು ಹಾಗೂ ಅನೆಸ್ತೇಸಿಯಾ ಸೇರಿದಂತೆ 14 ತಜ್ಞ ವೈದ್ಯರು ಸೇರಿ 36 ಸಿಬ್ಬಂದಿ ನಿರಂತರ ಸೇವೆ ನೀಡುತ್ತಿದ್ದಾರೆ. ಪರಿಣಾಮ ಸಾರ್ವಜನಿಕ ಮನ್ನಣೆಗೆ ಪಾತ್ರವಾಗಿದೆ. ಪರಿಣಾಮವೇ ಮಾಸಿಕ ಸರಾಸರಿ ಸುಮಾರು 1000 ಸುರಕ್ಷಿತ ಹೆರಿಗೆ ನಡೆಯುತ್ತಿವೆ. ಇನ್ನೂ 15 ವೈದ್ಯ-ಸಿಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ಕೋರಲಾಗಿದೆ.
ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ರಾಜ್ಯ-ರಾಷ್ಟ್ರ ಮಟ್ಟದ ಹಲವು ಪ್ರಶಸ್ತಿ ಸಂದಿರುವುದೇ ಇಲ್ಲಿ ಹಲವು ಆಧುನಿಕ ತಂತ್ರಜ್ಞಾನದ ಸುಧಾರಿತ ವೈದ್ಯಕೀಯ ಸೌಲಭ್ಯ ದೊರೆಯುತ್ತಿರುವುದಕ್ಕೆ ಜೀವಂತ ಸಾಕ್ಷಿ. ಭವಿಷ್ಯದಲ್ಲೂ ರಾಜ್ಯದಲ್ಲೇ ವಿಜಯಪುರ ಜಿಲ್ಲೆಯನ್ನು ಸರ್ಕಾರಿ ಆರೋಗ್ಯ ಸೇವೆಯಲ್ಲಿ ಪ್ರಥಮ ಸ್ಥಾನದಲ್ಲೇ ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.
ಡಾ| ಶರಣಪ್ಪ ಕಟ್ಟಿ, ಶಸ್ತ್ರ ಚಿಕಿತ್ಸಕರು, ಜಿಲ್ಲಾ ಸರ್ಕಾರಿ ಆಸ್ಪತ್ರೆ, ವಿಜಯಪುರ
ಜಿ.ಎಸ್. ಕಮತರ