Advertisement

ಹರಕ ಮಳಿ! ಮುರುಕ ಹಪ್ಪಳ.! ನಾಕೂ ಲೋಕ ಅದ್ಲ-ಬದ್ಲ ಖಾತ್ರಿ!; ಕಾಲಜ್ಞಾನ ನುಡಿದ ಶಿವಯ್ಯ ಮುತ್ಯಾ

04:40 PM Apr 04, 2022 | Team Udayavani |

ವಿಜಯಪುರ: “ಈ ವರ್ಷ ಹರಕ ಮಳಿ, ಮುರಕ ಹಪ್ಪಳ ಖಾತ್ರಿ! ದೇಶದಾಗ ಇನ್ನೂ ರಾಜಕೀಯ ಗೊಂದ್ಲ ಇದ್ದೇ ಇರತೈತಿ, ಹಣಕ್ಕ ಮತ ಹಾಕಬ್ಯಾಡ್ರಿ, ಜಾತಿ ಬಿಡ್ರಿ, ಕೆಟ್ಟದ್ ಮಾಡಿದ್ರ ನೋವು ಉಣ್ಣಾದ ಖಾತ್ರಿ. ವಿಚಾರ, ಆಚಾರ, ಉಪಚಾರ ಇರಲಿ. ಬಿಸಲ ಭಾಳ ಆಗೈತಿ, ವಾತಾವರಣ ಚೇಂಜಸ್ ಆಕೈತಿ, ನಾಕೂ ಲೋಕ ಅದ್ಲ್-ಬದ್ಲ್ ಆಗಾದ ಖಾತ್ರಿ.!

Advertisement

ಇದು ಸೋಮವಾರ ವಿಜಯಪುರ ತಾಲೂಕಿನ ಕತಕನಹಳ್ಳಿ ಶ್ರೀಕ್ಷೇತ್ರ ಗುರುಚಕ್ರವರ್ತಿ ಸದಾಶಿವ ಮುತ್ತ್ಯಾನ ಜಾತ್ರೆಯಲ್ಲಿ ಶ್ರೀಮಠದ ಪೀಠಾಧಿಪತಿ ಶಿವಯ್ಯ ಮುತ್ಯಾನ ನೀಡಿದ ಕಾಲಜ್ಞಾನದ ಹೇಳಿಕೆ.

ಕತಕನಹಳ್ಳಿ ಗ್ರಾಮದೇವತೆ ಲಗಮವ್ವದೇವಿ ದೇವಾಲಯದ ಆವರಣ ವೃಕ್ಷದಡಿ ಪಾರಂಪರಿಕವಾಗಿ ಕಾಲಜ್ಞಾನದ ಭವಿಷ್ಯ ನುಡಿದ ಶ್ರೀಗಳು, ಹರಕ ಮಳಿ, ಮುರಕ ಹಪ್ಪಳ ಎಂದು ಆಡಿ ಮಳೆ, ಬೆಳೆ, ರಾಜಕೀಯ, ಪ್ರಸಕ್ತ ವಿದ್ಯಮಾನದ ಭವಿಷ್ಯ ನುಡಿದರು.

ಸದಾಶಿವ ಮುತ್ತ್ಯಾನ ಆಶೀರ್ವಾದದಿಂದ ಸತ್ಯಶುದ್ಧ ಕಾಯಕ ಮಾಡ್ರಿ, ಸತ್ಯದಿಂದ ಮಾಡಿ ಗಳಿಸದ್ದನ್ನ ಸತ್ಕಾರ್ಯಕ್ಕ ಬಳಸ್ರಿ, ಅದನ್ ಉಳಸ್ರಿ, ಒಳ್ಳೆಯದಕ್ಕ ಬಳಸ್ರಿ. ಮಳಿ ಹ್ಯಾಂಗೈತೆಂದ್ರ ಒಂದ ಕಡೆ ಸಾಕನ್ನಂಗ ಮಳಿ ಸುರಿತೈತಿ, ಮಳೆನಾಡು ಬೆಳವಲ ಆಕೈತಿ, ಬೆಳವಲ ನಾಡು ಮಳೆನಾಡ ಆಕೈತಿ ಎಂದು ಜ್ಞಾನ ಸಂದೇಶ ನೀಡಿದರು.

ಆಚಾರ, ವಿಚಾರ, ಉಪಚಾರ ಇರ್ಲಿ. ಬಿಸ್ಲ್ ಭಾಳ ಆಕೈತಿ. ವಾತಾವರಣ ಬದಲಾಕೈತಿ.. ನಾಕೂ ಲೋಕ ಅದಲ್-ಬಲದ್ ಆಕ್ಕಾವ್ ಎಂದು ಜಗತ್ತಿಗೆ ಇರುವ ಅಪಾಯದ ಮುನ್ಸೂಚನೆ ನೀಡಿದರು.

Advertisement

ಇದನ್ನೂ ಓದಿ:25 ಕೋಟಿ ಮೌಲ್ಯದ ನಿವೇಶನ ಕಬಳಿಸಲು ಬಿಜೆಪಿ ಸಂಚು : ಮಂಜುನಾಥ್‌ ಗಡಿಗುಡಾಳ್‌ ಗಂಭೀರ ಆರೋಪ

ಮುತ್ಯಾ ದೇಶದ, ವಿಶ್ವದ ಭವಿಷ್ಯಗಳನ್ನು ಪ್ರತಿ ವರ್ಷ ಹೇಳೋತ ಬಂದೈತಿ, ನೀವು ಮುತ್ತ್ಯಾ ಏನ್ ಹೇಳ್ತಾನ ಕೇಳಾಕ್ ಉತ್ಸುಕದಿಂದ ಬಂದೀರಿ.. ನೀವು ನನ್ನ ಮ್ಯಾಗಿಂದ ಸಾಹೇಬರಿದ್ದಂಗ, ನನ್ನಲ್ಲಿ ಏನೂ ಇಲ್ಲ, ಎಲ್ಲವೂ ಭಕ್ತರಂತೇಲೇ ಐತಿ, ನಾನು ನಿಮಿತ್ತ ಮಾತ್ರ ಎಂದರು.

ಜಾತಿಗೊಂದು ಝೆಂಡಾ, ಝೆಂಡಾದೊಳಗ ಅಜೆಂಡಾ…. ನಾವೇ ಏನೇ ಇದ್ದರೂ ಕಡಿಗೆ ನಾವೆಲ್ಲ ಭಾರತ ಮಾತೆ ಮಕ್ಳ. ನಾವೆಲ್ಲ ಭಾರತೀಯರು ಎಂದು ಹೇಳ್ರಿ. ನೀತಿ, ಪದ್ಧತಿ, ಸಂಸ್ಕೃತಿ ಎಲ್ಲಾ ಇರ್ಲಿ. ಜಾತಿ ನಿಮ್ಮ ಮನಿ ಹೊಸ್ತಿಲ ಒಳಗಿರಲಿ. ಬಾಗ್ಲಾ ದಾಟೀದ್ ಮ್ಯಾಲೆ, ಚೌಕಟ್ಟು ಬಿಟ್ಟು ಹೊರಗ ಬಂದ್ರ ಜಾತಿ ಬಿಡ್ರೀ..ನೀತಿ.. ಪದ್ಧತಿ… ಸಂಸ್ಕೃತಿ ಪಾಲಸ್ರಿ ಎಂದು ಕರೆ ನೀಡಿದರು.

ಏನ್ ಬದಲಾದ್ರೂ ಸದಾಶಿವ ಮುತ್ತ್ಯಾ ನಮಗೆ ನೀಡಿರುವ ಕೈ-ಕಾಲು ಬದಲಾಗಬಾರದು. ಕೈ ಒಳ್ಳೇದ್ನಾ ಮಾಡಬೇಕು, ನಮ್ಮ ಕಾಲುಗಳು ಒಳ್ಳೆ ಜಾಗಾಕ್ಕ ಹೋಗಬೇಕು. ಕಣ್ಣು ಒಳ್ಳೇದ್ನ ಮಾತ್ರ ನೋಡಬೇಕು. ಬಾಯಿ ಒಳ್ಳೇದ ಮಾತ್ರ ಆಡಬೇಕು ಎಂದು ಕಾಲಜ್ಞಾನ ಸಂದೇಶ ನೀಡಿದರು.

ದೇಶದಾಗ ಇನ್ನೂ ರಾಜಕೀಯ ಇನ್ನಾ ಭಾಳ ಗೊಂದ್ಲ ಐತಿ, ಕೈ ಕಿತ್ತುಕೊಳ್ಳಬೇಕಂತೈತಿ, ವಸ್ತುಗಳು ಬ್ಯಾಡಪ್ಪೋ ಅನ್ನಾಕತ್ತಾವ.. ರಾಜಕೀಯ ಭವಿಷ್ಯ ಮುಂದಿನ ಜಾತ್ರಾಗ ಹೇಳ್ತೀನಿ. ದೇಶದಾಗ 140 ಕೋಟಿ ಜನಸಂಖ್ಯಾಕ ಎರಡು ವ್ಯಾಕ್ಸೀನ್, ಇಂಜಕ್ಷನ್ ಕೊಟ್ಟೈತಿ. ಒಳ್ಳೇ ಕೆಲಸ ಮಾಡಿದ್ಕ ಈ ಸರ್ಕಾರನ ನೀವೆಲ್ಲ ನೆನಸಾಕಬೇಕ. ನಮಗಲ್ದ ವಿದೇಶಕ್ಕೂ ಕೋವಿಡ್ ಔಷಧ ಕಳಿಸೇತಿ., ಒಳ್ಳೆಯವರಾರು, ಕೆಟ್ಟವರಾರರು ಎಂದು ವಿಚಾರ ಮಾಡ್ರೀ ಎಂದರು.

ಶುಭಕೃತ, ಶುಭ ಅಂದರ ಒಳ್ಳೆಯದು, ಮಂಗಳ… ನೆಮ್ಮದಿ… ಸು:ಖ-ಶಾಂತಿ, ಸಂತೋಷ, ವಿಶಾಲ ಮನೋಭಾವ ಅರ್ಥ ಹೇಳ್ತೈತಿ, ಶುಭದ ಮುಂದೆ ಕೃತ ಎನ್ನುವ ಶಬ್ದ ಬಂದಿದೆ, ಈ ವರ್ಷ ಕೃತ ಆ ಒಳ್ಳೆ ಕೆಲಸ ಮಾಡಾವ್ರಿಗೆ ಶುಭ ತರತೈತಿ. ಐಶ್ವರ್ಯ ಕೊಡತೈತಿ. ಕೆಟ್ಟದೇನಾದ್ರೂ ಮಾಡಿದ್ರ ನೋವು ಉಣಬೇಕಾಕೈತಿ… ಎಂದು ಎಚ್ಚರಿಕೆಯನ್ನೂ ನೀಡಿದರು.

ಭಾರತೀಯ ಸಂಸ್ಕ್ರತಿ ಉಳಿಸಿ ಬೆಳೆಸುವ ಗುರುಗಳು ಮಾಡಬೇಕು. ಭಾರತ ಗುರು ಪ್ರಾಧಾನ್ಯ ದೇಶ, ಎಲ್ಲ ದೇಶಗಳು ಭಾರತ ಮಾತು ಕೇಳ್ತಾವ. ಅಂತಹ ಕಾಲ ಈಗ ಬಂದಾವ. ಮತ ಹಾಕುವಾಗ ಹಣಕ್ಕ ಮತ ಹಾಕಬ್ಯಾಡ್ರಿ. ಗುಣಕ್ ಮತ ಹಾಕ್ರಿ. ಭಾರತ ಸಂಸ್ಕೃತಿ, ಸಂಸ್ಕಾರ, ಪ್ರೀತಿ, ವಾತ್ಸಲ್ಯ ಉಳಿದಿದ್ದೇ ಮಾತೃ ಸ್ವರೂಪಿ ಹೆಣ್ಮಕ್ಕಳಿಂದ ಎನ್ನಾದ್ನ ಯಾರೂ ಮರಿಬ್ಯಾಡ್ರಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next