Advertisement

ಆಸ್ತಿ ತೆರಿಗೆಯ ಶೇ.15ರಷ್ಟು ಘನತ್ಯಾಜ್ಯ ಉಪಕರ

12:27 PM Nov 24, 2017 | Team Udayavani |

ಬೆಂಗಳೂರು: ನಗರದ ಆಸ್ತಿ ಮಾಲೀಕರಿಗೆ ಮತ್ತೂಂದು ಶಾಕ್‌ ನೀಡಲು ಬಿಬಿಎಂಪಿ ಮುಂದಾಗಿದೆ. ಹಾಲಿ ನಿಗದಿಪಡಿಸಿರುವ ಘನತ್ಯಾಜ್ಯ ನಿರ್ವಹಣಾ ಉಪಕರ ದರಪಟ್ಟಿ ರದ್ದುಪಡಿಸಿ, ಆಸ್ತಿ ತೆರಿಗೆಯ ಶೇ.15ರಷ್ಟು ಉಪಕರ ಸಂಗ್ರಹಿಸಲು ಪಾಲಿಕೆ ನಿರ್ಧರಿಸಿದೆ.

Advertisement

ಪಾಲಿಕೆಯಿಂದ ನಗರದಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಪ್ರತಿ ವರ್ಷ 400 ಕೋಟಿಗೂ ಹೆಚ್ಚು ಹಣ ವ್ಯಯವಾಗುತ್ತಿದೆ. ಆದರೆ, ಪಾಲಿಕೆಗೆ ವಾರ್ಷಿಕ ಸಂಗ್ರಹವಾಗುವ ಘನತ್ಯಾಜ್ಯ ಉಪಕರ ಕೇವಲ 40 ಕೋಟಿ ರೂ. ಮಾತ್ರ. ಆ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಮೇಲೆ ಶೇ.15ರಷ್ಟು ಘನತ್ಯಾಜ್ಯ ಉಪಕರ ವಿಧಿಸಲು ಪಾಲಿಕೆ ಸಿದ್ಧತೆ ನಡೆಸಿದೆ.

ಈ ಹಿಂದೆ ಆಸ್ತಿ ಮಾಲೀಕರಿಗೆ ಶೇ.20 ರಿಂದ 25ರಷ್ಟು ಆಸ್ತಿ ತೆರಿಗೆ ಹೆಚ್ಚಿಸಿ ಶಾಕ್‌ ನೀಡಿದ ಪಾಲಿಕೆಯ ಅಧಿಕಾರಿಗಳು, ಇದೀಗ ಘನತ್ಯಾಜ್ಯ ಉಪಕರ ಶೇ.15ರಷ್ಟು ಹೆಚ್ಚಿಸುವ ಸಂಬಂಧ ವಿಷಯವನ್ನು ಅನುಮೋದನೆಗಾಗಿ ಕೌನ್ಸಿಲ್‌ ಮುಂದೆ ಇಡಲು ಮುಂದಾಗಿದ್ದಾರೆ.

ಕಳೆದ 5 ವರ್ಷಗಳಿಂದ ನಗರದ ಆಸ್ತಿ ಮಾಲೀಕರಿಂದ ನಿಗದಿತ ಮೊತ್ತವನ್ನು ಘನತ್ಯಾಜ್ಯ ಉಪಕರವಾಗಿ ಸಂಗ್ರಹಿಸಲಾಗುತ್ತಿತ್ತು. ಇದೀಗ ಅದನ್ನು ಕೈಬಿಟ್ಟಿರು ಬಿಬಿಎಂಪಿ ಆಸ್ತಿ ತೆರಿಗೆಯ ಶೇ.15ರಷ್ಟನ್ನು ಉಪಕರವಾಗಿ ಸಂಗ್ರಹಿಸುವ ಮೂಲಕ ಆದಾಯ ಹೆಚ್ಚಿಸಲು ಚಿಂತನೆ ನಡೆಸಿದ್ದಾರೆ. 

ನಗರದಲ್ಲಿ ಒಂದೇ ರೀತಿಯ ಕರ ಸಂಗ್ರಹ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ವಸತಿ, ವಾಣಿಜ್ಯ, ಕೈಗಾರಿಕೆ, ಹೋಟೆಲ್‌, ಕಲ್ಯಾಣ ಮಂಟಪ ಹಾಗೂ ನರ್ಸಿಂಗ್‌ ಹೋಂ ಸೇರಿ ಎಲ್ಲ ಮಾದರಿಯ ಕಟ್ಟಡಗಳು ಸಹ ಆಸ್ತಿ ತೆರಿಗೆಯ ಶೇ.15ರಷ್ಟು ಘನತ್ಯಾಜ್ಯ ಉಪಕರ ಸಂಗ್ರಹಿಸಬೇಕಾಗುತ್ತದೆ.

Advertisement

ಶೇ.50ರಷ್ಟು ವಿನಾಯಿತಿ: ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ತಾವೇ ಸಂಸ್ಕರಿಸಿದರೆ ಪಾಲಿಕೆಯಿಂದ ಅಂತಹವರಿಗೆ ಘನತ್ಯಾಜ್ಯ ನಿರ್ವಹಣಾ ಉಪಕರದಲ್ಲಿ ಶೇ.50ರಷ್ಟು ವಿನಾಯಿತಿ ನೀಡಲಾಗುತ್ತದೆ. ಅದರಂತೆ ಶೇ.15ರಲ್ಲಿ ಶೇ.7.5ರಷ್ಟು ವಿನಾಯಿತಿ ನೀಡಲಾಗುತ್ತದೆ. 

ಆದಾಯ ಪ್ರಮಾಣ ಹೆಚ್ಚಳ: ಬಿಬಿಎಂಪಿ ವತಿಯಿಂದ ಆಸ್ತಿ ತೆರಿಗೆಯ ಮೇಲೆ ಶೇ.15ರಷ್ಟು ಘನತ್ಯಾಜ್ಯ ಸಂಗ್ರಹಿಸುವುದರಿಂದ ಪಾಲಿಕೆಗೆ ವಾರ್ಷಿಕ 300 ಕೋಟಿ ರೂ.ಗೂ ಹೆಚ್ಚಿನ ತೆರಿಗೆ ಸಂಗ್ರಹವಾಗುತ್ತದೆ ಎಂಬುದು ಅಧಿಕಾರಿಗಳ ವಾದವಾಗಿದೆ. ಪ್ರತಿವರ್ಷ ಪಾಲಿಕೆಯ ವ್ಯಾಪ್ತಿಗೆ 2 ಸಾವಿರ ಕೋಟಿಗೂ ಅಧಿಕ ತೆರಿಗೆ ಸಂಗ್ರಹವಾಗುತ್ತಿದ್ದು, ಶೇ.15ರಷ್ಟು ಘನತ್ಯಾಜ್ಯ ಉಪಕರ ವಿಧಿಸುವುದರಿಂದ ಹೆಚ್ಚುವರಿಯಾಗಿ 300 ಕೋಟಿ ರೂ. ಸಂಗ್ರಹವಾಗಲಿದೆ. 

ಉಪಕರ ಹೆಚ್ಚಳ ಹೇಗೆ?: ಈ ಹಿಂದೆ ವಸತಿ, ವಾಣಿಜ್ಯ ಹೀಗೆ ಹಲವು ಮಾದರಿಯ ಕಟ್ಟಡಗಳಿಗೆ ಘನತ್ಯಾಜ್ಯ ಉಪಕರ ಇಂತಿಷ್ಟು ಎಂದು ನಿಗದಿಪಡಿಸಲಾಗಿತ್ತು. ಅದರಂತೆ ಆಸ್ತಿ ಮಾಲೀಕರು 1000 ರೂ. ಆಸ್ತಿ ತೆರಿಗೆ ಪಾವತಿಸುತ್ತಿದ್ದರೆ, 120 ರೂ. ಘನತ್ಯಾಜ್ಯ ಪಾವತಿಸಬೇಕಿತ್ತು. ಆದರೆ, ಹೊಸ ನಿಯಮದಂತೆ ಆಸ್ತಿ ಮಾಲೀಕ 1000 ರೂ. ಆಸ್ತಿ ತೆರಿಗೆ ಪಾವತಿಸಿದರೆ, ಅದರ ಶೇ.15ರಷ್ಟು ಅಂದರೆ 150 ರೂ. ಘನತ್ಯಾಜ್ಯ ಉಪಕರ ಸೇರಿ ಒಟ್ಟು 1,150 ರೂ. ಆಸ್ತಿ ತೆರಿಗೆ ಪಾವತಿಸಬೇಕು.

ರಾಜಸ್ಥಾನ ಮಾದರಿ ಉಪಕರ: ರಾಜಸ್ಥಾನದಲ್ಲಿ ಆಸ್ತಿ ತೆರಿಗೆ ಮೊತ್ತದ ಮೇಲೆ ಶೇ.15ರಷ್ಟು ಘನತ್ಯಾಜ್ಯ ಉಪಕರ ಸಂಗ್ರಹಿಸಲಾಗುತ್ತಿದ್ದು, ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಉಲ್ಲಂ ಸಿದವರಿಗೆ ಕಠಿಣ ಕ್ರಮಗಳಿವೆ. ಅವುಗಳನ್ನು ಪಾಲಿಕೆಯಲ್ಲಿ ಅಳವಡಿಸಿಕೊಳ್ಳುವ ಸಂಬಂಧ ಪ್ರಸ್ತಾವನೆ ಸಿದ್ಧಪಡಿಸಿರುವ ಅಧಿಕಾರಿಗಳು ಅನುಮೋದನೆಗಾಗಿ ಕೌನ್ಸಿಲ್‌ ಮುಂದಿಡಲಿದ್ದಾರೆ.

ಪ್ರಸ್ತುತ ಕೆಎಂಸಿ ಕಾಯ್ದೆ ತಿದ್ದುಪಡಿ ಕಾಯ್ದೆ ಶೆಡ್ಯುಲ್‌-13 ಸೆಕ್ಷನ್‌ 43(ಎ) ರಂತೆ ನಿಮಯ ಉಲ್ಲಂ ಸಿದವರಿಗೆ ದಂಡಿ ವಿಧಿಸುತ್ತಿದ್ದು, ಕೌನ್ಸಿಲ್‌ ಅನುಮೋದನೆ ಸಿಕ್ಕರೆ ಮುಂದಿನ ದಿನಗಳಲ್ಲಿ ರಾಜಸ್ಥಾನ ಮಾದರಿಯಲ್ಲಿ ದಂಡ ವಿಧಿಸುವ ವ್ಯವಸ್ಥೆ ಜಾರಿಯಾಗಲಿದೆ. 

ಹಿಂದಿನಿಂದಲೂ ಆಸ್ತಿ ತೆರಿಗೆಯ ಶೇ.15ರಷ್ಟು ಘನತ್ಯಾಜ್ಯ ಉಪಕರ ಸಂಗ್ರಹಿಸಬೇಕೆಂಬ ಚರ್ಚೆ ನಡೆಯುತ್ತಿದ್ದು, ಈ ಸಂಬಂಧ ಪ್ರಸ್ತಾವನೆ ಸಿದ್ಧಪಡಿಸಿ ಅನುಮೋದನೆಗಾಗಿ ಕೌನ್ಸಿಲ್‌ ಮುಂದಿಡಲಾಗಿದೆ. 
-ಸಫ್ರಾಜ್‌ ಖಾನ್‌, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next