Advertisement
2022-23ನೆ ಸಾಲಿಗೆ ರಾಜ್ಯ ಸರಕಾರದ ಸುತ್ತೋಲೆಯಂತೆ ಆಸ್ತಿ ತೆರಿಗೆ ದರಗಳನ್ನು ಪರಿಷ್ಕರಣೆ ಮಾಡುವ ಕುರಿತು ನಗರಸಭೆ ಸಭಾಂಗಣದಲ್ಲಿ ನಗರದ ಪ್ರಥಮ ಪ್ರಜೆ ಉಷಾ ದಾಸರ್ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ತೆರಿಗೆ ಹೆಚ್ಚಳಕ್ಕೆ ತೀವ್ರ ವಿರೋಧಿಸಿದರು.
Related Articles
Advertisement
ಅದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಕೃಷ್ಣ ಪರಾಪುರ, ನಗರಸಭೆ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಎಂಬುದು ವಾಸ್ತವ. ಆದರೆ ನಗರಸಭೆ ಮಾಲೀಕತ್ವದ ವಾಣಿಜ್ಯ ಮಳಿಗೆಗಳ ಬಾಡಿಗೆ ಹೆಚ್ಚಿಸಿ. ಅವುಗಳ ಬಾಡಿಗೆ ಸಂಗ್ರಹಣೆಗೆ ಕಠಿಣ ಕ್ರಮ ಕೈಗೊಳ್ಳುವುದಿಲ್ಲ ಯಾಕೆ? ನಗರಸಭೆ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ, ಲೀಸ್ ಪಡೆದವರು ನಗರಸಭೆಗೆ ಬಿಡಿಗಾಸು ಕೊಟ್ಟು, ಕೋಟ್ಯಂತರ ರೂ. ಗಳಿಸುತ್ತಿದ್ದಾರೆ. ಸಾರ್ವಜನಿಕರಿಗೆ ತೆರಿಗೆ ಹೊರೆ ಹೆಚ್ಚಿಸಲು ಚಿಂತನೆ ನಡೆಸುವ ನಗರಾಡಳಿತ ಈ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲ. ಒಂದು ಕಣ್ಣಿಗೆ ಬೆಣ್ಣೆ, ಮತ್ತೂಂದು ಕಣ್ಣಿಗೆ ಸುಣ್ಣ ಯಾಕೆ ಎಂದು ತರಾಟೆಗೆ ತೆಗೆದುಕೊಂಡರು.
ಅದಕ್ಕೆ ವಿಪಕ್ಷದ ಜೈನುಲ್ಲಾದ್ದೀನ ನಮಾಜಿ, ಲಕ್ಷ್ಮಿ ಸಿದ್ದಮ್ಮನಹಳ್ಳಿ, ಚುಮ್ಮಿ ನದಾಫ್ ಮತ್ತಿತರರು ಧ್ವನಿಗೂಡಿಸಿದರು.
ಬಿಜೆಪಿ ಸದಸ್ಯ ರಾಘವೇಂದ್ರ ಯಳವತ್ತಿ ಮಾತನಾಡಿ, ನಗರಸಭೆಯಲ್ಲಿ ಹಣಕಾಸು ಖಾತೆಗಳು ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. ಯಾವ ಹಣ ಯಾವ ಖಾತೆಗೆ ಹೋಗುತ್ತಿದೆ. ಅದು ಯಾವುದಕ್ಕೆ ಬಳಕೆಯಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ನಗರಸಭೆಯ ಆರ್ಥಿಕ ಸ್ಥಿತಿ ಅಧೋಗತಿಗೆ ಜಾರಿದೆ. ಲೋಡರ್ಸ್, ಗಂಟಿಗಾಡಿ ಕಾರ್ಮಿಕರಿಗೆ ಕಳೆದ 3 ತಿಂಗಳಿಂದ ವೇತನ ನೀಡಲಾಗುತ್ತಿಲ್ಲ. ಲೀಸ್ ಅವಧಿ, ಬಾಡಿಗೆ ಹೆಚ್ಚಿಸಬೇಕು ಎನ್ನುವಾಗ ಯಾರ ಮೇಲೆ ಯಾರಿಗೆ ಪ್ರೀತಿ ಹೆಚ್ಚುವುದೋ ಗೊತ್ತಿಲ್ಲ. ಬಾಡಿಗೆ, ಲೀಸ್ ಮುಂದುವರಿಸುವ ನಿರ್ಣಯಗಳಾಗಿವೆ ಎಂದು ಹಿರಿಯ ಸದಸ್ಯರ ವಿರುದ್ಧ ಕುಟುಕಿದರು.
ಒಳಚರಂಡಿ ಚರ್ಚೆಗೆ ಪಟ್ಟು: ಇದಕ್ಕೂ ಮುನ್ನ ಸಭೆ ಆರಂಭವಾಗುತ್ತಿದ್ದಂತೆ ಒಳಚರಂಡಿ ಅವ್ಯವಸ್ಥೆಯನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಜೈನುಲ್ಲಾದ್ದೀನ ನಮಾಜಿ, ಕಳೆದ ತುರ್ತು ಸಾಮಾನ್ಯ ಸಭೆಯಲ್ಲಿ ಒಳಚರಂಡಿ ಸಮಸ್ಯೆ ಕುರಿತು ಚರ್ಚೆಯಾಗಲಿಲ್ಲ. ಮೊದಲು ಆ ಸಮಸ್ಯೆ ಪರಿಹರಿಸಿ ಸಭೆ ಮುಂದುವರಿಸಿ ಎಂದು ಪಟ್ಟು ಹಿಡಿದರು.
ಬಿಜೆಪಿ ಸದಸ್ಯ ರಾಘವೇಂದ್ರ ಯಳವತ್ತಿ, ಜಿಲ್ಲಾಧಿಕಾರಿಗಳು ನಗರಭೆ ಆಡಳಿತಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಸಕ್ಕಿಂಗ್ ಯಂತ್ರಗಳ ನಿರ್ವಹಣೆಯನ್ನು ಕೆಡಬ್ಲೂಎಸ್‌ಗೆ ಹಸ್ತಾಂತರಿಸಿದ ರು. ಚಾಲಕರ ವೇತನ, ವಾಹನದ ರಿಪೇರಿ ಖರ್ಚು ಎಲ್ಲವನ್ನು ನಗರಸಭೆ ಭರಿಸಿದರೂ ನಿರ್ವಹಣೆ ಮಾತ್ರ ಕೆಡಬ್ಲೂಎಸ್ ಮಾಡುತ್ತಿದೆ. ಆ ನಿರ್ವಹಣೆಯನ್ನು ಮರಳಿ ನಗರಸಭೆಗೆ ತೆಗೆದುಕೊಳ್ಳಲಾಗಿದೆ. ಆದರೆ ನಗರಸಭೆಯ ಯಾವುದೇ ವಿಭಾಗದವರು ಅದರ ನಿರ್ವಹಣೆಗೆ ಮುಂದೆ ಬರುತ್ತಿಲ್ಲ. ಹೀಗಾಗಿ ಸಮಸ್ಯೆಯಾಗಿದೆ. ಸದಸ್ಯರೇ ನಿರ್ವಹಣೆಯ ಜವಾಬ್ದಾರಿ ತೆಗೆದುಕೊಂಡು ಸಮಸ್ಯೆ ಪರಿಹರಿಸಲಾಗುವುದು ಎಂದರು. ನಗರಸಭೆ ಉಪಾಧ್ಯಕ್ಷೆ ಸುನಂದ ಬಾಕಳೆ ಇತರರಿದ್ದರು.
ತೆರಿಗೆ ಹೆಚ್ಚಳ ಅನಿವಾರ್ಯ: ಸರಕಾರದ ಸುತ್ತೋಲೆಯಂತೆ ಕನಿಷ್ಠ ಶೇ.3 ಆಸ್ತಿ ತೆರಿಗೆ ಹೆಚ್ಚಿಸುವುದು ಅನಿವಾರ್ಯ. ತೆರಿಗೆ ಹೆಚ್ಚಿಸದೇ ಹೋದರೆ ಸರಕಾರದಿಂದ ಯಾವುದೇ ಅನುದಾನ ಪಡೆಯಲಾಗಲ್ಲ ಎಂದು ಪೌರಾಯುಕ್ತ ರಮೇಶ್ ಸುಣಗಾರ ಮನವರಿಕೆ ಮಾಡಿಕೊಟ್ಟರು. ಬಳಿಕ ಸಭೆ ಅನುಮೋದನೆ ನೀಡಿತು.