Advertisement
ಈ ಪೈಕಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಾ| ಸಿ.ಎನ್.ಮಂಜುನಾಥ್ ಅವರಿಗಿಂತ ಅವರ ಪತ್ನಿಯರೇ ಹೆಚ್ಚು ಶ್ರೀಮಂತೆಯರಾಗಿದ್ದಾರೆ. ಆಸ್ತಿ ವಿವರ ಪಟ್ಟಿಯಲ್ಲಿ ಡಾ| ಮಂಜುನಾಥ್ ತಮ್ಮಲ್ಲಿರುವ ವೈದ್ಯಕೀಯ ಪುಸ್ತಕಗಳನ್ನೂ ಸೇರಿಸಿರುವುದು ವಿಶೇಷ. ಇನ್ನು ಮಾಜಿ ಸಚಿವ ಗೋವಿಂದ ಕಾರಜೋಳ ಅವರು 2.96 ಕೋಟಿ ರೂ. ಒಡೆಯರಾದರೂ ಅವರ ಬಳಿ ಸ್ವಂತ ವಾಹನ ಇಲ್ಲ, ಸಾಲವೂ ಇಲ್ಲ.
Related Articles
Advertisement
ಬೆಂಗಳೂರು ಗ್ರಾ.ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ| ಸಿ.ಎನ್.ಮಂಜುನಾಥ್ ಅವರ ಆಸ್ತಿ ಮೌಲ್ಯ 43.63 ಕೋಟಿ ರೂ.ಆಗಿದ್ದು, ಅವರ ಪತ್ನಿಯ ಆಸ್ತಿ ಮೌಲ್ಯ 52.66 ಕೋಟಿ ರೂ. ಆಗಿದೆ. ಡಾ| ಮಂಜುನಾಥ್‌ಗೆ 3.74 ಕೋಟಿ ರೂ. ಸಾಲ, ಅನಸೂಯಾ 11.02 ಕೋಟಿ ರೂ. ಸಾಲ ಹಾಗೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ 5.23 ಲಕ್ಷ ರೂ. ಸಾಲ ಇದೆ. ಡಾ| ಮಂಜುನಾಥ್ 6.98 ಕೋಟಿ ರೂ. ಚರಾಸ್ತಿ, 36.65 ಕೋಟಿ ಸ್ಥಿರಾಸ್ತಿ ಹೊಂದಿದ್ದರೆ, ಪತ್ನಿ ಅನುಸೂಯ 17.36 ಕೋಟಿ ರೂ. ಚರಾಸ್ತಿ, 35.30 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಡಾ| ಮಂಜುನಾಥ್ ಅವರಲ್ಲಿ ಮರ್ಸಿಡೀಸ್ ಬೆಂಜ್ ಕಾರು, ಹುಂಡೈ ವರ್ಣಾ ಹಾಗೂ ಪತ್ನಿಯಲ್ಲಿ ಮಾರುತಿ ಸಿಯಾಜ್ ಕಾರು ಇದೆ.
ಆಸ್ತಿ ಪಟ್ಟಿಯಲ್ಲಿ ವೈದ್ಯಕೀಯ ಪುಸ್ತಕಗಳು!:
ಡಾ| ಮಂಜುನಾಥ್ ಅವರು ಸಲ್ಲಿಸಿರುವ ಆಸ್ತಿ ವಿವರದಲ್ಲಿ 100 ವೈದ್ಯಕೀಯ ವಿಷಯಕ್ಕೆ ಸಂಬಂಧಿಸಿದ ಪುಸ್ತಕ, 125 ಕನ್ನಡ ಸಾಹಿತ್ಯ ಕೃತಿಗಳನ್ನೂ ಘೋಷಿಸಿರುವುದು ವಿಶೇಷ. ಪತ್ನಿ ಅನಸೂಯಾ ಹೆಸರಿನಲ್ಲಿ 4 ವಾಸದ ಮನೆಗಳಿದ್ದು, ಡಾ|ಮಂಜುನಾಥ್ ಹೆಸರಿನಲ್ಲಿ ಮನೆ ಇಲ್ಲ.
ಕೋಲಾರ ಅಭ್ಯರ್ಥಿ ಗೌತಮ್ 16.89 ಕೋ.ರೂ. ಆಸ್ತಿ ಒಡೆಯ:
ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ 16.89 ಕೋ. ರೂ.ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿ ಹೊಂದಿದ್ದರೆ, ಅವರ ಪತ್ನಿ ಎಂ.ಪದ್ಮಶ್ರಿ 2.07 ಕೋ. ರೂ.ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಗೌತಮ್ ವಿವಿಧ ಬ್ಯಾಂಕುಗಳಲ್ಲಿ 3.57 ಕೋ. ರೂ. ಸಾಲ ಮಾಡಿದ್ದಾರೆ. ಕೈಯಲ್ಲಿ 46 ಸಾವಿರ ರೂ., 7.50 ಲಕ್ಷ ಮೌಲ್ಯದ 150 ಗ್ರಾಂ ಚಿನ್ನ ಹೊಂದಿದ್ದಾರೆ. ಇವರ ಪತ್ನಿ ಬಳಿ 30 ಲಕ್ಷ ಮೌಲ್ಯದ 600 ಗ್ರಾಂ ಚಿನ್ನ, 17.32 ಲಕ್ಷ ರೂ. ಸಾಲ ಇದೆ. ಗೌತಮ್ ಮೇಲೆ ಬೆಂಗಳೂರು ತಲಘಟ್ಟಪುರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಇದರ ವಿರುದ್ಧ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ಕೋಟಿ ಒಡೆಯ ಕಾರಜೋಳ ಬಳಿ ಸ್ವಂತ ವಾಹನ ಇಲ್ಲ :
ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಆಸ್ತಿ ಮೌಲ್ಯ 2.96 ಕೋಟಿ ರೂ. ಆಗಿದ್ದು, ಪತ್ನಿ ಶಾಂತಾದೇವಿ ಹೆಸರಿನಲ್ಲಿ 1.46 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಕಾರಜೋಳ ಕೈಯಲ್ಲಿ 9 ಲಕ್ಷ ರೂ. ನಗದು, ಪತ್ನಿಯಲ್ಲಿ 2.5 ಲ. ರೂ. ಇದೆ. ಕಾರಜೋಳ ಒಟ್ಟು ಚರಾಸ್ತಿ 1.26 ಕೋ. ರೂ., ಸ್ಥಿರಾಸ್ತಿ 1.62 ಕೋ. ರೂ. ಆಗಿದೆ. ಪತ್ನಿ ಹೆಸರಿನಲ್ಲಿ 79.13 ಲ. ರೂ. ಚರಾಸ್ತಿ, 65 ಲ. ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಇಬ್ಬರಲ್ಲೂ ಸ್ವಂತ ವಾಹನ, ಯಾವುದೇ ಅಪರಾಧ ಪ್ರಕರಣವೂ ಇಲ್ಲ. ಸಾಲವೂ ಇಲ್ಲ.
ಚಂದ್ರಪ್ಪ 1.04 ಕೋಟಿ ಮಾಲೀಕ, 89 ಲಕ್ಷ ರೂ. ಸಾಲಗಾರ :
ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಒಟ್ಟು ಆಸ್ತಿ ಮೌಲ್ಯ 1.04 ಕೋಟಿ ರೂ., ಪತ್ನಿಯ ಒಟ್ಟು ಆಸ್ತಿ ಮೌಲ್ಯ 84.90 ಲಕ್ಷ ರೂ., ಪುತ್ರನ ಆಸ್ತಿ 35.47 ಲಕ್ಷ ರೂ. ಸಹಿತ ಕುಟುಂಬದ ಒಟ್ಟು ಚರಾಸ್ತಿ 2.25 ಕೋಟಿ ರೂ. ಆಗಿದೆ. ಬಿ.ಎನ್.ಚಂದ್ರಪ್ಪ ಬಳಿ 15,028 ಚ. ಅಡಿಯ 53.47 ಲಕ್ಷ ರೂ. ಮೌಲ್ಯದ 6 ನಿವೇಶನ, 8.6 ಕೋ. ರೂ. ಮೌಲ್ಯದ 2 ವಾಣಿಜ್ಯ ಕಟ್ಟಡ, 30 ಲಕ್ಷ ರೂ. ಮೌಲ್ಯದ ಕಾರು ಹೊಂದಿದ್ದು, 89.71 ಲಕ್ಷ ರೂ. ಸಾಲವನ್ನೂ ಹೊಂದಿದ್ದಾರೆ. ಪತ್ನಿ ಕಾವ್ಯಾ ಹೆಸರಲ್ಲಿ 1.25 ಕೋ. ರೂ. ಮೌಲ್ಯದ ಮನೆ, ಪುತ್ರನ ಹೆಸರಲ್ಲಿ ವಾಹನ ಸಾಲ 9.48 ಲಕ್ಷ ರೂ. ಇದೆ. ಕುಟುಂಬದ ಚರ ಹಾಗೂ ಸ್ಥಿರಾಸ್ತಿ ಸೇರಿ 14.33 ಕೋಟಿ ರೂ. ಆಸ್ತಿ ಹೊಂದಿದ್ದಾರೆ.