Advertisement

ಪ್ರಾಪರ್ಟಿ ಕಾರ್ಡ್‌; ಗೊಂದಲ, ಆತುರ ಅಗತ್ಯವಿಲ್ಲ: ಜಿಲ್ಲಾಧಿಕಾರಿ ಸೆಂಥಿಲ್

11:28 PM Jun 20, 2019 | Team Udayavani |

ಮಹಾನಗರ: ನಗರ ಆಸ್ತಿ ಮಾಲಕತ್ವದ ಹಕ್ಕು ದಾಖಲೆಗಳ ಯೋಜನೆ (ಯುಪಿಓಆರ್‌) ಪ್ರಾಪರ್ಟಿ ಕಾರ್ಡ್‌ ಬಗ್ಗೆ ಜನರು ಅನಗತ್ಯ ಗೊಂದಲ ಅಥವಾ ಆತುರ ಪಡುವ ಅಗತ್ಯವಿಲ್ಲ. ಆಸ್ತಿಯ ಮಾರಾಟಕ್ಕೆ ನೋಂದಣಿ ಮಾಡುವ ಸಂದರ್ಭ ಮಾತ್ರ ಪ್ರಾಪರ್ಟಿ ಕಾರ್ಡ್‌ ಕಡ್ಡಾಯವಾಗಿದೆ. ಉಳಿದವರು ಹಂತ ಹಂತವಾಗಿ ಕಾರ್ಡ್‌ ಮಾಡಲು ಇನ್ನೂ ಅವಕಾಶವಿದೆ ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್ ಸ್ಪಷ್ಟಪಡಿಸಿದ್ದಾರೆ.

Advertisement

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಪ್ರತಿದಿನ 80ರಿಂದ 100ರಷ್ಟು ಸದ್ಯ ಪ್ರಾಪರ್ಟಿ ಕಾರ್ಡ್‌ ಗಳನ್ನು ನೀಡಲಾಗುತ್ತಿದೆ. ಪ್ರಾಪರ್ಟಿ ಕಾರ್ಡ್‌ ಕೋರಿ ಅರ್ಜಿ ಸಲ್ಲಿಸುವವರ ಪೈಕಿ ಎಲ್ಲ ದಾಖಲೆಗಳು ಸರಿ ಇದ್ದಲ್ಲಿ ಈಗಾಗಲೇ ಅಳತೆಯಾಗಿರುವ ಆಸ್ತಿಗಳಿಗೆ ಕರಡು ಪ್ರಾಪರ್ಟಿ ಕಾರ್ಡನ್ನು 48 ಗಂಟೆಯೊಳಗೆ ನೀಡಲಾಗುತ್ತದೆ. ಅಳತೆ ಆಗದೆ ಇರುವ ಕಡತಗಳಿಗೆ 10 ದಿನಗಳಲ್ಲಿ ಅಳತೆ ನಡೆಸಿ ಕಾರ್ಡ್‌ ವಿತರಿಸುವ ಕಾರ್ಯ ನಡೆಯುತ್ತಿದೆ. ತಮ್ಮ ಆಸ್ತಿಯ ಮಾರಾಟಕ್ಕೆ ನೋಂದಣಿ ಮಾಡುವ ಸಂದರ್ಭ ಹೊರತುಪಡಿಸಿ ತರಾತುರಿಯಲ್ಲಿ ಪ್ರಾಪರ್ಟಿ ಕಾರ್ಡ್‌ಗಾಗಿ ಕೇಂದ್ರದಲ್ಲಿ ಸಾಲು ನಿಲ್ಲುವ ಅಗತ್ಯವಿಲ್ಲ ಎಂದರು.

ಮಂಗಳೂರು ಯುಪಿಒಆರ್‌ ಯೋಜನೆಗೆ ಒಳಪಡುವ 32 ಗ್ರಾಮಗಳಲ್ಲಿ ಜೂನ್‌ 10ರಿಂದ ನೋಂದಣಿ ಉದ್ದೇಶಕ್ಕೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯಗೊಳಿಸಲಾಗಿದೆ. ಒಟ್ಟು 1,53,466 ಆಸ್ತಿಗಳಲ್ಲಿ 88,031 ಆಸ್ತಿಗಳ ದಾಖಲೆ ಸಂಗ್ರಹಿಸಲಾಗಿದೆ. 41,579 ಆಸ್ತಿಗಳ ಕರಡು ಪಿ.ಆರ್‌. ಕಾರ್ಡ್‌ ಅನುಮೋದಿಸಲಾಗಿದ್ದು, 28,584 ಕರಡು ಕಾರ್ಡ್‌ಗಳನ್ನು ವಿತರಿಸಲಾಗಿದೆ. 28,274 ಅಂತಿಮ ಪಿಆರ್‌ ಕಾರ್ಡ್‌ ಅನುಮೋದಿ ಸಲಾಗಿದ್ದು, 22,206 ಅಂತಿಮ ಕಾರ್ಡ್‌ ಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.

ಒಂದು ವಾರದೊಳಗೆ ನೋಂದಣಿಯಾದ ಆಸ್ತಿಗಳಲ್ಲಿ ದಾಖಲೆ ಸಂಗ್ರಹಿಸಲಾದ ಆಸ್ತಿಗಳಿಗೆ ಸಂಬಂಧಿಸಿ ಪಿಆರ್‌ ಕಾರ್ಡ್‌ ಒದಗಿಸಲು ಎಸ್‌ಎಂಎಸ್‌ ಮೂಲಕ ಸಂದೇಶ ಕಳುಹಿಸುವ ಪ್ರಕ್ರಿಯೆ ಕೆಲವೇ ದಿನದಲ್ಲಿ ಆರಂಭಗೊಳ್ಳಲಿದೆ. ಮುಂದಿನ ವಾರದೊಳಗೆ ವೆಬ್‌ ವ್ಯವಸ್ಥೆಯ ಮೂಲಕವೂ ಆಸ್ತಿ ಮಾಲಕರೇ ತಮ್ಮ ಆಸ್ತಿಯನ್ನು ನೋಂದಾಯಿಸಲು ಅವಕಾಶ ಕಲ್ಪಿಸಲಾಗುವುದು. ಹೀಗಾಗಿ ಪ್ರಾಪರ್ಟಿ ಕಾರ್ಡ್‌ಗಾಗಿ ಯಾರೂ ಆತುರ ಪಡುವ ಅಗತ್ಯವಿಲ್ಲ. ಒಂದು ವೇಳೆ ಯಾರಾದರೂ ಪ್ರಾಪರ್ಟಿ ಕಾರ್ಡ್‌ ಮಾಡಿಸದಿದ್ದರೆ ಇಲಾಖೆಯ ವತಿಯಿಂದಲೇ ಕಾರ್ಡ್‌ ಮಾಡಿಸುವ ವ್ಯವಸ್ಥೆ ಮಾಡಲಿದ್ದೇವೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್ ತಿಳಿಸಿದ್ದಾರೆ.

ಪ್ರಾಪರ್ಟಿ ಕಾರ್ಡ್‌ ಅರ್ಜಿ; ಆನ್‌ಲೈನ್‌ ಶೀಘ್ರ ಜಾರಿ

Udayavani is now on Telegram. Click here to join our channel and stay updated with the latest news.

Next