ಹನೂರು: ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮುಂಗಾರು ಪೂರ್ವ ಬೆಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹನೂರು ತಾಲೂಕಿನ ಅಜ್ಜೀಪುರ, ಎಲ್ಲೇಮಾಳ ಗ್ರಾಮ ವ್ಯಾಪ್ತಿಗಳಿಗೆ ಒಳಪಡುವ ಜಮೀನುಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ರೈತರು ಪೂರ್ವ ಮುಂಗಾರು ಮಳೆ ಮಿಶ್ರಿತ ಬೆಳೆಗಳಾದ ಸಜೆ್ಜೆ ಮತ್ತು ಎಳ್ಳು ಬಿತ್ತನೆ ಮಾಡಿದರು. ಕಳೆದ ತಿಂಗಳಿಂದ ಮಳೆ ಇಲ್ಲದೆ ಬೆಳೆ ಸಂಪೂರ್ಣವಾಗಿ ಹಾನಿಯಾಗಿರುವ ಬಗ್ಗೆ ಕೃಷಿ ಅಧಿಕಾರಿ ಮತ್ತು ಗ್ರಾಮ ಲೆಕ್ಕಾಧಿಕಾರಿಯವರಿಂದ ಸಮಗ್ರ ಮಾಹಿತಿ ಪಡೆದರು . ಇದೇ ವೇಳೆ ಮಾತನಾಡಿ ಬೆಳೆ ಹಾನಿ ಸಂಭವಿಸಿರುವ ಬೆಳೆ ಪ್ರಮಾಣದ ಆಧಾರದ ಮೇಲೆ ರೈತರಿಗೆ ಪರಿಹಾರ ದೊರೆಯಲಿದೆ ಎಂದು ತಿಳಿಸಿದರು.
ಮಲ್ಲಯ್ಯನಪುರಕ್ಕೆ ಜಿಲ್ಲಾಧಿಕಾರಿ ಭೆೇಟಿ:ಗ್ರಾಮದ ರೈತರ ಬೆಳೆ ಹಾನಿಯಾಗಿರುವ ಜಮೀನುಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ರೈತರಿಂದ ಮಾಹಿತಿ ಪಡೆದು ಈಗ ಬಿತ್ತನೆ ಮಾಡಿರುವ ಎಳ್ಳು ಮತ್ತು ಸಜ್ಜೆ ಮಳೆ ಇಲ್ಲದೆ ಸಂಪೂರ್ಣವಾಗಿ ಹಾಳಾಗಿರುವ ಬೆಳೆ ಪರಿಶೀಲನೆ ನಡೆಸಿ ವರ್ಷದಲ್ಲಿ ಎಷ್ಟು ಬೆಳೆಬೆಳೆಯಲಾಗುತ್ತದೆ ಎಂಬುದರ ಬಗ್ಗೆ ರೈತರಿಂದ ನೇರವಾಗಿ ಮಾಹಿತಿ ಪಡೆದರು. ಕಳೆದ ಎರಡು ಮೂರು ತಿಂಗಳಿಂದ ಸಮರ್ಪಕ ಮಳೆಯಿಲ್ಲದೆ ಬೆಳೆ ಹಾಳಾಗಿದೆ. ರಾಗಿ ಜೋಳ ಸಹ ಬಿತ್ತನೆ ಮಾಡಲು ಮಳೆ ಇಲ್ಲ ಎಂದು ರೈತರು ಜಿಲ್ಲಾಧಿಕಾರಿ ಮುಂದೆ ಸಮಸ್ಯೆಯನ್ನು ತೆರೆದಿಟ್ಟರು. ನಂತರ ಮಾತನಾಡಿ ಸರ್ಕಾರದಿಂದ ಸಿಗುವ ಬೆಳೆ ಹಾನಿ ಪರಿಹಾರದ ಹಣ ನಿಮಗೆ ತಲುಪಿಸಲು ಶ್ರಮಿಸುವುದಾಗಿ ತಿಳಿಸಿದರು.
ಕುಡಿವ ನೀರು ಸಮಸ್ಯೆ ಬಗೆಹರಿಸಲು ತಾಕೀತು:ಕೌದಳ್ಳಿ ಗ್ರಾಪಂ ವ್ಯಾಪ್ತಿಯ ಕೇಂದ್ರ ಸ್ಥಾನ ಸೇರಿದಂತೆ ಚಿಕ್ಕಾಲತ್ತೂರು, ಮಲ್ಲಯ್ಯನಪುರ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವ ಹಿನ್ನಲೆ ಇಂದು ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸ್ಥಳದಲ್ಲೆ ಇದ್ದ ಕೌದಳ್ಳಿ ಗ್ರಾಪಂ ಪಿಡಿಒ ಪ್ರದೀಪ್‌ಗೆ ನೀರಿನ ವ್ಯವಸ್ಥೆ ಕಲ್ಪಿಸಲು ಟ್ಯಾಂಕರ್ ಮೂಲಕ ಸರಬರಾಜು ಮಾಡುವಂತೆ ಜಿಲ್ಲಾಧಿಕಾರಿ ಬಿಬಿ ಕಾವೇರಿ ಸೂಚಿಸಿದರು. ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಬೋರ್‌ವೆಲ್ ಕೊರೆದು ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಗ್ರಾಮ ಲೆಕ್ಕಾಧಿಕಾರಿಗಳಾದ ಶೇಷಣ್ಣ, ಮಹಾದೇವಸ್ವಾಮಿ, ತಾಪಂ ಸದಸ್ಯ ಗೋವಿಂದ ಸೇರಿದಂತೆ ರೈತರು ಹಾಜರಿದ್ದರು.