Advertisement

ಸೂಕ್ತ ಸಿದ್ಧತೆ ಅಗತ್ಯ

09:56 PM Sep 25, 2019 | Team Udayavani |

ದೇಶಕ್ಕೊಂದೇ ಗುರುತಿನ ಕಾರ್ಡ್‌ ಪರಿಕಲ್ಪನೆಗೆ ಗೃಹ ಸಚಿವ ಅಮಿತ್‌ ಶಾ ಮರುಜೀವ ನೀಡಿದ್ದಾರೆ. ಸದ್ಯಕ್ಕೆ ಸರಕಾರದ ಮುಂದೆ ಈ ಗುರುತಿನ ಕಾರ್ಡ್‌ ಯೋಜನೆಯ ಪ್ರಸ್ತಾವ ಇಲ್ಲದಿದ್ದರೂ 2021ರಲ್ಲಿ ನಡೆಯಲಿರುವ ಜನಗಣತಿಯ ಮಾಹಿತಿಯನ್ನು ಆಧರಿಸಿ ಈ ಯೋಜನೆಯನ್ನು ಕಾರ್ಯಗತಗೊಳಿಸಿಕೊಳ್ಳಬಹುದು ಎನ್ನುವುದು ಅವರ ಆಶಯ. ದೇಶದ ಎಲ್ಲ ಪ್ರಜೆಗಳಿಗೆ ಒಂದೇ ಮಾದರಿಯ ಗುರುತಿನ ಕಾರ್ಡ್‌ ಮತ್ತು ಅದರೊಳಗೆ ಎಲ್ಲ ಮಾಹಿತಿ ಎನ್ನುವುದು ಕೇಳಲೇನೊ ಹಿತವಾಗಿದೆ. ಆದರೆ ಅದರಲ್ಲಿ ಅಷ್ಟೇ ಅಪಾಯಗಳೂ ಇವೆ. ಈ ಕಾರಣಕ್ಕೆ ಈ ಕಾರ್ಡಿಗೆ ತೀವ್ರ ವಿರೋಧವೂ ಇದೆ.

Advertisement

ನಾಗರಿಕರ ಎಲ್ಲ ಮಾಹಿತಿಗಳನ್ನು ಅಂದರೆ ವೋಟಿಂಗ್‌ ಕಾರ್ಡ್‌, ಪಾಸ್‌ಪೋರ್ಟ್‌, ಆಧಾರ್‌, ಬ್ಯಾಂಕ್‌ ಕಾರ್ಡ್‌ ಇತ್ಯಾದಿ ಕಾರ್ಡ್‌ಗಳ ಮಾಹಿತಿಗಳನ್ನು ಸಂಯೋಜಿಸಿ ಒಂದೇ ಕಾರ್ಡಿನಲ್ಲಿ ತುಂಬಿಸಿಡುವುದೆ ದೇಶಕ್ಕೊಂದೇ ಗುರುತಿನ ಕಾರ್ಡಿನ ಪರಿಕಲ್ಪನೆ. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರ ಅಸ್ತಿತ್ವದಲ್ಲಿದ್ದ 2001ರಲ್ಲಿ ಆಗಿನ ಗೃಹ ಸಚಿವ ಎಲ್‌. ಕೆ. ಆಡ್ವಾಣಿ ನೇತೃತ್ವದ ಸಚಿವರ ತಂಡ ರಾಷ್ಟ್ರೀಯ ಭದ್ರತಾ ವ್ಯವಸ್ಥೆಯನ್ನು ಸುಧಾರಿಸುವ ಸಲುವಾಗಿ ನೀಡಿದ ಸಲಹೆಯಲ್ಲಿ ಎಲ್ಲ ನಾಗರಿಕರಿಗೆ ಒಂದೇ ರೀತಿಯ ಗುರುತಿನ ಕಾರ್ಡ್‌ ನೀಡುವ ಪ್ರಸ್ತಾವ ಇತ್ತು ಹಾಗೂ ಆನಂತರವೂ ಆಡ್ವಾಣಿ ಇದರ ಅಗತ್ಯವನ್ನು ಪ್ರತಿಪಾದಿಸಿದ್ದರು. ಆಗ ಇದರ ಮುಖ್ಯ ಉದ್ದೇಶ ಅಕ್ರಮ ವಲಸಿಗರನ್ನು ಗುರುತಿಸುವುದಾಗಿತ್ತು. ಈ ಉದ್ದೇಶಕ್ಕಾಗಿ ಭಾರತೀಯ ಪ್ರಜೆಗಳಿಗೆ ಮತ್ತು ಅನಿವಾಸಿ ಪ್ರಜೆಗಳಿಗೆ ಬೇರೆ ಬೇರೆ ಬಣ್ಣದ ಕಾರ್ಡ್‌ಗಳನ್ನು ಕೊಡಬೇಕು. ಮೊದಲ ಹಂತದಲ್ಲಿ ಗಡಿಭಾಗದ ರಾಜ್ಯಗಳಲ್ಲಿ ಈ ಯೋಜನೆ ಅನುಷ್ಠಾನವಾಗಬೇಕೆಂದು ಸಚಿವರ ತಂಡ ಶಿಫಾರಸು ಮಾಡಿತ್ತು. ಅನಂತರ ಬಂದ ಸರಕಾರಗಳೂ ಈ ಬಗ್ಗೆ ಚಿಂತನೆ ನಡೆಸಿದ್ದರೂ ಕಾರ್ಯಗತಗೊಂಡಿರಲಿಲ್ಲ. ಆದರೆ ಇದೀಗ ಅಮಿತ್‌ ಶಾ ಅದನ್ನು ಕಾರ್ಯರೂಪಕ್ಕೆ ತರುವ ಸಂಕಲ್ಪ ಹೊಂದಿರುವಂತೆ ಕಾಣಿಸುತ್ತಿದೆ. ಆದರೆ ಇದು ರಾಷ್ಟ್ರೀಯ ಭದ್ರತೆಯಲ್ಲದೆ ಬೇರೆ ಉದ್ದೇಶವನ್ನು ಹೊಂದಿದೆಯೇ ಎನ್ನುವ ವಿಚಾರವೂ ಸ್ಪಷ್ಟವಾಗಬೇಕು. ಈಗಾಗಲೆ ಅಕ್ರಮ ವಲಸಿಗರನ್ನು ಗುರುತಿಸುವ ಎನ್‌ಆರ್‌ಸಿಯನ್ನು ಸರಕಾರ ಬಹಳ ಉತ್ಸಾಹದಿಂದ ಜಾರಿಗೊಳಿಸುತ್ತಿದ್ದು, ರಾಷ್ಟ್ರೀಯ ಗುರುತಿನ ಕಾರ್ಡ್‌ ಇದರ ಒಂದು ಅಂಗವಾಗಿರಲೂಬಹುದು ಎನ್ನುವ ಅನುಮಾನ ಕೆಲವರದ್ದು.

ಈಗ ನಾಗರಿಕರು ಹಲವು ರೀತಿಯ ಕಾರ್ಡ್‌ಗಳನ್ನು ಹೊಂದಿರಬೇಕಾಗುತ್ತದೆ. ಈ ಎಲ್ಲ ಕಾರ್ಡ್‌ಗಳನ್ನು ಒಯ್ಯುವುದು ಮತ್ತು ನಿಭಾಯಿಸುವುದು ಕಿರಿಕಿರಿಯ ಕೆಲಸ ಎನ್ನುವುದು ನಿಜ. ಹೀಗಾಗಿ ಎಲ್ಲ ಮಾಹಿತಿಗಳನ್ನು ಇರುವ ಒಂದೇ ಕಾರ್ಡ್‌ ಇದ್ದರೆ ಸುಲಭ ಎನ್ನುವುದು ನಿಜ. ಆದರೆ ಹೀಗೆ ಸರ್ವ ಮಾಹಿತಿಯೂ ಇರುವ ಕಾರ್ಡಿನ ದತ್ತಾಂಶಗಳು ಸೋರಿಕೆಯಾಗುವುದಿಲ್ಲ ಅಥವಾ ದುರುಪಯೋಗವಾಗುವುದಿಲ್ಲ ಎನ್ನುವುದಕ್ಕೆ ಯಾವ ಖಾತರಿಯಿದೆ. ಸಂವಿಧಾನದತ್ತವಾಗಿರುವ ಮತ್ತು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿರುವ ಖಾಸಗಿತನದ ಹಕ್ಕಿನ ಉಲ್ಲಂಘನೆಗೆ ಈ ಕಾರ್ಡ್‌ ಎಡೆಮಾಡಿಕೊಟ್ಟರೆ ಬಹಳ ಗಂಭೀರವಾದ ಪ್ರಮಾದವಾಗಬಹುದು. ಹೀಗಾಗಿ ಈ ಪರಿಕಲ್ಪನೆ ಅಪಾಯಕಾರಿ ಎನ್ನುತ್ತಿರುವುದು. ಅಲ್ಲದೆ ಆಧಾರ್‌ ಗೊಂದಲವೇ ಇನ್ನೂ ಮುಗಿದಿಲ್ಲ. ಹೀಗಿರುವಾಗ ಇದೇ ಮಾದರಿಯ ಇನ್ನೊಂದು ಸಮಸ್ಯೆಯನ್ನು ಜನರ ಮುಂದಿಡುವ ಅಗತ್ಯವಿದೆಯೇ ಎನ್ನುವ ಪ್ರಶ್ನೆ ಸಮಂಜಸ.

ಹಾಗೆಂದು ರಾಷ್ಟ್ರೀಯ ಗುರುತಿನ ಕಾರ್ಡಿನಿಂದ ಅಪಾಯ ಮಾತ್ರ ಯಾವ ಒಳಿತೂ ಇಲ್ಲ ಎಂದು ಹೇಳಲಾಗದು. ಆದರೆ ಇದೊಂದು ಜಟಿಲ ವಿಷಯವಾಗಿದ್ದು, ಸಮರ್ಪಕವಾಗಿ ಅನುಷ್ಠಾನಿಸಿದರೆ ಮಾತ್ರ ಜನೋಪಯೋಗಿ ಎಂದೆನಿಸಿಕೊಳ್ಳಬಹುದು. ಸಂಸತ್ತಿನಲ್ಲಿ ಮಂಜೂರಾಗಿ ಕಾನೂನಿನ ಅಡೆತಡೆಗಳನ್ನು ದಾಟಿ ಗೊಂದಲಗಳು ಉಂಟಾಗದಂತೆ ಜಾರಿಗೊಳಿಸಲು ಭಾರೀ ದೊಡ್ಡ ಮಟ್ಟದ ಸಿದ್ಧತೆಯ ಅಗತ್ಯವಿದೆ. ಈ ಸಿದ್ಧತೆ ಮಾಡಿಕೊಳ್ಳದೆ ಅವಸರದಲ್ಲಿ ಜಾರಿಮಾಡಲು ಹೊರಟರೆ ಇದು ಇನ್ನೊಂದು ಆಧಾರ್‌ ಆದೀತು.

Advertisement

Udayavani is now on Telegram. Click here to join our channel and stay updated with the latest news.

Next