Advertisement

ಸರಿಯಾದ ಮಾಹಿತಿ, ಜಾಗೃತಿ ಮುಖ್ಯ: ಒತ್ತಡಕ್ಕೆ ಒಳಗಾಗಬೇಡಿ

10:05 AM Mar 18, 2020 | mahesh |

ಕೊರೊನಾ ಕುರಿತು ಸಾಕಷ್ಟು ಅಂತೆಕಂತೆಗಳು ಹರಿದಾಡುತ್ತಿವೆ. ಮುಖ್ಯವಾಹಿನಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಿಂದಾಗಿ ಜನರಲ್ಲಿ ಆತಂಕ, ಮಾನಸಿಕ ಒತ್ತಡ ಸೃಷ್ಟಿಯಾಗಿದೆ. ಕೊರೊನಾ ಹರಡದಂತೆ ತಡೆಯಲು ಸುಲಭ-ಪರಿಣಾಮಕಾರಿ ಮಾರ್ಗಗಳಿದ್ದು, ಅವುಗಳನ್ನು ಪಾಲಿಸುವುದು ಮುಖ್ಯ.

Advertisement

ಅರಿವು ಬೆಳೆಸಿಕೊಳ್ಳಿ, ಸರಿಯಾದ ಮಾಹಿತಿ ಪಡೆಯಿರಿ
– ವಿಶ್ವ ಆರೋಗ್ಯ ಸಂಸ್ಥೆ, ಸ್ಥಳೀಯ ಆರೋಗ್ಯ ಇಲಾಖೆ, ವೈದ್ಯರ ಸಲಹೆಯನ್ನು ಪಾಲಿಸಿ.
– ಕೊರೊನಾ ಹೇಗೆ ಹಬ್ಬುತ್ತದೆ, ತಡೆಗಟ್ಟುವುದು ಹೇಗೆ ಎನ್ನುವ ಕುರಿತು ವೈಜ್ಞಾನಿಕ ವಲಯ ನೀಡುವ ಮಾಹಿತಿಯನ್ನು ಓದಿ.
– ವಾಟ್ಸ್‌ಆಪ್‌, ಫೇಸ್‌ಬುಕ್‌ನಲ್ಲಿ ಬರುವ ಮಾಹಿತಿಯ ಸತ್ಯಾಸತ್ಯತೆಯನ್ನು ಪರೀಕ್ಷಿಸಿ. ಹಿಂದೆಮುಂದೆ ನೋಡದೇ ಫಾರ್ವರ್ಡ್‌ ಮಾಡಬೇಡಿ.
– ವದಂತಿ ಹರಡಬೇಡಿ, ಟೆಲಿವಿಷನ್‌, ಸೋಷಿಯಲ್‌ ಮೀಡಿಯಾ ಬಳಕೆ ಆದಷ್ಟು ಕಡಿಮೆ ಮಾಡಿ.
ವೈರಸ್‌ ಹರಡುವಿಕೆ, ತಡೆಗಟ್ಟುವಿಕೆಯ ಬಗ್ಗೆ ಅಧಿಕೃತ ಮೂಲಗಳಿಂದ ಮಾಹಿತಿ ಪಡೆಯಿರಿ.

ಮಾಸ್ಕ್ ಯಾವಾಗ, ಹೇಗೆ ಬಳಸಬೇಕು?
ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ. ರೋಗಪೀಡಿತರ ಆರೈಕೆ ಮಾಡುವವರು, ರೋಗಿಗಳು, ಆರೋಗ್ಯ ವಲಯದಲ್ಲಿರುವವರು ಮಾಸ್ಕ್ ಧರಿಸಬೇಕು. ನಿಮಗೆ ಕೆಮ್ಮು-ಶೀತವಿದ್ದರೆ ಬೇರೆಯವರಿಗೆ ಹರಡದಂತೆ ತಡೆಯಲು ಮಾಸ್ಕ್ ಧರಿಸಿ

ಎಲ್ಲರೂ ಮಾಸ್ಕ್ ಖರೀದಿಸಿದರೆ ಮಾರುಕಟ್ಟೆಯಲ್ಲಿ ಅಭಾವ ಸೃಷ್ಟಿಯಾಗುವ ಅಪಾಯವಿರುತ್ತದೆ.

ಮಾಸ್ಕ್ ಧರಿಸುವುದಕ್ಕೂ ಒಂದು ಕ್ರಮವಿದ್ದು, ತಪ್ಪಾಗಿ ಧರಿಸಿದರೆ ಸಮಸ್ಯೆಯೇ ಹೆಚ್ಚು. ಮಾಸ್ಕ್ ಧರಿಸಿರುವವರು ತಮ್ಮ ಮುಖವನ್ನು ಮುಟ್ಟಿಕೊಳ್ಳುವ ಸಾಧ್ಯತೆ
ಅಧಿಕವಾದ ಕಾರಣ, ಅವರು ಆಗಾಗ ತಮ್ಮ ಕೈಗಳನ್ನು ತೊಳೆದುಕೊಳ್ಳುತ್ತಿರಬೇಕು.

Advertisement

ಬಳಸಿದ ನಂತರ, ಮಾಸ್ಕ್ ಅನ್ನು ಸರಿಯಾಗಿ ತೆಗೆದು, ಯಾರ ಸಂಪರ್ಕಕ್ಕೂ ಬಾರದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಮಾಸ್ಕ್ ಹೇಗೆ ಧರಿಸಬೇಕು, ಅದನ್ನು ಹೇಗೆ ಧರಿಸಬಾರದು ಎನ್ನುವುದನ್ನು ಪರಿಣತರಿಂದ ತಿಳಿದುಕೊಳ್ಳಲು ನಿಮ್ಮ ಮೊಬೈಲ್‌ನಿಂದ ಈ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ.

ಮಾಂಸಾಹಾರ ಸೇವನೆ: ಭಯ ಬೇಡ
ಮಾಂಸಾಹಾರ ಸೇವನೆಯಿಂದ ಕೊರೊನಾ ಬರುತ್ತದೆ ಎನ್ನುವುದು ಸುಳ್ಳು. ಕೊರೊನಾ ಗ್ರಸ್ತ ಪ್ರದೇಶಗಳಲ್ಲೂ ಮಾಂಸಾಹಾರವನ್ನು ಸುರಕ್ಷಿತವಾಗಿ ಸೇವಿಸಬಹುದು. ಆದರೆ, ಮಾಂಸ ಪದಾರ್ಥವನ್ನು ಸರಿಯಾಗಿ ಬೇಯಿಸಬೇಕು. ಇನ್ನು, ಕೋಳಿಯಿಂದ ಕೊರೊನಾ ಹರಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.

ಆ್ಯಂಟಿಬಯಾಟಿಕ್ಸ್‌ ಸೇವಿಸಿದರೆ ಕೊರೊನಾ ವೈರಸ್‌ ದೂರವಿರುತ್ತದೆಯೇ?
ಖಂಡಿತ ಇಲ್ಲ. ಆ್ಯಂಟಿಬಯಾಟಿಕ್ಸ್‌ಗಳು ಕೇವಲ ಬ್ಯಾಕ್ಟೀರಿಯಾಗಳ ವಿರುದ್ಧ ಕೆಲಸ ಮಾಡುತ್ತವಷ್ಟೇ ಹೊರತು, ವೈರಸ್‌ಗಳ ಮೇಲಲ್ಲ.
ಆದಾಗ್ಯೂ, ಕೊರೊನಾ ಪೀಡಿತ ವ್ಯಕ್ತಿಯು ಬ್ಯಾಕ್ಟೀರಿಯಾ ಸೋಂಕನ್ನೂ ಹೊಂದಿದ್ದರೆ ಚಿಕಿತ್ಸೆಯ ಸಮಯದಲ್ಲಿ ವೈದ್ಯರು ಆತನಿಗೆ ಆ್ಯಂಟಿಬಯಾಟಿಕ್ಸ್‌ ಕೊಡುತ್ತಾರೆ. ಹೀಗಾಗಿ, ಕೊರೊನಾಕ್ಕೆ ಆ್ಯಂಟಿಬಯಾಟಿಕ್ಸ್‌ ಪರಿಹಾರ ಎಂದು ನಂಬಿ, ಅವುಗಳ ಮೊರೆ ಹೋಗದಿರಿ. ಸತ್ಯವೇನೆಂದರೆ, ಸದ್ಯಕ್ಕೆ ಈ ವೈರಸ್‌ ವಿರುದ್ಧ ನಿರ್ದಿಷ್ಟ ಲಸಿಕೆ ಇನ್ನೂ ಅಭಿವೃದ್ಧಿಯಾಗಿಲ್ಲ. ಹೀಗಾಗಿ, ಯಾರಧ್ದೋ ಮಾತು ಕೇಳಿಯೋ, ಯಾವುದೋ ವಿಡಿಯೋ ನೋಡಿಯೋ ಯಾವ್ಯಾವುದೋ ಔಷಧಗಳ ಮೊರೆ ಹೋಗದಿರಿ.

ಸೊಳ್ಳೆಗಳಿಂದ ಹರಡಬಲ್ಲದೇ ಕೊರೊನಾ ವೈರಸ್‌ ಸೋಂಕು?
ಇಲ್ಲ. ಕೊರೊನಾ ವೈರಸ್‌ ಸೊಳ್ಳೆಯ ಮೂಲಕ ಹರಡುವುದಿಲ್ಲ. ಆದರೂ, ಹೀಗೊಂದು ಸಂದೇಶ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೊರೊನಾ ಏನಿದ್ದರೂ ರೋಗಪೀಡಿತ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹರಡುತ್ತದಷ್ಟೆ. ಸೊಳ್ಳೆಗಳು ಈ ವೈರಸ್‌ನ ವಾಹಕಗಳಲ್ಲ. ಆದರೂ, ಎಚ್ಚರಿಕೆ ವಹಿಸುವುದು ಸೂಕ್ತ. ಏಕೆಂದರೆ ಸೊಳ್ಳೆಗಳು, ನೊಣಗಳು ಇತರೆ ಹಲವು ರೋಗಕಾರಕ ಸೂಕ್ಷ್ಮಾಣುಜೀವಿಗಳ ವಾಹಕಗಳಾದ್ದರಿಂದ, ಅವುಗಳಿಂದ ಮುಕ್ತಿಪಡೆಯುವುದೇ ಉತ್ತಮ ಮಾರ್ಗ. ನಿಮ್ಮ ಮನೆಯ ಸುತ್ತಲೂ ನೀರು ಜಮೆಯಾಗದಂತೆ ನೋಡಿಕೊಳ್ಳಿ. ಟಯರುಗಳಲ್ಲಿ, ಎಸೆದ ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ನೀರು ನಿಂತಿದ್ದರೆ ಅವು ಸೊಳ್ಳೆಗಳ ಆಗರವಾಗುತ್ತವೆ. ಮನೆಯ ಹತ್ತಿರ ಪೊದೆಗಳಿದ್ದರೆ ಸ್ವತ್ಛಮಾಡಿ.

ವಾಸ್ತವ ಕೊರೊನಾ ಬಿಸಿಲು ಮತ್ತು ಶೀತಲ ವಾತಾವರಣದಲ್ಲೂ ಹರಡಬಲ್ಲದು.
ಇಲ್ಲಿಯವರೆಗಿನ ಪ್ರಕರಣಗಳನ್ನು ಗಮನಿಸಿದಾಗ, ಕೊರೊನಾ ವೈರಸ್‌ ಎಲ್ಲಾ ರೀತಿಯ ವಾತಾವರಣದಲ್ಲೂ ಹರಡಬಲ್ಲದು ಎಂದು ತಿಳಿದುಬಂದಿದೆ. ಸಿಂಗಾಪುರದಂಥ ಬಿಸಿಲು ಪ್ರದೇಶದಿಂದ ಹಿಡಿದು ಸ್ಪೇನ್‌ನಂಥ ಚಳಿ ಇರುವ ರಾಷ್ಟ್ರಗಳಲ್ಲೂ ಕೊರೊನಾ ಹಬ್ಬುತ್ತಿದೆ. ಹೀಗಾಗಿ, ಬಿಸಿಲು ವಾತಾವರಣದಲ್ಲಿ ಅದು ಹರಡುವುದಿಲ್ಲ, ಚಳಿಯಲ್ಲಿ ಬೆಳೆಯುವುದಿಲ್ಲ ಎಂಬ ಅಸಡ್ಡೆ ಬೇಡ. ಕೊರೊನಾ ಸೋಂಕಿತರು ನೆಗಡಿಯಂಥ ಸಮಸ್ಯೆಗಳಿಂದ ಬಳಲುತ್ತಾರೆ. ಸಾಮಾನ್ಯ ನೆಗಡಿಯು ಬೇಸಿಗೆ ಸಮಯದಲ್ಲಿ ತಗ್ಗುತ್ತದಾದ್ದರಿಂದ, ಕೊರೊನಾ ಕೂಡ ಬೇಸಿಗೆಯಲ್ಲಿ ನಿಂತುಹೋಗುತ್ತದೆ ಎಂಬ ತಪ್ಪು ಕಲ್ಪನೆಯನ್ನು ಹರಡಲಾಗುತ್ತಿದೆ. ನೀವು ಎಲ್ಲೇ ಇದ್ದರೂ ತಪ್ಪದೇ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ.

ರಬ್ಬರ್‌ ಗ್ಲೌವ್ಸ್‌ ಹಾಕಿಕೊಂಡರೆ ಕೊರೊನಾ ಸೋಂಕಿನಿಂದ ಪಾರಾಗಬಹುದೇ?
ಇಲ್ಲ. ರಬ್ಬರ್‌ ಗ್ಲೌವ್ಸ್‌ ಧರಿಸುವುದಕ್ಕಿಂತ ಹೆಚ್ಚಾಗಿ ಬರಿಗೈಯನ್ನು ಆಗಾಗ ಸೋಪಿನಿಂದ ತೊಳೆಯುವುದೇ ಸರಿಯಾದ ಮಾರ್ಗ. ರಬ್ಬರ್‌ ಕೈಗವಸುಗಳ ಮೇಲೂ ರೋಗಾಣು ಕೂರಬಹುದು.  ಆಗ ನೀವು ನಿಮ್ಮ ಮುಖವನ್ನು ಸ್ಪರ್ಶಿಸಿದರೆ, ವೈರಸ್‌ ನಿಮ್ಮ ದೇಹ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ, ರಬ್ಬರ್‌
ಕೈಗವಸು ಧರಿಸುವುದರಿಂದ ಲಾಭಕ್ಕಿಂತ ಅಪಾಯವೇ ಅಧಿಕ. ಕೈಗಳನ್ನು ಸೋಪಿನಿಂದ ಸ್ವತ್ಛವಾಗಿ ತೊಳೆಯುವುದು ಅತ್ಯಂತ ಉತ್ತಮ ಮಾರ್ಗ ಎನ್ನುವುದು ನೆನಪಿರಲಿ. ಈ ವಿಷಯದಲ್ಲಿ ನಿಷ್ಕಾಳಜಿ ಬೇಡ. ಕೈಗಳನ್ನು ಸ್ವತ್ಛವಾಗಿ ಹೇಗೆ ತೊಳೆಯಬೇಕು ಎನ್ನುವುದನ್ನು ತಿಳಿಯಲು ನಿಮ್ಮ ಮೊಬೈಲ್‌ನಿಂದ ಈ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ.

ಮಾಂಸಾಹಾರ ಸೇವನೆ: ಭಯ ಬೇಡ
ಮಾಂಸಾಹಾರ ಸೇವನೆಯಿಂದ ಕೊರೊನಾ ಬರುತ್ತದೆ ಎನ್ನುವುದು ಸುಳ್ಳು. ಕೊರೊನಾ ಗ್ರಸ್ತ ಪ್ರದೇಶಗಳಲ್ಲೂ ಮಾಂಸಾಹಾರವನ್ನು ಸುರಕ್ಷಿತವಾಗಿ ಸೇವಿಸಬಹುದು. ಆದರೆ, ಮಾಂಸ ಪದಾರ್ಥವನ್ನು ಸರಿಯಾಗಿ ಬೇಯಿಸಬೇಕು. ಇನ್ನು, ಕೋಳಿಯಿಂದ ಕೊರೊನಾ ಹರಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.

ಮಾನಸಿಕ ಒತ್ತಡದ ನಿವಾರಣೆ
ಈ ರೀತಿಯ ಸಮಯದಲ್ಲಿ ಭಯ, ಒತ್ತಡ, ಗೊಂದಲ, ಖನ್ನತೆ ಕಾಡುವುದು ಸಹಜವೇ. ಹೀಗಾಗಿ, ಕುಟುಂಬ ಸದಸ್ಯರು, ಗೆಳೆಯರೊಂದಿಗೆ ಮಾತನಾಡುವುದರಿಂದ ಒತ್ತಡ ಕಡಿಮೆ ಆಗುತ್ತದೆ.

ನಿಮ್ಮ ಕಚೇರಿಯು ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದ್ದರೆ(ವರ್ಕ್‌ ಫ್ರಂ ಹೋಂ), ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ ಸೇವಿಸಿ, ಸರಿಯಾಗಿ ನಿದ್ದೆ ಮಾಡಿ, ಪುಸ್ತಕಗಳನ್ನು ಓದಿ.

ಆತಂಕ, ಒತ್ತಡ ನಿವಾರಿಸಿಕೊಳ್ಳಲು ಸಿಗರೇಟ್‌, ಮದ್ಯದ ಮೊರೆ ಹೋಗಬೇಡಿ. ಮದ್ಯ, ಸಿಗರೇಟ್‌ ನಿಮಗೆ ತಾತ್ಕಾಲಿಕ ಆರಾಮ ನೀಡಬಹುದಷ್ಟೇ ಹೊರತು, ಇವು ನಿಮ್ಮ ರೋಗನಿರೋಧಕ ಶಕ್ತಿಗೆ ಹೊಡೆತ ಕೊಡುತ್ತವೆ.

ಇದಕ್ಕೂ ಮೀರಿ ನಿಮಗೆ ಒತ್ತಡ ನಿವಾರಣೆ ಆಗದಿದ್ದರೆ, ವೈದ್ಯರ ಸಲಹೆ ಪಡೆಯಿರಿ. ಗೂಗಲ್‌ನಲ್ಲಿ ಸರ್ಚ್‌ ಮಾಡುತ್ತಾ ಕುಳಿತರೆ ಗೊಂದಲ ಹೆಚ್ಚಾಗುತ್ತದೆ.

ಬ್ರೇಕಿಂಗ್‌ ನ್ಯೂಸ್‌ಗಳು ನಿಮ್ಮಲ್ಲಿ ಆತಂಕ ಹೆಚ್ಚಿಸುತ್ತಿದ್ದರೆ, ಟಿ.ವಿ. ಆಫ್ ಮಾಡಿ. ಕ್ಷಣ ಕ್ಷಣದ ಸುದ್ದಿಯನ್ನು ತಿಳಿದುಕೊಳ್ಳುವುದರಿಂದ ಏನೂ ಬದಲಾಗುವುದಿಲ್ಲ. ನೀವು, ನಿಮ್ಮ ಕುಟುಂಬದವರು ಟಿ.ವಿ. ವೀಕ್ಷಣೆ ತಗ್ಗಿಸಿ. ಹಾಡು ಕೇಳಿ, ಸಿನೆಮಾ ನೋಡಿ.

ಬಿಡುವಿನ ವೇಳೆಯಲ್ಲಿ ನಿಮ್ಮ ಗಮನವನ್ನು ನಿಮ್ಮ ಕೌಶಲ್ಯಾಭಿವೃದ್ಧಿಗೆ, ಹವ್ಯಾಸಗಳಿಗೆ ಮೀಸಲಿಡಿ. ಚಿತ್ರ ಬಿಡಿಸಿ, ಪುಸ್ತಕಗಳನ್ನು ಓದಿ. ಸಾಮಾಜಿಕ ಮಾಧ್ಯಮಗಳ ವ್ಯಸನದಿಂದ ಮುಕ್ತರಾಗಲು ಈ ಸಮಯವನ್ನು ಬಳಸಿಕೊಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next