ಉಡುಪಿ: ಮಕ್ಕಳಲ್ಲಿ ಅತಿಸಾರ ಬೇಧಿ ಎನ್ನುವುದು ಹೇಳುವುದಕ್ಕೆ ಸಾಮಾನ್ಯವಾಗಿದ್ದರೂ ಸರಿಯಾದ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಅಪಾಯದ ಮಟ್ಟ ತಲುಪುವ ಸಾಧ್ಯತೆ ಇದೆ. ಆದ್ದರಿಂದ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದು ಎಲ್ಲ ತಾಯಂದರ ಕರ್ತವ್ಯವಾಗಿದೆ ಎಂದು ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ತಿಳಿಸಿದ್ದಾರೆ.
ಸೋಮವಾರ ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಸಂಯುಕ್ತ ಆಶ್ರಯದಲ್ಲಿ ಉಡುಪಿ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ತೀವ್ರತರ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಅತಿಸಾರ ಬೇಧಿ ಕಾಣಿಸಿಕೊಂಡಾಗ ಆರೋಗ್ಯ ಸ್ಥಿರವಾಗಿ ಕಾಪಾಡಿಕೊಳ್ಳಲು ಓಆರ್‌ಎಸ್ ಜೊತೆಗೆ ಸರಿಯಾದ ಪ್ರಮಾಣದಲ್ಲಿ ಆಹಾರ ಸೇವನೆ ಅಗತ್ಯವಾಗಿದೆ. ಆರೋಗ್ಯಯುತ ದೇಶದ ನಿಮಾರ್ಣಕ್ಕೆ ಇಂತಹ ಜನ ಜಾಗೃತಿ ಕಾರ್ಯಕ್ರಮಗಳು ಅಗತ್ಯವಾಗಿದೆ. ಮಕ್ಕಳು ಆರೋಗ್ಯವಂತರಾಗಿ ಬೆಳೆದು ದೇಶದ ಆಧಾರ ಸ್ತಂಭವಾಗಬೇಕು. ಮಕ್ಕಳು ಉತ್ತಮ ಆರೋಗ್ಯವಂತರಾಗಿದ್ದರೆ ಭವಿಷ್ಯದಲ್ಲಿ ಆರೋಗ್ಯಯುತವಾದ ದೇಶ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ತಾ.ಪಂ.ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಮಾತನಾಡಿ, ಆರೋಗ್ಯವೇ ಭಾಗ್ಯವಾಗಿದ್ದು ಒಬ್ಬ ವ್ಯಕ್ತಿ ಆರೋಗ್ಯವಾಗಿದ್ದರೆ ಮಾತ್ರ ಯಾವುದೇ ಕೆಲಸ ಮಾಡಲು ಶಕ್ತನಾಗಿರುತ್ತಾನೆ. ವೈದ್ಯೋ ನಾರಾಯಣ ಹರಿಃ ಎನ್ನುವ ಮಾತಿನಂತೆ ವೈದ್ಯರು ಆರೋಗ್ಯ ಕುರಿತು ನೀಡುವ ಮಾಹಿತಿ ಸರಿಯಾಗಿ ಪಾಲಿಸಿದ್ದಲ್ಲಿ ಉತ್ತಮ ಆರೋಗ್ಯಯುತ ಜೀವನ ತಮ್ಮದಾಗಿಸಲು ಸಾಧ್ಯವಾಗುತ್ತದೆ ಎಂದರು.
ಮಕ್ಕಳ ತಜ್ಞ ಡಾ| ವೇಣು ಗೋಪಾಲ ಓಆರ್‌ಎಸ್ ತಯಾರಿಕಾ ವಿಧಾನದ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿ, ಅತಿಸಾರ ಬೇಧಿಯಿಂದ ಬಳಲುತ್ತಿರುವ ಮಕ್ಕಳಿಗೆ ಓಆರ್‌ಎಸ್ ಜೀವರಕ್ಷಕವಾಗಿದ್ದು ಶೇ. 99ರಷ್ಟು ಜೀವ ಹಾನಿಯನ್ನು ತಪ್ಪಿಸುತ್ತದೆ ಎಂದರು.
ಉಡುಪಿ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಮೆಮೋರೊಯಲ್ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ನಿರ್ದೇಶಕ ಪ್ರಶಾಂತ್ ಮಲ್ಯ, ಆಸ್ಪತ್ರೆಯ ವೈದ್ಯಕೀಯ ಮುಖ್ಯಾಧಿಕಾರಿ ಡಾ| ಶೀಖಾ ಗರ್ಗ್, ತಾ. ಪಂ. ಉಪಾಧ್ಯಕ್ಷ ರಾಜೇಂದ್ರ ಪಿ., ಸಮಗ್ರ ಶಿಶು ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ವೀಣಾ ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಇಲಾಖೆಯ ಪ್ರಭಾರ ಅಧಿಕಾರಿ ಡಾ| ಎಂ.ಜಿ.ರಾಮ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನರ್ಸ್ ಎಜುಕೇಟರ್ ರೀನಾ ಕಾರ್ಯಕ್ರಮ ನಿರೂಪಿಸಿದರು, ರೋಟರಿ ಅಧ್ಯಕ್ಷ ಜನಾರ್ದನ ಭಟ್ ವಂದಿಸಿದರು.