Advertisement

ಜಾತಿ ವ್ಯವಸ್ಥೆ ಜೀವಂತವಾಗಿರುವವರೆಗೂ ಮೀಸಲು ಅಗತ್ಯ; ಶ್ರೀ ಪ್ರಸನ್ನಾನಂದ ಸ್ವಾಮೀಜಿ

06:09 PM Dec 15, 2022 | Team Udayavani |

ಹೊಸದುರ್ಗ: ರಾಜಕೀಯ ಪಕ್ಷಗಳು ಚುನಾವಣೆ ಬಂದಾಗ ಮಾತ್ರ ಎಸ್‌ಸಿ-ಎಸ್‌ಟಿ ಸಮುದಾಯಗಳನ್ನು ಬಳಸಿಕೊಳ್ಳದೆ ಅವರ ಹಿತರಕ್ಷಣೆ ಮಾಡಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ರಾಧಾಕೃಷ್ಣ ಕಲ್ಯಾಣಮಂಟಪದಲ್ಲಿ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆ ಹಾಗೂ ಜನಜಾಗೃತಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಭಾರತ ದೇಶ ಶ್ರೇಣಿಕೃತ ಜಾತಿ ವ್ಯವಸ್ಥೆಯಿಂದ ಕೂಡಿದೆ. ಹುಟ್ಟಿದ ಜಾತಿಯ ಕಾರಣಕ್ಕಾಗಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಕೀಳಾಗಿ ನೋಡುವ ಪದ್ಧತಿ ಜೀವಂತವಾಗಿದೆ.

ಆದ್ದರಿಂದ ದೇಶದಲ್ಲಿ ಎಲ್ಲಿಯವರೆಗೂ ಜಾತಿ ವ್ಯವಸ್ಥೆ ಇರುತ್ತದೆಯೋ ಅಲ್ಲಿಯವರೆಗೂ ಶೋಷಿತ ಸಮುದಾಯಗಳ ಜನರಿಗೆ ಮೀಸಲಾತಿ ಅಗತ್ಯ ಎಂದು ಪ್ರತಿಪಾದಿಸಿದರು. ಭಾರತದಲ್ಲಿ ಧರ್ಮ, ಜಾತಿ ಮತ್ತು ಉಪಜಾತಿಗಳ ವ್ಯವಸ್ಥೆ ಇದ್ದು, ಇಂದಿಗೂ ಕೆಲವು ಸಮುದಾಯದವರನ್ನು ಗ್ರಾಮಗಳಿಂದ ಹೊರಗಿಟ್ಟಿದ್ದಾರೆ. ಡಾ| ಬಿ.ಆರ್‌. ಅಂಬೇಡ್ಕರ್‌ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ನೀಡದೆ ಇದ್ದಿದ್ದರೆ ಈ ಜನರ ಜೀವನ ಡೋಲಾಯಮಾನವಾಗಿರುತ್ತಿತ್ತು ಎಂದರು.

ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಫೆಬ್ರವರಿ 8 ಮತ್ತು 9ರಂದು 5ನೇ ವರ್ಷದ ಶ್ರೀ ವಾಲ್ಮೀಕಿ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಬಾರಿ ಜಾತ್ರೆಯಲ್ಲಿ 88 ಅಡಿ ಎತ್ತರದ ರಥ ವಿಶೇಷವಾಗಿದೆ. ಎಸ್‌ಸಿ-ಎಸ್‌ಟಿ ಸಮುದಾಯದ ಎಲ್ಲಾ ಬಂಧುಗಳು ಕುಟುಂಬ ಸಮೇತರಾಗಿ ಜಾತ್ರೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಹರ್ತಿಕೋಟೆ ವೀರೇಂದ್ರಸಿಂಹ ಮಾತನಾಡಿ, ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರು ಶೋಷಿತ ಎಸ್‌ಸಿ-ಎಸ್‌ಟಿ ಸಮುದಾಯಗಳ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕೆಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ ನಲ್ಲಿ 267 ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿದರು.

Advertisement

ಶ್ರೀಗಳ ಹಕ್ಕೊತ್ತಾಯಕ್ಕೆ ಮಣಿದ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಮಾಡಿದೆ. ನವೆಂಬರ್‌ ತಿಂಗಳಿನಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಜಾರಿಯಲ್ಲಿದೆ ಎಂದು ತಿಳಿಸಿದರು. ನಾಯಕ ಸಮಾಜದ ಅಧ್ಯಕ್ಷ ಶಿವಣ್ಣ, ಮಾಜಿ ಅಧ್ಯಕ್ಷ ತುಂಬಿನಕೆರೆ ಬಸವರಾಜ್‌, ಗುತ್ತಿಕಟ್ಟೆ ಕೆಂಚಪ್ಪ, ರಂಗನಾಥ್‌ ಚನ್ನಸಮುದ್ರ, ಆದಿಜಾಂಬವ ಸಮಾಜದ ಅಧ್ಯಕ್ಷ ಎಂ. ಲಕ್ಷ್ಮಣ್‌, ಪ್ರಧಾನ ಕಾರ್ಯದರ್ಶಿ ಹೆಗ್ಗೆರೆ ಶಂಕ್ರಪ್ಪ, ಮುಖಂಡರಾದ ಮಾವಿನಕಟ್ಟೆ ಪ್ರಕಾಶ್‌,ಅವಳಪ್ಪ, ಜಯಣ್ಣ, ಮಳಲಿ ರವಿತೇಜ, ಹೊನ್ನೇನಹಳ್ಳಿ ರಂಗಪ್ಪ, ತಿಪ್ಪೇಸ್ವಾಮಿ, ಶಿವರಾಜ್‌, ವಿಜಯಕುಮಾರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next