Advertisement

ಮಹಿಳಾ ಉದ್ಯಮಿಗಳಿಗಾಗಿ “ಪ್ರೋತ್ಸಾಹ ಕೇಂದ್ರ’

11:48 AM Sep 15, 2017 | Team Udayavani |

ಬೆಂಗಳೂರು: ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅಗತ್ಯ ಮಾಹಿತಿ ಜತೆಗೆ ಪ್ರೋತ್ಸಾಹ ನೀಡಲು ವಲಯವಾರು ಕೇಂದ್ರಗಳನ್ನು ಆರಂಭಿಸುವ ಬಗ್ಗೆ ಚಿಂತಿಸಲಾಗುವುದು ಎಂದು ಸಚಿವ ಸಂತೋಷ್‌ ಲಾಡ್‌ ಹೇಳಿದರು.

Advertisement

ಎಮರ್ಜ್‌ ಸಂಸ್ಥೆಯು ನಗರದ ಎಫ್ಕೆಸಿಸಿಐ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ “ಘೋರ್ಜಿಂಗ್‌ ಲಿಂಕ್ಸ್‌, ಲೆವರೇಜಿಂಗ್‌ ನೆಟ್‌ವರ್ಕ್ಸ್ ರೀಚಿಂಗ್‌ ಔಟ್‌-2017′ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಅತಿ ಸಣ್ಣ, ಸಣ್ಣ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರೂ ಸಂಘಟಿತರಾಗಿಲ್ಲ. ಇನ್ನೊಂದೆಡೆ ಅವರು ಉತ್ಪಾದಿಸುವ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಬಹಳ ಮುಖ್ಯ.

ಗ್ರಾಮೀಣ ಪ್ರದೇಶದಲ್ಲೇ ಉದ್ಯೋಗಾವಕಾಶ ಕಲ್ಪಿಸುವುದು ದೇಶಕ್ಕೆ ಅತ್ಯುನ್ನತ ಕೊಡುಗೆ ನೀಡಿದಂತೆ’ ಎಂದು ಹೇಳಿದರು. ಅತಿ ಹೆಚ್ಚು ಮಹಿಳಾ ಉದ್ಯಮಿಗಳಿರುವ ರಾಜ್ಯಗಳ ಪೈಕಿ ಕರ್ನಾಟಕ ದೇಶದಲ್ಲೇ ಮೂರನೇ ಸ್ಥಾನದಲ್ಲಿದ್ದರೆ, ಅತಿ ಹೆಚ್ಚು ಮಹಿಳಾ ಉದ್ಯಮಿಗಳಿರುವ ನಗರಗಳ ಪೈಕಿ ಬೆಂಗಳೂರು ದೇಶದಲ್ಲೇ ಪ್ರಥಮ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ. ವ್ಯಾಪಾರ- ಉದ್ಯಮ ನಡೆಸುವುದು ಸುಲಭವಲ್ಲ.

ಸೋಲುಗಳಿಂದ ವಿಚಲಿತರಾಗದೆ ಹೊಸ ವಿಚಾರ ಕಲಿತು ಕಾರ್ಯಪ್ರವೃತ್ತರಾದರೆ ಯಶಸ್ಸು ಗಳಿಸಬಹುದಾಗಿದೆ. ಮಹಿಳಾ ಉದ್ಯಮಿಗಳೆಲ್ಲಾ ಸಂಘಟಿತರಾಗಿ ಸಹಕಾರ ಸಂಘವನ್ನು ರಚಿಸಿಕೊಂಡರೆ ಇನ್ನಷ್ಟು ಯಶಸ್ವಿಯಾಗಿ ಉದ್ಯಮ ನಡೆಸಲು ಹಾಗೂ ಇತರೆ ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗಬಹುದು. ಈ ನಿಟ್ಟಿನಲ್ಲಿ ಸಂಸ್ಥೆ ಚಿಂತಿಸಬೇಕು’ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ಅವರು ಮಾತನಾಡಿ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮಹಿಳೆಯರಿಗೆ ರಾಜ್ಯ ಸರ್ಕಾರ ಸಾಕಷ್ಟು ವಿನಾಯ್ತಿ, ಉತ್ತೇಜನಗಳನ್ನು ಪ್ರಕಟಿಸಿದ್ದರೂ ಬಳಸಿಕೊಂಡವರ ಸಂಖ್ಯೆ ಕಡಿಮೆ. ಹಾಗಾಗಿ ಮಹಿಳಾ ಉದ್ಯಮಿಗಳನ್ನು ಒಟ್ಟುಗೂಡಿಸಿ “ಉಬಂಟು’ ವೆಬ್‌ಸೈಟ್‌ನಲ್ಲಿ ಪರಸ್ಪರ ಮಾಹಿತಿ ವಿನಿಮಯ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಹೇಳಿದರು.

Advertisement

ಬೆಂಗಳೂರು ಮಾತ್ರವಲ್ಲದೇ ದ್ವಿತೀಯ ಹಂತದ ನಗರಗಳಲ್ಲೂ ಮಹಿಳೆಯರು ಉದ್ಯಮಶೀಲರಾಗುತ್ತಿರುವುದು ಉತ್ತಮ ಬೆಳವಣಿಗೆ. ಮಹಿಳಾ ಉದ್ಯಮಿಗಳಿಗೆ ಅಗತ್ಯ ಪ್ರೋತ್ಸಾಹ ನೀಡಲು ಮಹಿಳಾ ಉದ್ಯೋಗ ವಾಹಿನಿ ಸೇವೆ ಆರಂಭಿಸಲಾಗಿದ್ದು, ಆ ಮೂಲಕವೂ ಮಹಿಳೆಯರು ಮಾಹಿತಿ ಪಡೆದು ಉದ್ಯಮಶೀಲರಾಗಬೇಕು’ ಎಂದು ಕರೆ ನೀಡಿದರು. 

ಎಮರ್ಜ್‌ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷೆ ಉಮಾರೆಡ್ಡಿ, “ಮಹಿಳಾ ಉದ್ಯಮಿಗಳಿಗೆ ಅಗತ್ಯ ಮಾರ್ಗದರ್ಶನ, ನೆರವು ಪಡೆಯಲು ಅನುಕೂಲವಾಗುವಂತೆ ಕೆಎಸ್‌ಎಸ್‌ಐಡಿಸಿ ಸಹಯೋಗದಲ್ಲಿ ತರಬೇತಿ ಕೇಂದ್ರ ಹಾಗೂ ಸಂಪನ್ಮೂಲ ಕೇಂದ್ರ, ತಾಂತ್ರಿಕ ಕೇಂದ್ರಗಳನ್ನು ತೆರೆಯುವ ಚಿಂತನೆ ಇದೆ ಎಂದು ಹೇಳಿದರು. ಎಫ್ಕೆಸಿಸಿಐ ಅಧ್ಯಕ್ಷ ಕೆ.ರವಿ, ಇಂಟೆಲ್‌ ಸಂಸ್ಥೆಯ ಹಿರಿಯ ಮ್ಯಾನೇಜರ್‌ ಗೌರಿಶಂಕರ್‌, ಎಮರ್ಜ್‌ ಅಧ್ಯಕ್ಷೆ ಆರ್‌.ರಾಜಲಕ್ಷ್ಮೀ, ಕಾರ್ಯದರ್ಶಿ ಡಾ.ಸುಮಿತಾ ನಾಯಕ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next