Advertisement

ಬಡ್ತಿ ಮೀಸಲು ವಿವಾದ: ಕುತೂಹಲ ಕೆರಳಿಸಿದ ತೀರ್ಪು

06:50 AM Sep 27, 2018 | |

ಬೆಂಗಳೂರು: ಬಡ್ತಿ ಮೀಸಲು ಕುರಿತಂತೆ ಸುಪ್ರೀಂ ಕೋರ್ಟ್‌ ಬುಧವಾರ ನೀಡಿರುವ ತೀರ್ಪು ಇದೀಗ ಬಡ್ತಿ ಮೀಸಲು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ರೂಪಿಸಿರುವ ಹೊಸ ಕಾಯ್ದೆ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬ ಅಂಶ ಕುತೂಹಲ ಕೆರಳಿಸಿದೆ.

Advertisement

ಇದಕ್ಕೆ ಕಾರಣ ಬಡ್ತಿ ಮೀಸಲಿಗೆ ಸಂಬಂಧಿಸಿದಂತೆ ಎಂ.ನಾಗರಾಜ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ “ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿಂದುಳಿದಿರುವಿಕೆ ಬಗ್ಗೆ ರಾಜ್ಯವು ಪ್ರಾಮಾಣೀಕೃತ ದತ್ತಾಂಶ ತೋರಿಸಬೇಕು’ ಎಂಬ ಅಂಶ ರದ್ದುಗೊಳಿಸಿರುವುದು.
ಎಂ.ನಾಗರಾಜ್‌ ಪ್ರಕರಣದಲ್ಲಿ ಈ ಹಿಂದೆ ನೀಡಿದ್ದ ತೀರ್ಪನ್ನು ಏಳು ನ್ಯಾಯಮೂರ್ತಿಗಳ ನ್ಯಾಯಪೀಠಕ್ಕೆ ನೀಡುವ ಅಗತ್ಯವಿಲ್ಲ ಎಂದು ಹೇಳಿ ಹಿಂದಿನ ತೀರ್ಪನ್ನು ಎತ್ತಿಹಿಡಿದಿದೆಯಾದರೂ ಈ ಒಂದು ಅಂಶವನ್ನು ರದ್ದುಗೊಳಿಸಿರುವುದರಿಂದ ತೀರ್ಪಿನ ಕುರಿತು ಕಾನೂನು ತಜ್ಞರು ನಾನಾ ವಿಶ್ಲೇಷಣೆ ಮಾಡುತ್ತಿದ್ದಾರೆ.

ಮೇಲ್ನೋಟಕ್ಕೆ ಸುಪ್ರೀಂ ಕೋರ್ಟ್‌ ಬುಧವಾರ ನೀಡಿದ ತೀರ್ಪು ರಾಜ್ಯ ಸರ್ಕಾರ ರೂಪಿಸಿರುವ “ಮೀಸಲು ಆಧಾರದ ಮೇಲೆ ಭಡ್ತಿ ಹೊಂದಿರುವ ಸರಕಾರಿ ನೌಕರರಿಗೆ ತತ್ಪರಿಣಾಮವಾದ ಜ್ಯೇಷ್ಠತೆ ವಿಸ್ತರಿಸುವ ಕಾಯ್ದೆ-2017′ ಮೇಲೆ ಪರಿಣಾಮ ಬೀರುವುದಿಲ್ಲ. ಬಿ.ಕೆ.ಪವಿತ್ರ ಮತ್ತು ರಾಜ್ಯ ಸರ್ಕಾರ ನಡುವಿನ ಪ್ರಕರಣಕ್ಕೂ ಈ ತೀರ್ಪಿಗೂ ಸಂಬಂಧ ಇಲ್ಲ ಎಂದು ಹೇಳಲಾಗುತ್ತಿದೆಯಾದರೂ ಎಂ.ನಾಗರಾಜ್‌ ಪ್ರಕರಣದಲ್ಲಿ ರದ್ದುಗೊಳಿಸಿರುವ ಅಂಶ ರಾಜ್ಯ ಸರ್ಕಾರದ ನೆರವಿಗೆ ಬರುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಕಾನೂನು ತಜ್ಞರು ಹೇಳುವುದೇನು?:
ಬಿ.ಕೆ.ಪವಿತ್ರ ಪ್ರಕರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಒದಗಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿ, ಬಡ್ತಿ ಮೀಸಲು ಕುರಿತಂತೆ 2002ರಲ್ಲಿ ರೂಪಿಸಿದ್ದ ಕಾಯ್ದೆಯನ್ನೇ ರದ್ದುಗೊಳಿಸಿದೆ. ಇದನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಮತ್ತೂಂದು ವಿಧೇಯಕ ರೂಪಿಸಿ ಅದಕ್ಕೆ ರಾಷ್ಟ್ರಪತಿಗಳ ಅಂಕಿತ ಪಡೆದು ಹೊಸ ಕಾಯ್ದೆ ರೂಪಿಸಿದೆ. ಹೀಗಾಗಿ ರಾಜ್ಯದಲ್ಲಿ ಮೀಸಲು ಬಡ್ತಿ ಕುರಿತಂತೆ ಇರುವ ವಿವಾದಕ್ಕೂ ಎಂ.ನಾಗರಾಜ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿಗೂ ಸಂಬಂಧ ಇಲ್ಲ. ಹೀಗಾಗಿ ಈ ತೀರ್ಪು ಬಿ.ಕೆ.ಪವಿತ್ರ ಪ್ರಕರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮಾಜಿ ಅಡ್ವೋಕೇಟ್‌ ಜನರಲ್‌ ಅಶೋಕ್‌ ಹಾರನಹಳ್ಳಿ ಹೇಳುತ್ತಾರೆ.

ಇನ್ನೊಂದೆಡೆ ಇದಕ್ಕೆ ವ್ಯತಿರಿಕ್ತ ಅಭಿಪ್ರಾಯವನ್ನು ಇನ್ನು ಕೆಲವು ವಕೀಲರು ವ್ಯಕ್ತಪಡಿಸುತ್ತಾರೆ. ರಾಜ್ಯ ಸರ್ಕಾರ 2002ರಲ್ಲಿ ರೂಪಿಸಿದ ಕಾಯ್ದೆಯನ್ನೇ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದ ಮೇಲೆ ಆ ಕಾಯ್ದೆಯಂತೆ ನೀಡಿರುವ ಬಡ್ತಿ ಉಳಿಸಿಕೊಳ್ಳಲು ರಾಜ್ಯ  ಸರ್ಕಾರ ಮತ್ತೂಂದು ಕಾಯ್ದೆ ರೂಪಿಸಿದರೆ ಅದು ಕಾನೂನು ಬಾಹಿರವಾಗುತ್ತದೆ. 

Advertisement

ಇನ್ನೊಂದೆಡೆ ಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ ಎಂದು ಈ ಹಿಂದೆ ಎಂ.ನಾಗರಾಜ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಐವರು ನ್ಯಾಯಮೂರ್ತಿಗಳನ್ನೊಳಗೊಂಡ ನ್ಯಾಯಪೀಠ ಎತ್ತಿಹಿಡಿದಿದೆ. ಇದರಿಂದ ಮೀಸಲು ಬಡ್ತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಹೆಚ್ಚು ಬಲ ಬಂದಂತಾಗಿದೆ ಎನ್ನುತ್ತಾರೆ.

ಬಿ.ಕೆ.ಪವಿತ್ರ ಪ್ರಕರಣದಲ್ಲಿ ಪ್ರಮುಖವಾಗಿ ಮೀಸಲು ಬಡ್ತಿ ನೀಡುವಾಗ ಶೇ. 18ಕ್ಕಿಂತ ಹೆಚ್ಚು ಬಡ್ತಿ ನೀಡಿರುವುದನ್ನೇ ಪ್ರಮುಖವಾಗಿ ಪ್ರಶ್ನಿಸಲಾಗಿದೆ. ಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ ಎಂದು ಹೇಳಿದ ಬಳಿಕ ಶೇ. 18ಕ್ಕಿಂತ ಹೆಚ್ಚು ಮೀಸಲಾತಿ ನೀಡಿದ್ದನ್ನು ಕಾನೂನುಬದ್ಧಗೊಳಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ.

ಪರಿಶೀಲನೆ ನಡೆಸುತ್ತಿರುವ ಸರ್ಕಾರ:
ಈ ಮಧ್ಯೆ ಮೀಸಲು ಬಡ್ತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಿಂದ “ಮೀಸಲು ಆಧಾರದ ಮೇಲೆ ಭಡ್ತಿ ಹೊಂದಿರುವ ಸರಕಾರಿ ನೌಕರರಿಗೆ ತತ್ಪರಿಣಾಮವಾದ ಜ್ಯೇಷ್ಠತೆ ವಿಸ್ತರಿಸುವ ಕಾಯ್ದೆ-2017′ ಉಳಿಸಿಕೊಳ್ಳಲು ಏನಾದರೂ ಅನುಕೂಲವಾಗುವುದೇ ಎಂಬ ಬಗ್ಗೆ ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆ. ಮೀಸಲು ನಿಗದಿ ವೇಳೆ “ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿಂದುಳಿದಿರುವಿಕೆ ಬಗ್ಗೆ ರಾಜ್ಯವು ಪ್ರಾಮಾಣೀಕೃತ ದತ್ತಾಂಶ ತೋರಿಸಬೇಕು’ ಎಂಬ ಅಂಶವನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿರುವುದರಿಂದ ಇದರ ಲಾಭ ಪಡೆದುಕೊಳ್ಳಲು ಸಾಧ್ಯವೇ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದು, ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಕಾನೂನು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಮಾಣೀಕೃತ ದತ್ತಾಂಶ ಕುರಿತು ವಿಶ್ಲೇಷಣೆ ಅಗತ್ಯ
ಬಡ್ತಿಯಲ್ಲಿ ಮೀಸಲಾತಿ ನಿಗದಿಪಡಿಸುವಾಗ “ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿಂದುಳಿದಿರುವಿಕೆ ಬಗ್ಗೆ ರಾಜ್ಯವು ಪ್ರಾಮಾಣೀಕೃತ ದತ್ತಾಂಶ ತೋರಿಸಬೇಕು’ ಎಂಬ ಅಂಶವನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿರುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹಿರಿಯ ವಕೀಲ ಹಾಗೂ ಮಾಜಿ ಅಡ್ವೋಕೇಟ್‌ ಜನರಲ್‌ ಬಿ.ವಿ.ಆಚಾರ್ಯ ಹೇಳಿದ್ದಾರೆ.

ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನಿಗದಿಪಡಿಸಲಾಗುತ್ತಿದ್ದು, ಅದಕ್ಕೆ ತಕ್ಕಂತೆ ಬಡ್ತಿ ನೀಡಬೇಕಾದರೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿಂದುಳಿದಿರುವಿಕೆ ಬಗ್ಗೆ ರಾಜ್ಯವು ಪ್ರಾಮಾಣೀಕೃತ ದತ್ತಾಂಶ ಅಗತ್ಯ. ಏಕೆಂದರೆ, ಈ ದತ್ತಾಂಶ ಇದ್ದರೆ ಮಾತ್ರ ಆ ಸಮುದಾಯಕ್ಕೆ ಸರಿಯಾದ ಪ್ರಾತಿನಿಧ್ಯ ಸಿಕ್ಕಿದೆಯೇ ಎಂಬುದು ಗೊತ್ತಾಗುತ್ತದೆ. ಸಂವಿಧಾನದಲ್ಲು ಮೀಸಲಾತಿಯಲ್ಲಿ ಯಾವುದೇ ಸಮುದಾಯಕ್ಕಾದರೂ ಸರಿಯಾದ ಪ್ರಾತಿನಿಧ್ಯ ಸಿಗಬೇಕು ಎಂದು ಹೇಳಲಾಗಿದೆ. ಹೀಗಿರುವಾಗ ದತ್ತಾಂಶ ಅಗತ್ಯವಿಲ್ಲ ಎಂಬ ತೀರ್ಪಿನ ಅಂಶ ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾದಂತಾಗುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ಮೇಲಾಗಿ ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ವಿಶಾಲ ಪೀಠ, ಯಾವುದೇ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿದ್ದರೆ ಮತ್ತೆ ಬಡ್ತಿಯಲ್ಲಿ ಮೀಸಲಾತಿ ಕೊಡಬಾರದು ಎಂದು ಹೇಳಿದೆ. ಪ್ರಾಮಾಣೀಕೃತ ದತ್ತಾಂಶ ಇಲ್ಲದಿದ್ದರೆ ರಾಜ್ಯ ಸರ್ಕಾರಗಳು ಆಯಾ ಸಂದರ್ಭಕ್ಕೆ ತಕ್ಕಂತೆ ತೀರ್ಮಾನ ತೆಗೆದುಕೊಳ್ಳಬಹುದು. ಹೀಗಾಗಿ ಈ ತೀರ್ಪಿನ ಬಗ್ಗೆ ಇನ್ನಷ್ಟು ವಿಶ್ಲೇಷಣೆ ಮಾಡುವ ಅಗತ್ಯವಿದೆ ಎಂದು ಅವರು ಹೇಳುತ್ತಾರೆ.

– ಪ್ರದೀಪ್‌ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next