Advertisement

ಬಡ್ತಿ ಮೀಸಲು: ಇಬ್ಬರಿಗೂ ನ್ಯಾಯ

06:28 AM Feb 26, 2019 | |

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿರುವ ಬಡ್ತಿ ಮೀಸಲಾತಿ ಪ್ರಕರಣ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎರಡೂ ಪಕ್ಷಗಳ ಸಚಿವರ ನಡುವೆ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದ್ದು, ಅಹಿಂಸಾ ಹಾಗೂ ಎಸ್ಸಿ ಎಸ್ಟಿ ಎರಡೂ ಸಮುದಾಯಗಳ ಹಿತ ಕಾಯಲು ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.  

Advertisement

ಬಿ.ಕೆ. ಪವಿತ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಬಡ್ತಿ ಪಡೆದ ಎಸ್ಸಿ ಎಸ್ಟಿ ನೌಕರರಿಗೆ ತತ್ಸಮಾನ ಹುದ್ದೆ ನೀಡುವ ಸಲುವಾಗಿ ರಾಜ್ಯ ಸ‌ರ್ಕಾರ 2017 ರಲ್ಲಿ ಜಾರಿಗೆ ತಂದಿರುವ ಎಸ್ಸಿ ಎಸ್ಟಿ ನೌಕರರ ಹಿತ ಕಾಯುವ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಅದರ ಅನುಷ್ಠಾನದಲ್ಲಿ ಗೊಂದಲ ಮುಂದುವರೆದಿತ್ತು.  

ಹಿಂಬಡ್ತಿ ಪಡೆದಿರುವ ಎಸ್ಸಿ ಎಸ್ಟಿ ನೌಕರರಿಗೆ ಬಡ್ತಿ ಹೊಂದಿರುವ ಸಾಮಾನ್ಯ ವರ್ಗದ ನೌಕರರ ಸಮಾನಾಂತರ ಹುದ್ದೆ ನೀಡುವುದು ಹಾಗೂ ಖಾಲಿ ಇರುವ ಹುದ್ದೆಗಳಿಗೆ ಎಸ್ಸಿ ಎಸ್ಟಿ ನೌಕರರನ್ನು ನೇಮಕ ಮಾಡಲು ಸಂಪುಟದಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಕಾಯ್ದೆ ಜಾರಿಗೆ ಸಂಪುಟ ಒಪ್ಪಿಗೆ ನೀಡಿದ್ದರೂ, ಅನುಷ್ಠಾನಗೊಳಿಸುವಲ್ಲಿ ವಿಳಂಬವಾಗುತ್ತಿದ್ದು, ಎಸ್ಸಿ ಎಸ್ಟಿ ನೌಕರರಿಂದ ಒತ್ತಡ ಹೆಚ್ಚಳವಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಅವರ ವಾದಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವರಾದ ವೆಂಕಟರಮಣಪ್ಪ, ಪಿ.ಟಿ. ಪರಮೇಶ್ವರ್‌ ನಾಯ್ಕ ಬೆಂಬಲ ವ್ಯಕ್ತಪಡಿಸಿ, ಎಸ್ಸಿ ಎಸ್ಟಿ ನೌಕರರಿಗೆ ನ್ಯಾಯ ಒದಗಿಸದಿದ್ದರೆ, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಮಗೆ ವ್ಯತಿರಿಕ್ತ ಪರಿಣಾಮವಾಗಲಿದ್ದು, ಸಂಪುಟ ಒಪ್ಪಿಗೆ ನೀಡಿರುವುದನ್ನೂ ಅನುಷ್ಠಾನಗೊಳಿಸದ್ದಿದರೆ, ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.  

Advertisement

ಕಾಂಗ್ರೆಸ್‌ ಸಚಿವರ ಒತ್ತಡಕ್ಕೆ ಮಣಿದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಎರಡೂ ವರ್ಗಗಳಿಗೂ ಅನ್ಯಾಯವಾಗದಂತೆ ನಿಯಮಗಳನ್ನು ರೂಪಿಸಿ, ಹಾಲಿ ಹುದ್ದೆಯಲ್ಲಿರುವ ಅಹಿಂಸಾ ವರ್ಗದ ಸಿಬ್ಬಂದಿಗಳನ್ನು ಬದಲಾಯಿಸದೇ, ಎಸ್ಸಿ ಎಸ್ಟಿ ನೌಕರರಿಗೆ ಸಮಾನವಾದ ಹುದ್ದೆ ಹಾಗೂ ವೇತನ ನೀಡಲು ನಿಯಮಗಳನ್ನು ಬದಲಾಯಿಸಿ, ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.  

40 ಹೊಸ ವಿಷಯ ಸೇರ್ಪಡೆ: ಸುಮಾರು ಮೂರು ಗಂಟೆಗಳ ಕಾಲ ಸಂಪುಟ ಸಭೆ ನಡೆದಿದ್ದು, ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇರುವುದರಿಂದ ಪ್ರಮುಖ ಯೋಜನೆಗಳಿಗೆ ಒಪ್ಪಿಗೆ ನೀಡಲು ಸಂಪುಟ ತರಾ ತುರಿಯಲ್ಲಿ ಸುಮಾರು 40 ಹೊಸ ವಿಷಯಗಳನ್ನು ಸೇರ್ಪಡೆಗೊಳಿಸಿ ತೀರ್ಮಾನಿಸಲಾಯಿತು ಎಂದು ತಿಳಿದು ಬಂದಿದೆ.    

ಕಾಂಗ್ರೆಸ್‌ ಪಕ್ಷದಿಂದ ದಲಿತರಿಗೆ ಅನ್ಯಾಯವಾಗಿದೆ ಎಂದು ಪರಮೇಶ್ವರ್‌ ಹೇಳಿಲ್ಲ. ಪ್ರಧಾನಿ ಮೋದಿಯನ್ನು ಮಲ್ಲಿಕಾರ್ಜುನ ಖರ್ಗೆಯವರು ಎದುರಿಸಿದ್ದಾರೆ ಎನ್ನುವ ಅರ್ಥದಲ್ಲಿ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ
-ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಸಚಿವ 

Advertisement

Udayavani is now on Telegram. Click here to join our channel and stay updated with the latest news.

Next