Advertisement

ತೆಲಂಗಾಣದಲ್ಲಿ ರಾಜ್ಯ ನಾಯಕರ ಪ್ರಚಾರ

12:48 PM Dec 03, 2018 | Team Udayavani |

ರಾಯಚೂರು: ತೆಲಂಗಾಣದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆ ಕಾವು ದಿನೇ ದಿನೆ ಹೆಚ್ಚಾಗಿದ್ದು, ಪ್ರಾದೇಶಿಕ ಪಕ್ಷವಾದ ಟಿಆರ್‌ಎಸ್‌ ಮಣಿಸಲು ಕಾಂಗ್ರೆಸ್‌, ಬಿಜೆಪಿ ಟೊಂಕ ಕಟ್ಟಿ ನಿಂತಿವೆ. ಈ ಪಕ್ಷಗಳು ಗಡಿಭಾಗದ ಬಹುತೇಕ ನಾಯಕರು, ಕಾರ್ಯಕರ್ತರನ್ನು ಬಳಸಿಕೊಂಡು ಅಬ್ಬರದ ಪ್ರಚಾರಕ್ಕೆ ಮುಂದಾಗಿವೆ. 

Advertisement

ತೆಲಂಗಾಣದ 119 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ಪ್ರತಿಷ್ಠೆ ಕಣವಾಗಿ ಮಾರ್ಪಟ್ಟಿದೆ. ಈಗ ಅಧಿಕಾರದಲ್ಲಿದ್ದ ಟಿಆರ್‌ಎಸ್‌ ಪಕ್ಷ ಅವಧಿಗೂ ಮುಂಚೆ ಚುನಾವಣೆಗೆ ತೆರಳಿದ್ದು, ಉಳಿದ ಪಕ್ಷಗಳು ಸಂಘಟನೆಗೆ ನಾನಾ ಕಸರತ್ತು ಮಾಡುವಂತೆ ಮಾಡಿದೆ. ಇದರಿಂದ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯಗಳ ಮಧ್ಯೆ ತನ್ನ ಝಂಡಾ ಊರಲು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಇನ್ನಿಲ್ಲದ ಕಸರತ್ತು ನಡೆಸಿವೆ. ಇದಕ್ಕಾಗಿ ನೆರೆ ಹೊರೆ ರಾಜ್ಯಗಳಿಂದ ಶಾಸಕರು, ಮುಖಂಡರು ಹಾಗೂ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಅಖಾಡಕ್ಕಿಳಿಸಿವೆ.

ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಬೋಸರಾಜ್‌ ಅವರನ್ನು ತೆಲಂಗಾಣ ಚುನಾವಣೆ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಅವರು ಕಳೆದ ಕೆಲ ದಿನಗಳಿಂದ ಹೈದರಾಬಾದ್‌ನಲ್ಲಿ ಬೀಡುಬಿಟ್ಟಿದ್ದಾರೆ. ಅವರ ಪುತ್ರ ರವಿ ಬೋಸರಾಜ್‌ ಅವರನ್ನು ಕೂಡ ಎಐಸಿಸಿ ವೀಕ್ಷಕರನ್ನಾಗಿ ನೇಮಿಸಲಾಗಿದೆ. ಗ್ರಾಮೀಣ ಶಾಸಕ ದದ್ದಲ್‌ ಬಸನಗೌಡರಿಗೆ ಗದ್ವಾಲ್‌, ಪತ್ರಿಕೊಂಡ ಕ್ಷೇತ್ರಗಳ ಉಸ್ತುವಾರಿ ನೀಡಲಾಗಿದೆ. ಉಳಿದಂತೆ ನೂರಾರು ಕಾರ್ಯಕರ್ತರು, ಯುವ ಕಾಂಗ್ರೆಸ್‌ ಸದಸ್ಯರು ಈಗಾಗಲೇ ತೆಲಂಗಾಣದಲ್ಲಿ ಬೀಡು ಬಿಟ್ಟು ಪ್ರಚಾರದಲ್ಲಿ ತೊಡಗಿದ್ದಾರೆ.

ಬಿಜೆಪಿಯಿಂದಲೂ ನೂರಾರು ಕಾರ್ಯಕರ್ತರು ತೆರಳಿದ್ದಾರೆ. ಶಾಸಕರಾದ ರಾಜಕುಮಾರ ಪಾಟೀಲ, ವೈ.ಎ.ನಾರಾಯಣ ಸ್ವಾಮಿ, ಶಿಸ್ತು ಸಮಿತಿ ಮುಖಂಡ ಎನ್‌.ಶಂಕ್ರಪ್ಪ, ಮಾಜಿ ಶಾಸಕ ತಿಪ್ಪರಾಜ ಹವಾಲ್ದಾರ್‌ ಸೇರಿ ಅನೇಕ ನಾಯಕರು ತಿಂಗಳು ಮುಂಚೆಯೇ ತೆರಳಿ ಪ್ರಚಾರ ಮಾಡುತ್ತಿದ್ದಾರೆ.

ಯೋಜನೆಗಳ ಪ್ರಚಾರ: ಗದ್ವಾಲ್‌, ಮೆಹಬೂಬ್‌ನಗರ, ನಾಗಲಕರ್ನೂಲ್‌, ಮಕ್ತಲ್‌, ನಾರಾಯಣಪೇಟ, ಮೆದಕ್‌, ಪತ್ತಿಕೊಂಡ ಸೇರಿ 20ರಿಂದ 25 ತೆಲಂಗಾಣ ಕ್ಷೇತ್ರಗಳಲ್ಲಿ ಪ್ರಚಾರ ನಡೆದಿದೆ. ಪ್ರತಿ ಲೋಕಸಭೆ ಕ್ಷೇತ್ರಕ್ಕೆ ಒಬ್ಬ ಸಂಯೋಜಕ, ವಿಧಾನಸಭೆ ಕ್ಷೇತ್ರಕ್ಕೆ ಇಬ್ಬರು ಉಸ್ತುವಾರಿಗಳನ್ನು ನಿಯೋಜಿಸಲಾಗಿದೆ. 

Advertisement

ತೆಲಂಗಾಣ ಪ್ರತ್ಯೇಕ ರಾಜ್ಯವಾದ ಬಳಿಕ ಅಲ್ಲಿನ ಸಿಎಂ ಕೆ. ಚಂದ್ರಶೇಖರರಾವ್‌ ಸಾಕಷ್ಟು ಹೊಸ ಯೋಜನೆ ಪರಿಚಯಿಸಿದ್ದಾರೆ. ಬಡವರು, ರೈತರಿಗೆ ಸಾಕಷ್ಟು ಉಪಯುಕ್ತ ಯೋಜನೆ ಪರಚಯಿಸಿದ್ದಾರೆ. ಅದೇ ವಿಶ್ವಾಸದಲ್ಲಿ ಅವರು ಅವಧಿಪೂರ್ಣ ಚುನಾವಣೆಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಆದರೆ, ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಅಲ್ಲಿನ ಗೆಲುವು ತುಂಬಾ ಮುಖ್ಯವಾಗಿದೆ. ಹೀಗಾಗಿ ಉಭಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ರವಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಪ್ರಚಾರಕ್ಕೆ ಬಂದರೆ, ಡಿ.3ರಂದು ಗದ್ವಾಲ್‌ನಲ್ಲಿ ರಾಹುಲ್‌ ಗಾಂಧಿ ಪಚಾರಕ್ಕೆ ಬರುತ್ತಿದ್ದಾರೆ. ಈಚೆಗೆ ಪ್ರಧಾನಿ ಮೋದಿ ಕೂಡ ಪ್ರಚಾರ ನಡೆಸಿ ಹೋಗಿದ್ದಾರೆ. ಈಗ ಅಲ್ಲಿ ತೆರಳಿದ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿಕೊಟ್ಟರೆ. ಕಾಂಗ್ರೆಸ್‌ ನಾಯಕರು ಕರ್ನಾಟಕದಲ್ಲಿ ಮಾಡಿದ ಸಾಧನೆ, ಜಾರಿಗೊಳಿಸಿದ ಹಲವು ಭಾಗ್ಯಗಳ ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಡಿ.4ರವರೆಗೂ ಬಹಿರಂಗ ಪ್ರಚಾರಕ್ಕೆ ಅವಕಾಶವಿದ್ದು, ಅಲ್ಲಿವರೆಗೂ ಪ್ರಚಾರ ಕಾರ್ಯದಲ್ಲಿ ತೊಡಗುವಂತೆ ಪಕ್ಷದ ವರಿಷ್ಠರು ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. 

ನನ್ನ ಕ್ಷೇತ್ರಕ್ಕೆ ಹೊಂದಿಕೊಂಡ ಗದ್ವಾಲ್‌ ಜತೆ ಪತ್ತಿಕೊಂಡ ಕ್ಷೇತ್ರವನ್ನೂ ಉಸ್ತುವಾರಿ ವಹಿಸಲಾಗಿದೆ. ಕಳೆದ
ಒಂದು ತಿಂಗಳಿನಿಂದ ಪ್ರಚಾರ ಮಾಡುತ್ತಿದ್ದೇವೆ. ನಮ್ಮೊಟ್ಟಿಗೆ ಅನೇಕ ಕಾರ್ಯಕರ್ತರು, ಪಕ್ಷದ ಮುಖಂಡರು ಬಂದಿದ್ದಾರೆ.
 ಬಸನಗೌಡ ದದ್ದಲ್‌, ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಶಾಸಕ

ಕರ್ನಾಟಕದ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ತೆಲಂಗಾಣದ ವಿವಿಧ ಕ್ಷೇತ್ರಗಳ ಪ್ರಚಾರ ಉಸ್ತುವಾರಿ ನೀಡಲಾಗಿದೆ. ರಾಯಚೂರು, ಯಾದಗಿರಿ, ಬೀದರ, ಬಳ್ಳಾರಿಯಿಂದ ಹೆಚ್ಚಾಗಿ ಬಂದಿದ್ದಾರೆ. ಉಳಿದಂತೆ ಮಹಾರಾಷ್ಟ್ರ, ತೆಲಂಗಾಣದಿಂದಲೂ ಪ್ರಚಾರಕ್ಕೆ ಬಂದಿದ್ದಾರೆ.
 ಬಂಡೇಶ ವಲ್ಕಂದಿನ್ನಿ, ಬಿಜೆಪಿ ಮುಖಂಡ, ರಾಯಚೂರು

ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next