Advertisement

ಕ್ರೀಡಾಪಟುಗಳನ್ನು ಖಾಸಗಿ ಸಂಸ್ಥೆಗಳಿಗೆ ದತ್ತು ನೀಡಲು ನಿರ್ಧಾರ: ಸಚಿವ ನಾರಾಯಣ ಗೌಡ

07:32 PM Oct 23, 2021 | Team Udayavani |

ದಾವಣಗೆರೆ: ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಕ್ರೀಡೆಗೆ ಉತ್ತೇಜನ ಹಾಗೂ ಮೂಲ ಸೌಲಭ್ಯ ವೃದ್ಧಿಪಡಿಸುವ ಕುರಿತು ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಲಾಗಿದೆ. ಸಮಿತಿ ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದು ವರದಿ ಬಂದ ಬಳಿಕ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದು ಕ್ರೀಡೆ, ಯುವಜನ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ.ಸಿ. ನಾರಾಯಣ ಗೌಡ ಹೇಳಿದರು.

Advertisement

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ರೀಡೆಗೆ ಶಕ್ತಿ ಕೊಡುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಮುಂದಿನ ಒಲಂಪಿಕ್‌ಗೆ ರಾಜ್ಯದಿಂದ 75 ಕ್ರೀಡಾಪಟುಗಳನ್ನು ಕಳುಹಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಕ್ರೀಡಾಪಟುಗಳನ್ನು ಖಾಸಗಿ ಸಂಸ್ಥೆಗಳಿಗೆ ದತ್ತು ನೀಡುವ ಕೆಲಸವೂ ನಡೆದಿದ್ದು, 50 ಮಕ್ಕಳನ್ನು ವಿವಿಧ ಸಂಸ್ಥೆಗಳು ದತ್ತು ಸ್ವೀಕರಿಸಿವೆ ಎಂದರು. ಕಳೆದ ನಾಲ್ಕು ವರ್ಷದಿಂದ ಜಕ್ಕೂರು ವಿಮಾನ ನಿಲ್ದಾಣದ ಪೈಲೆಟ್‌ ತರಬೇತಿ ಸ್ಥಗಿತಗೊಂಡಿತ್ತು. ಈಗ ಅದನ್ನು ಸರಿಪಡಿಸಿ ವಿಮಾನ ಚಾಲಕರ ತರಬೇತಿಗಾಗಿ ಏಳು ವಿಮಾನಗಳನ್ನು ಸಿದ್ಧಪಡಿಸಲಾಗಿದೆ. ಮುಂದಿನ ದಿನಗಳಲ್ಲಿ 100 ಪೈಲೆಟ್‌ಗಳನ್ನು ಮಾಡಿ ಅವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲಾಗುವುದು ಎಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌ ಮಾತನಾಡಿ, ಸರ್ಕಾರಿ ನೌಕರರ ಸಂಘಟನೆಯ ಬೇಡಿಕೆಗಳನ್ನು ಈಡೇರಿಸುವ ದಿಸೆಯಲ್ಲಿ ಮುಖ್ಯಮಂತ್ರಿಯವರ ಮನವೊಲಿಸುತ್ತೇನೆ. ಸರ್ಕಾರ ಸದಾ ನೌಕರರ ಸಂಘಟನೆಗೆ ಸಹಕಾರಿಯಾಗಿರುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಮಾತನಾಡಿ, ಸರ್ಕಾರ ಈ ಮೊದಲು ಸರ್ಕಾರಿ ನೌಕರರ ಕೀಡಾಕೂಟಕ್ಕೆ 30-40 ಲಕ್ಷ ರೂ. ನೀಡುತ್ತಿತ್ತು. ಇದೇ ಮೊದಲ ಬಾರಿಗೆ ಪ್ರಸ್ತುತ ಸರ್ಕಾರ ಕೀಡಾಕೂಟಕ್ಕೆ ಎರಡು ಕೋಟಿ ರೂ. ನೀಡಿ ಪ್ರೋತ್ಸಾಹಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಯಾವುದೇ ಆಸ್ಪತ್ರೆಯಲ್ಲಿ ನಗದುರಹಿತ ಆರೋಗ್ಯ ಸೇವೆ ಸಿಗುವ ವ್ಯವಸ್ಥೆ ಜಾರಿಗೆ ಬರಲಿದೆ. 2022ಕ್ಕೆ ಹೊಸ ವೇತನ ಆಯೋಗ ರಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಎನ್‌ಪಿಎಸ್‌ ರದ್ದುಗೊಳಿಸಲು ಕೋರಲಾಗಿದೆ. ಇನ್ನು ಎರಡೂ¾ರು ತಿಂಗಳಲ್ಲಿ ಬೆಂಗಳೂರಿನಲ್ಲಿ ಆರು ಲಕ್ಷ ನೌಕರರನ್ನು ಸೇರಿಸಿ ಸಮಾವೇಶ ಮಾಡಿ ಸರ್ಕಾರದ ಮುಂದೆ ಬೇಡಿಕೆ ಮಂಡಿಸುವ ಯೋಜನೆಯೂ ಇದೆ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಪಂ ಸಿಇಒ ವಿಜಯಮಹಾಂತೇಶ ದಾನಮ್ಮನವರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌, ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಇದ್ದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದೇ ಸಂದರ್ಭದಲ್ಲಿ 100 ಕೋಟಿ ಕೋವಿಡ್‌ ಲಸಿಕೆ ಹಾಕಿ ಸಾಧನೆಗೈದ ಹಿನ್ನೆಲೆಯಲ್ಲಿ ಬಲೂನ್‌ ಹಾರಿಸಿ ಸಂಭ್ರಮಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next