Advertisement

ಕೈಗಾರಿಕಾ ನೀತಿಯಲ್ಲಿ ಪರಿಶಿಷ್ಟರಿಗೆ ಉತ್ತೇಜನ

10:57 AM Oct 14, 2019 | Suhan S |

ಧಾರವಾಡ: ನೂತನ ಕೈಗಾರಿಕಾ ನೀತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಉತ್ತೇಜನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಹೇಳಿದರು. ಕವಿಸಂನಲ್ಲಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ನೂತನ ಕೈಗಾರಿಕಾ ನೀತಿ ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಪ್ರಕಟವಾಗಲಿದೆ. ಅದರಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ವಿಶೇಷ ಪ್ರಾತಿನಿಧ್ಯ ಕಲ್ಪಿಸಲಾಗುವುದು ಎಂದರು. ಬಸವಣ್ಣ, ಡಾ| ಬಿ.ಆರ್‌. ಅಂಬೇಡ್ಕರ್‌, ಮಹರ್ಷಿ ವಾಲ್ಮೀಕಿ ಸೇರಿದಂತೆ ಎಲ್ಲಾ ಮಹನೀಯರು ಯಾವುದೇ ಜಾತಿ, ಮತಗಳಿಗೆ ಸೀಮಿತವಲ್ಲ. ಮಹರ್ಷಿ ವಾಲ್ಮೀಕಿ ಹೆಸರು ತೆಗೆದುಕೊಂಡ ಕೂಡಲೇ ಶ್ರೇಷ್ಠ ಮಹಾಕಾವ್ಯ ರಾಮಾಯಣ ಎಲ್ಲರಿಗೂ ನೆನಪಾಗುತ್ತದೆ ಎಂದು ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಭಾರತ ಸರ್ಕಾರ ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ವಿಶೇಷವಾಗಿ ಎಸ್‌ಟಿ ಜನಾಂಗದ ವಿದ್ಯಾರ್ಥಿಗಳಿಗೆ ಪ್ರಾರಂಭಿಸಿದೆ. ದೇಶದಲ್ಲಿ ಈಗಾಗಲೇ 284 ಶಾಲೆಗಳಿವೆ. ರಾಜ್ಯದಲ್ಲಿಯೂ ವಿಶೇಷ ಕೌಶಲಾಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದರು.

ರಾಜಪ್ರಭುತ್ವ, ಆಡಳಿತ, ಕಲ್ಯಾಣ ರಾಜ್ಯ ಕಲ್ಪನೆಗಳು ನಮಗೆ ಸಿಕ್ಕಿರುವುದೇ ರಾಮಾಯಣದ ಮೂಲಕ. ತ್ರೇತಾಯುಗದಿಂದ ಇಲ್ಲಿಯವರೆಗೆ ನಾವೆಲ್ಲ ರಾಮಾಯಣ ಹಾಗೂ ವಾಲ್ಮೀಕಿಯನ್ನು ಸ್ಮರಿಸುತ್ತಿರುವುದು ಅದರ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ವಿಪ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಒಂದು ಸಮುದಾಯಕ್ಕೆ ಸೀಮಿತವಲ್ಲ, ಎಲ್ಲರಿಗೂ ಅವರು ಪೂಜ್ಯರು. ಅಂದಿನ ಕಾಲದಲ್ಲಿ 24 ಸಾವಿರ ಶ್ಲೋಕಗಳನ್ನು ನವಿಲುಗರಿಯಿಂದ ಬರೆದಿದ್ದು ಸಾಮಾನ್ಯ ಸಂಗತಿಯಲ್ಲ. ರಾಮಾಯಣದ ಮೂಲಕ ಪ್ರೀತಿ, ವಿಶ್ವಾಸ, ಪರಸ್ಪರ ನಂಬಿಕೆ, ಸದ್ಗುಣಗಳನ್ನು ಕಲಿಯಲು ಸಾಧ್ಯವಾಗಿದೆ ಎಂದರು. ವಾಲ್ಮೀಕಿ ಜನಾಂಗದ ಸಾಧಕರಾದ ಬಿ. ಮಾರುತಿ, ತಿಮ್ಮಣ್ಣ ಎಸ್‌. ಕ್ವಾಟಿಹಳ್ಳಿ, ಸುರೇಶಬಾಬು ತಳವಾರ, ಹನುಮಂತಪ್ಪ ಫ. ದೊಡ್ಡಮನಿ ಹಾಗೂ ಅರವಿಂದ ದೊಡ್ಡಮನಿ ಅವರನ್ನು ಸನ್ಮಾನಿಸಲಾಯಿತು. ಕುಷ್ಟಗಿಯ ಭಾರತಿ ನೀರಗೇರಿ ಉಪನ್ಯಾಸ ನೀಡಿದರು. ಡಿಸಿ ದೀಪಾ ಚೋಳನ್‌, ಎಸ್‌ಪಿ ಕಿಶೋರಬಾಬು, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಎಸಿ ಮಹ್ಮದ್‌ ಜುಬೇರ್‌, ಜಿಪಂ ಉಪಕಾರ್ಯದರ್ಶಿ ಎಸ್‌.ಜಿ. ಕೊರವರ, ಅಬಕಾರಿ ಉಪ ಆಯುಕ್ತ ಶಿವನಗೌಡ ಪಾಟೀಲ, ಪ್ರೊಬೆಷನರಿ ಐಎಎಸ್‌ ಅ ಧಿಕಾರಿ ಆಕೃತಿ ಬನ್ಸಾಲ್‌, ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ನವೀನ ಶಿಂತ್ರೆ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next