ಮಂಡ್ಯ: ಆತ್ಮನಿರ್ಭರ ಭಾರತ್ ಯೋಜನೆಯಡಿ ಗುಣಮಟ್ಟದ ಸಾವಯವ ಬೆಲ್ಲ ಉತ್ಪಾದನೆಗೆ ಹೆಚ್ಚು ಉತ್ತೇಜನ ನೀಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ನಗರದ ಎಪಿಎಂಸಿ ಮುಂಭಾಗ ಇರುವ ಆಲೆಮನೆಗೆ ಭೇಟಿ ನೀಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವಯವ ಬೆಲ್ಲ, ಹೈನುಗಾರಿಕೆ ಹಾಗೂ ಮೀನುಗಾರಿಕೆಗೆ ಉತ್ತೇಜನ ನೀಡಲು ಕ್ರಮ ಕೈಗೊಳ್ಳಲಾಗಿದೆ. ಆತ್ಮ ನಿರ್ಭರ ಭಾರತ್ ಯೋಜನೆಯಡಿ ಆರ್ಥಿಕ ಸ್ಪಂದನ ಎಂಬ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಆತ್ಮ ನಿರ್ಭರ ಭಾರತ್ ಯೋಜನೆಯಡಿ 20 ಲಕ್ಷ ಕೋಟಿ ರೂ. ಸಮಗ್ರ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಯಾವ ಯೋಜನೆಗಳನ್ನು ಅಭಿವೃದ್ಧಿ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಮಂಡ್ಯದಲ್ಲಿ ಸಾವಯವ ಬೆಲ್ಲಕ್ಕೆ ಉತ್ತೇಜನ ನೀಡಲು ಪರಿಶೀಲನೆ ನಡೆಸಿದ್ದೇನೆ. ನಮ್ಮ ಸಹಕಾರ ಇಲಾಖೆಯಿಂದ ಏನೆಲ್ಲ ಸಹಾಯಧನ ನೀಡಬಹುದು ಅದನ್ನೆಲ್ಲ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಮೈಸೂರು: ಸಚಿವ ಎಸ್.ಟಿ. ಸೋಮಶೇಖರ್ ಗೆ ರೈತರಿಂದ ಘೇರಾವ್!
ಇದರ ಬಗ್ಗೆ ಈಗಾಗಲೇ 5 ವಿಭಾಗಗಳ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು, ಉತ್ತೇಜನ ಹಾಗೂ ಅಭಿವೃದ್ಧಿಗೆ ಬೇಕಾದ ಅಗತ್ಯ ಸಿದ್ಧತೆ ಹಾಗೂ ಸಾಲ ಸೌಲಭ್ಯಗಳ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. 8 ಸಾವಿರ ರೂ. ನಿಂದ 4 ಲಕ್ಷ ರೂ. ವರೆಗೆ ಸಾಲ ನೀಡಲಾಗುವುದು. ಸಾವಯವ ಬೆಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಲಿದೆ. ಇದಕ್ಕಾಗಿ ಸಹಕಾರ ಇಲಾಖೆಯಿಂದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ಆಲೆಮನೆ ಪರಿಶೀಲನೆ: ಎಪಿಎಂಸಿ ಮುಂಭಾಗದ ಆಲೆಮನೆಯೊಂದಕ್ಕೆ ಭೇಟಿ ನೀಡಿದ ಅವರು, ಪರಿಶೀಲನೆ ನಡೆಸಿದರು. ನಂತರ ಬೆಲ್ಲ ತಯಾರಿಕೆ ಬಗ್ಗೆ ಮಾಹಿತಿ ಪಡೆದರು. ನಂತರ ಎಪಿಎಂಸಿ ಕಚೇರಿಗೆ ಭೇಟಿ ನೀಡಿದ ಅವರು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ.ವಿಜಯಕುಮಾರ್, ಮುಖಂಡ ಡಾ.ಸಿದ್ದರಾಮಯ್ಯ, ನಗರ ಘಟಕ ಅಧ್ಯಕ್ಷ ವಿವೇಕ್, ಎಪಿಎಂಸಿ ಅಧ್ಯಕ್ಷೆ ವೈ.ಕೆ.ಪ್ರೇಮ, ಮಾಜಿ ಅಧ್ಯಕ್ಷ ಪಲ್ಲವಿ, ತಿಮ್ಮೇಗೌಡ, ಕೆ.ನಾಗಣ್ಣಗೌಡ ಸೇರಿದಂತೆ ಮತ್ತಿತರರಿದ್ದರು.