Advertisement

ನಗರಗಳಲ್ಲಿ ಐಟಿ ಉದ್ಯಮ ಸ್ಥಾಪನೆಗೆ ಉತ್ತೇಜನ

12:23 AM Jun 14, 2020 | Sriram |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಐಟಿ ಉದ್ಯಮಗಳ ಸ್ಥಾಪನೆಗೆ ಪೂರಕ ವಾತಾವರಣ ಕಲ್ಪಿಸಿ ಹೆಚ್ಚು ಉದ್ಯೋಗಾವಕಾಶಗಳ ಸೃಷ್ಟಿಗೆ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೋನಿಕ್ಸ್‌) ಹೊಂದಿರುವ ಅವಕಾಶಗಳನ್ನು ಬಳಸಿಕೊಳ್ಳಲಾಗುವುದು ಎಂದು ರಾಜ್ಯ ಕಿಯೋನಿಕ್ಸ್‌ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ.

Advertisement

ಕಿಯೊನಿಕ್ಸ್‌ ಅಧ್ಯಕ್ಷರಾದ ಬಳಿಕ ಉದಯವಾಣಿ ಜತೆ ಮಾತನಾಡಿದ ಅವರು, ರಾಜ್ಯ ಸರಕಾರ ನನಗೆ ಈ ಅವಕಾಶ ನೀಡಿದ್ದು, ಮುಂದಿನ ವಾರ ಅಧಿಕಾರ ಸ್ವೀಕರಿಸಲಿದ್ದೇನೆ. ಕಿಯೋನಿಕ್ಸ್‌ ಹೊಂದಿರುವ ಅಧಿಕಾರ, ಅವಕಾಶಗಳ ಬಗ್ಗೆ ಸಮಗ್ರ ವಿವರ, ಮಾಹಿತಿ ಪಡೆದುಕೊಂಡು ಮುಂದಿನ ಯೋಜನೆಗಳ ಬಗ್ಗೆ ರೂಪರೇಖೆ ತಯಾರಿಸಲಾಗುವುದು ಎಂದರು.

ಉದ್ಯೋಗ ಸೃಷ್ಟಿಗೆ ಒತ್ತು
ಸಾವಿರಾರು ಯುವಕ- ಯುವತಿ ಯರು ಉದ್ಯೋಗಕ್ಕಾಗಿ ಹೊರ ಜಿಲ್ಲೆ/ರಾಜ್ಯ/ ಹೊರದೇಶಗಳಿಗೆ ತೆರಳುತ್ತಿದ್ದಾರೆ. ಅವರು ಇರುವ ಪ್ರದೇಶಗಳಲ್ಲೇ ದುಡಿಯುವ ಸಂಸ್ಕೃತಿ ಉದ್ದೀಪನಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಬೇಕು. ಐಟಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿದ್ದು, ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

2ನೇಐಟಿ ಹಬ್‌ ಪ್ರಸ್ತಾವನೆ
ರಾಜ್ಯದಲ್ಲಿ 2ನೇ ಮತ್ತು 3ನೇ ಹಂತದ ನಗರಗಳನ್ನು ಉದ್ಯಮ ಕ್ಷೇತ್ರದಲ್ಲಿ ಬೆಳೆಸುವ ಪ್ರಸ್ತಾವನೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಮಂಗಳೂರನ್ನು ರಾಜ್ಯದ 2ನೇ ಐಟಿ ಹಬ್‌ ಆಗಿ ಬೆಳೆಸುವ ಪ್ರಸ್ತಾವನೆ ಕಳೆದ ಕೆಲವು ವರ್ಷಗಳಿಂದ ಇದ್ದರೂ ಸಾಕಾರಗೊಂಡಿಲ್ಲ. ಪ್ರಸ್ತುತ ಸಂಸದ ನಳಿನ್‌ ಕುಮಾರ್‌ ಕಟೀಲು ಮತ್ತು ಶಾಸಕರು ಸರಕಾರದ ಮಟ್ಟದಲ್ಲಿ ಪೂರಕ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಕಿಯೋನಿಕ್ಸ್‌ ಕೂಡ ಪೂರಕವಾಗಿ ಸ್ಪಂದಿಸಲಿದೆ ಎಂದು ತಿಳಿಸಿದರು.

ದೇರೆಬೈಲ್‌ನಲ್ಲಿ ಐಟಿ ಹಬ್‌ ?
ಮಂಗಳೂರಿನ ದೇರೆಬೈಲ್‌ನಲ್ಲಿ ಕಿಯೋನಿಕ್ಸ್‌ಗೆ ಸೇರಿದ 4 ಎಕ್ರೆಗೂ ಹೆಚ್ಚು ಜಾಗ ಇದ್ದು, ಅದನ್ನು ಐಟಿ ಹಬ್‌ ಆಗಿ ಅಭಿವೃದ್ಧಿ ಪಡಿಸಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ಐಟಿ ಕ್ಷೇತ್ರದ ಪ್ರಮುಖರು, ಸಂಸದರು, ಜಿಲ್ಲೆಯ ಶಾಸಕರ ಜತೆ ಚರ್ಚಿಸುತ್ತೇನೆ ಎಂದು ಹರಿಕೃಷ್ಣ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next