Advertisement

ಯಾರ ಅಂಕುಶವೂ ಕಾಡದೇ ಬನವಾಸಿಗೆ ಸಿಗಲಿ ಬಡ್ತಿ

03:14 PM Nov 01, 2019 | Suhan S |

ಶಿರಸಿ: ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಎಂದು ಹಾಡಿ ಹೊಗಳಿದ್ದ ಪಂಪನ ಬನವಾಸಿ ಮತ್ತೆ ಅಂಥದ್ದೇ ಹಾಡಿಸಿಕೊಂಡು ಸಂಭ್ರಮಿಸಲು ಕಾತರವಾಗಿದೆ. ಕನ್ನಡದ ಪ್ರಥಮ ರಾಜಧಾನಿಗೆ ತಾಲೂಕು ಮಾನ್ಯತೆ ಮೂಲಕ ಗೌರವಿಸಲು ಸ್ವತಃ ಈ ನೆಲದ ಮಕ್ಕಳು ಹಕ್ಕೊತ್ತಾಯ ಆರಂಭಿಸಿದ್ದಾರೆ.

Advertisement

ಪ್ರಥಮ ರಾಜಧಾನಿಯಾಗಿಸಿಕೊಂಡು ಕನ್ನಡದ ಪ್ರಥಮ ದೊರೆ ಮಯೂರ ವರ್ಮನ ಬನವಾಸಿ ಇಂದಿಗೂ ಗ್ರಾಮ ಪಂಚಾಯ್ತಿಯಾಗಿಯೇ ಉಳಿದಿದೆ. ಈಗಾಗಲೇ ಹದಿನಾರು ಸಾವಿರಕ್ಕೂ ಅಧಿಕ ಜನಸಂಖ್ಯೆ ಉಳ್ಳ ಬನವಾಸಿ ಪ್ರವಾಸಿ ತಾಣ, ಧಾರ್ಮಿಕ ನೆಲೆ ಎಲ್ಲವೂ ಹೌದು. ಸುತ್ತ ಮುತ್ತಲಿನ ಹತ್ತಾರು ಗ್ರಾಮಗಳ, ನೂರಾರು ಹಳ್ಳಿಗಳಿಗೆ ವ್ಯಾಪರೀ ಕೇಂದ್ರ. ಈ ಪಂಚಾಯ್ತಿಗೆ ಪಪಂ ಮಾನ್ಯತೆ, ತಾಲೂಕಿನ ಗೌರವ ಕೊಡಬೇಕು ಎಂಬುದು ಒತ್ತಾಸೆಯಾಗಿದೆ. ಬನವಾಸಿ ವರದಾ ನದಿ ತಟದ ಊರು.

ಕನ್ನಡದ ಪ್ರಥಮ ರಾಜಧಾನಿ. ದೇಶದ ಅತ್ಯಂತ ಅಪರೂಪದ ಮಧು ಬಣ್ಣದ ದೊಡ್ಡ ಮಧು ಲಿಂಗ, ಬಸವಣ್ಣ, ಪಾರ್ವತಿ ದೇವಸ್ಥಾನ ಹೊಂದಿದ ಊರು. ಇಲ್ಲಿನ ಅನಾನಸ್‌ ದೆಹಲಿಯಲ್ಲಿ ಅತಿ ಹೆಚ್ಚು ಬೇಡಿಕೆ. ಭತ್ತದ ನಾಡಿನಲ್ಲಿ ಈಗ ಅಡಕೆ, ತೆಂಗು, ಶುಂಠಿ, ಬಾಳೆಯೂ ಇದೆ. ಮಳೆಗಾಲದಲ್ಲಿ ವರದಾ ನದಿ ಉಕ್ಕುತ್ತದೆ, ಬೇಸಿಗೆಯಲ್ಲಿ ಬತ್ತುತ್ತದೆ. ಪಕ್ಕದಲ್ಲೇ ಇರುವ ಗುಡ್ನಾಪುರದಲ್ಲಿ ಗುಡ್ಡ ತಟಾಕ ಎಂಬ ಕೆರೆ. 162 ಎಕರೆ ವಿಸ್ತೀರ್ಣದ ಕೆರೆ ಈ ಭಾಗದ ಜೀವ ಜಲದ ನಾಡಿ.

ಗಡಿ ನಾಡಿನ ಊರು ಬನವಾಸಿ ಪಕ್ಕವೇ ಹಾವೇರಿ, ಶಿವಮೊಗ್ಗ ಗಡಿ ಬರುತ್ತದೆ. ಶಿರಸಿ  ತಾಲೂಕಿನ ಪೂರ್ವ ಭಾಗ ಅದು. ಬನವಾಸಿ ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಊರು. ಅಲ್ಲಿನ ದೇವಸ್ಥಾನದ ಶೈಲಿ, ಜನ ಜೀವನ, ಕೆರೆಗಳ ಚಿತ್ರಣ ನೆನಪಾಗುತ್ತದೆ. ಇಂಥ ಮಧುರ ನೆನಪಿನಲ್ಲಿ ಈಗ ಅಳಿದುಳಿದ ಕಾಡಿನ ನಡುವೆ ಬದುಕು ನಡೆಸುತ್ತಿರುವ ಬನವಾಸಿಗರು ಒಂದು ಬೇಡಿಕೆ ಸರಕಾರದ ಮುಂದೆ ಇಟ್ಟಿದ್ದಾರೆ. ಆಳು ಪಕ್ಷಗಳು ಈ ಬೇಡಿಕೆಗಳಿಗೆ ಕನಿಷ್ಠ ಎರಡು ದಶಕಗಳಿಂದ ಉತ್ತರಿಸುತ್ತಲೇ ಬಂದಿದ್ದಾರೆ. ಈವರೆಗೂ ಈಡೇರಿಲ್ಲ. ಕದಂಬೋತ್ಸವ ನಡೆಸುವಾಗಲೂ, ಪಂಪ ಪ್ರಶಸ್ತಿ ಪ್ರದಾನಕ್ಕೆ ಮುಖ್ಯಮಂತ್ರಿಗಳು ಬಂದಾಗಲೂ ಬನವಾಸಿ ತಾಲೂಕು ಮಾನ್ಯತೆಯ ಹಕ್ಕೊತ್ತಾಯ ಕೇಳಿ ಬರುತ್ತಲೇ ಇತ್ತು.

ಆನವಟ್ಟಿ ತಾಲೂಕಿಗೆ ಬನವಾಸಿಯನ್ನು ಸರಕಾರ ಸೇರಿಸಲಿದೆ ಎಂಬ ಸುದ್ದಿ ಬೆನ್ನಲ್ಲೇ ಬನವಾಸಿಯಲ್ಲೂ ಹಕ್ಕೊತ್ತಾಯ, ಸಭೆ, ಪ್ರತಿಭಟನೆಗಳೂ ನಡೆದವು.ಬನವಾಸಿ ಸೇರಿದಂತೆ, ಗುಡ್ನಾಪುರ, ಭಾಶಿ, ಅಂಡಗಿ, ದಾಸನಕೊಪ್ಪ, ಬಿಸಲಕೊಪ್ಪ, ಸುಗಾವಿ ಸೇರಿದಂತೆ ಬನವಾಸಿ ಹೋಬಳಿ ಹತ್ತು ಪಂಚಾಯ್ತಿಗಳನ್ನು ಸೇರಿಸಿಕೊಂಡು ತಾಲೂಕು ಕೇಂದ್ರವನ್ನಾಗಿ ರೂಪಿಸಲು ಆಗ್ರಹ ವ್ಯಕ್ತವಾಯಿತು. ಸುಮಾರು 55 ಸಾವಿರ ಜನಸಂಖ್ಯೆ ಇದ್ದರೂ ಎರಡು ಸಾವಿರ ವರ್ಷಗಳಿಗೂ ಅಧಿಕ ಇತಿಹಾಸದ ಊರಿಗೆ ಜನಸಂಖ್ಯೆಗಿಂತ ಆ ಊರಿನ ಐತಿಹಾಸಿಕ ಗೌರವಕ್ಕೆ ಮಾನ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ಆನವಟ್ಟಿಗೆ ಸೇರಿಸುವುದು ಬೇಡ, ನಮಗೇ ಪ್ರತ್ಯೇಕತೆ ಕೊಡಿ, ಪುರಾಣ, ಐತಿಹಾಸಿಕ ಸ್ಥಳವನ್ನು ಅಭಿವೃದ್ಧಿಗೊಳಿಸಿ ಎಂಬ ಬೇಡಿಕೆ ಕೇಳಿ ಬಂದವು.

Advertisement

ಇದಕ್ಕೆ ಪಕ್ಷಾತೀತ ಹೋರಾಟಗಳೂ ನಡೆದವು, ನಡೆಯುತ್ತಲೂ ಇದೆ. ಬನವಾಸಿಗೆ ಅಭಿವೃದ್ಧಿ ಪ್ರಾಧಿಕಾರ ಇದ್ದರೂ ಅದು ಸಕ್ರೀಯವಾಗಿ ಕೆಲಸ ಮಾಡುತ್ತಿಲ್ಲ. ಬನವಾಸಿಗೆ ಅಭಿವೃದ್ಧಿ ಆಗಬೇಕಾದರೂ ಪ್ರಾಚ್ಯ ವಸ್ತು ಇಲಾಖೆಯ ತೊಡಕು ಕೂಡ ಇದೆ. ಬನವಾಸಿ ಸಮಗ್ರ ಅಭಿವೃದ್ಧಿಗೆ ಅನುದಾನ ಕೂಡ ಹೆಚ್ಚಾಗಬೇಕು ಎಂಬುದು ಬನವಾಸಿಗರ ನಿರೀಕ್ಷೆ ಆಗಿದೆ.

 

-ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next