Advertisement

ಬಡ್ತಿ ಮೀಸಲು ಶತಸಿದ್ಧ; ಅಂ.ರಾ.ಸಮ್ಮೇಳನದಲ್ಲಿ ಸಿದ್ದರಾಮಯ್ಯ ನೇರ ಮಾತು

06:00 AM Jul 24, 2017 | Team Udayavani |

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಬಡ್ತಿ ಮೀಸಲಾತಿಯನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದ್ದರೂ ರಾಜ್ಯದಲ್ಲಿ ಮತ್ತೆ ಬಡ್ತಿ ಮೀಸಲಾತಿ ಜಾರಿಗೆ ತಂದೇ ತರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ಕಾಗಿ ಹೇಳಿದ್ದಾರೆ.

Advertisement

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 126ನೇ ಜಯಂತಿ ಅಂಗವಾಗಿ ಜಿಕೆವಿಕೆ ಆವರಣದಲ್ಲಿ ಏರ್ಪಡಿಸಿದ್ದ 3 ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

ಬಡ್ತಿ ಮೀಸಲಾತಿಯನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದ ಬಳಿಕ ಈ ವಿಚಾರವಾಗಿ ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲು ಸರ್ಕಾರ ಉನ್ನತ ಮಟ್ಟದ ಸಮಿತಿ ನೇಮಿಸಿದ್ದು, ಈ ಸಮಿತಿ ಈಗಾಗಲೇ ತನ್ನ ವರದಿ ನೀಡಿದೆ. ಅದರಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಈ ವಿಚಾರದಲ್ಲಿ ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಇರಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಅದರಂತೆ ಮೀಸಲಾತಿ ಕಲ್ಪಿಸಲು ಸರ್ಕಾರ ಬದಟಛಿವಿದೆ. ಇದರ ಜತೆಗೆ ಬಡ್ತಿ ಮೀಸ ಲಾತಿ ವಿಚಾರದಲ್ಲೂ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳಿಗೆ ಅನ್ಯಾಯವಾಗ ದಂತೆ ನೋಡಿಕೊಳ್ಳುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದರು.

ಅಂಬೇಡ್ಕರ್‌ ವಿಚಾರಧಾರೆಗಳಿಗೆ ಗಂಡಾಂತರ: ಗುಲಾಮಗಿರಿಗೆ ತಳ್ಳಲ್ಪಟ್ಟವರ ನೋವನ್ನು ಅಂಬೇಡ್ಕರ್‌ ಅವರು ಅರ್ಥ ಮಾಡಿಕೊಂಡಷ್ಟು ಬೇರೆ ಯಾರೂ ಅರ್ಥ ಮಾಡಿಕೊಂಡಿಲ್ಲ. ಆದರೆ, ಇಂದು ಅಂಬೇಡ್ಕರ್‌ ಅವರ ವಿಚಾರಧಾರೆಗಳಿಗೆ ಯಾವ ರೀತಿಯ ಗಂಡಾಂತರಗಳು ಬಂದಿವೆ? ಅದಕ್ಕೆ ಪರಿಹಾರವೇನು ಎಂಬ ಬಗ್ಗೆ ಅನೇಕರು ಮಾತನಾಡಿದ್ದಾರೆ.

Advertisement

ಇದರಿಂದ ದೇಶದಲ್ಲಿ ಯಾವ ಪರಿಸ್ಥಿತಿ ನಿರ್ಮಾಣ ಆಗಿದೆ? ಇದಕ್ಕೆ ಯಾವ ಶಕ್ತಿ ಕಾರಣ? ಈ ಶಕ್ತಿಗಳ ನಿಯಂತ್ರಣಕ್ಕೆ ಏನು ಮಾಡಬೇಕು? ಎಂಬ ಬಗ್ಗೆ ಸಮ್ಮೇಳನದಲ್ಲಿ ಚರ್ಚೆಯಾಗಿದೆ ಎಂದರು.

ಅಸ್ಪೃಷ್ಯತೆಯ ಅವಮಾನವನ್ನು ನಾನೂ ಅನುಭವಿಸಿದ್ದೇನೆ. ಅವಮಾನವಾದಾಗ ವ್ಯವಸ್ಥೆಯ ಬಗ್ಗೆ ಅಸೂಯೆ, ಸಿಟ್ಟು ಬರುತ್ತದೆ ಎಂದು ಹೇಳಿದರು.

ಗುಲಾಮಗಿರಿಯಲ್ಲಿ ಇರುವವರಿಗೆ ನೀನು ಗುಲಾಮ ಅಂದಾಗಲೇ ಅವನು ಸ್ವಾಭಿಮಾನಿಯಾಗಲು ಸಾಧ್ಯ ಎಂದು ಅಂಬೇಡ್ಕರ್‌ ಹೇಳಿದ್ದರು. ಈ ಮಾತಿನಂತೆ ನಾನು ಅವಮಾನ ಸಹಿಸಿಕೊಂಡು ಸ್ವಾಭಿಮಾನಿಯಾದೆ. ನನ್ನಂತೆ ಅವಮಾನ ಎದುರಿಸಿದವರೂ ಸ್ವಾಭಿಮಾನಿಗಳಾಗುವಂತೆ ಕಾರ್ಯಕ್ರಮ ರೂಪಿಸಿದೆ ಎಂದು ತಿಳಿಸಿದರು.

ಒಂದೆಡೆ, “ಇವನಾರವ ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ’ ಎಂಬ ಬಸವಣ್ಣನವರ ವಚನಗಳನ್ನು ಹೇಳುತ್ತೇವೆ. ನಂತರ ಕಿವಿಯಲ್ಲಿ ನಿಮ್ಮ ಜಾತಿ ಯಾವುದು ಎಂದು ಕೇಳುತ್ತೇವೆ. ಇಂತಹ ವ್ಯವಸ್ಥೆಯಲ್ಲಿ ಜಾತಿ ಬೇರುಗಳು ಸಡಿಲವಾಗಬೇಕಿದೆ. ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಬಿಜೆಪಿ ಬಗ್ಗೆ ವ್ಯಂಗ್ಯ: ಬಿಜೆಪಿ ವಿರುದಟಛಿ ಮತ್ತೆ ಕಿಡಿ ಕಾರಿದ ಸಿದ್ದರಾಮಯ್ಯ, ಬಿಜೆಪಿಯವರು ದಲಿತರ ಮನೆಗಳಿಗೆ ಹೋಗಿ ತಿಂಡಿ ತಿಂದರು. ಆಗ ನಾನು, ತಿಂಡಿ ತಿನ್ನೋದನ್ನು ಬಿಡಿ. ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ದಲಿತರಿಗೆ ನೀಡಿ, ಅವರ ಮನೆಯ ಹೆಣ್ಣು ಮಕ್ಕಳನ್ನು ನೀವು ತಂದುಕೊಂಡು ಸಂಬಂಧ ಬೆಳೆಸಿ ಎಂದು ಹೇಳಿದೆ. ನಂತರ ಅವರು ದಲಿತರ ಮನೆಗೆ ಹೋಗಿ ತಿಂಡಿ ತಿನ್ನುವುದನ್ನೇ ಬಿಟ್ಟರು ಎಂದು ವ್ಯಂಗ್ಯವಾಡಿದರು.

ಬಿಜೆಪಿಯವರು ಡೋಂಗಿತನದ ರಾಜಕಾರಣ ಮಾಡುತ್ತಿದ್ದಾರೆ. ಆದ್ದರಿಂದ ಬಿಜೆಪಿಯ ಅಧಿಕಾರಕ್ಕಾಗಿ ದಲಿತ ಪ್ರೇಮವನ್ನು ನಿಜವಾದ ಅಂಬೇಡ್ಕರ್‌ ವಾದಿಗಳು ಯಾರು ಅಂತ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಎಚ್‌.ಆಂಜನೇಯ, ಡಾ.ಎಚ್‌.ಸಿ.ಮಹದೇವಪ್ಪ, ಟಿ.ಬಿ.ಜಯಚಂದ್ರ, ರಮಾನಾಥ ರೈ, ಯು.ಟಿ.ಖಾದರ್‌, ಕೃಷ್ಣಬೈರೇಗೌಡ, ಸಂಸದ ಕೆ.ಎಚ್‌.ಮುನಿಯಪ್ಪ ಕವಿ ಪ್ರೊ.ಸಿದ್ದಲಿಂಗಯ್ಯ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next