ಬೆಂಗಳೂರು: ಪಾಲಿಕೆಯಿಂದ ಬನ್ನೇರುಘಟ್ಟ ರಸ್ತೆಯಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಅಗಲೀಕರಣ ಕಾಮಗಾರಿಯಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಮೇಯರ್ ಗಂಗಾಂಬಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪಾಲಿಕೆಯ ವತಿಯಿಂದ ಜೆ.ಡಿ.ಮರ ಜಂಕ್ಷನ್‌ನಿಂದ ಕೋಳಿಫಾರಂ ಗೇಟ್‌ವರೆಗಿನ 7.44 ಕಿ.ಮೀ. ಉದ್ದರಸ್ತೆಯನ್ನು 152 ಕೋಟಿ ರೂ. ವೆಚ್ಚದಲ್ಲಿ ವಿಸ್ತರಣೆ ಮಾಡಲಾಗುತ್ತಿದೆ. ಆದರೆ, ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸೋಮವಾರ ಮೇಯರ್ ಸ್ಥಳ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬನ್ನೇರುಘಟ್ಟ ರಸ್ತೆಯಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗಾಗಿ ಪಾಲಿಕೆಯಿಂದ ರಸ್ತೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಈ ಭಾಗದಲ್ಲಿನ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ. ಹೀಗಾಗಿ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ನಿತ್ಯ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಹೀಗಾಗಿ ಮೂರು ಪಥದ ರಸ್ತೆ ನಿರ್ಮಿಸಲು ರಸ್ತೆಯನ್ನು 150 ಅಡಿಯವರೆಗೆ ವಿಸ್ತರಿಸಲಾಗುತ್ತಿದೆ. ಜತೆಗೆ ಪಾದಚಾರಿಗಳ ಸಂಚಾರಕ್ಕಾಗಿ ಎರಡು ಬದಿಯಲ್ಲಿ 3.5 ಮೀಟರ್ ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತಿದೆ. ಇದರೊಂದಿಗೆ ಸ್ಥಳೀಯ ನಿವಾಸಿಗಳ ಬಳಕೆಗಾಗಿ ಸರ್ವೀಸ್ ರಸ್ತೆಗಳನ್ನು ಎರಡು ಬದಿಯಲ್ಲಿ ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರಸ್ತೆ ಅಗಲೀಕರಣಕ್ಕಾಗಿ ಬೇಕಾದ ಜಾಗಕ್ಕೆ ಮಾಲೀಕರಿಗೆ ಟಿಡಿಆರ್ (ಅಭಿವೃದ್ಧಿ ಹಕ್ಕುಗಳ ಹಸ್ತಾಂತರ) ನೀಡಿ ಭೂ ಸ್ವಾಧೀನ ಮಾಡಿಕೊಂಡಿಕೊಳ್ಳಲಾಗಿತ್ತು. ಆದರೆ, ರಸ್ತೆ ಅಗಲೀಕರಣ ಜಾಗದಲ್ಲಿನ ವಿದ್ಯುತ್ ತಂತಿ ಹಾಗೂ ಟ್ರಾನ್ಸ್‌ಫಾರ್ಮ್ಗಳನ್ನು ಬೇರೆಡೆ ಸ್ಥಳಾಂತರಿಸುವ ಕಾರ್ಯ ತಡವಾಗಿದ್ದರಿಂದ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಈಗಾಗಲೇ 4.5 ಕಿ.ಮೀ. ಉದ್ದದ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಒಟ್ಟು 476 ಆಸ್ತಿಗಳನ್ನು (ಗೊಟ್ಟಿಗೆರೆ ಹೊರತುಪಡಿಸಿ) ತೆರವುಗೊಳಿಸಲು ಗುರುತಿಸಲಾಗಿದೆ. ಅದರಂತೆ ಕೂಡಲೇ ಮಾಲೀಕರಿಗೆ ಟಿಡಿಆರ್ ನೀಡಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಗಂಗಾಂಬಿಕೆ ಹೇಳಿದರು.